ಪ್ರಜ್ವಲ್ ರೇವಣ್ಣನಿಂದ ಸಂತ್ರಸ್ತರಾದ ಮಹಿಳೆಯರಿಗೆ ಧೈರ್ಯ ತುಂಬಿಲ್ಲ ಏಕೆ?: ಅಮಿತ್ ಶಾಗೆ ಕಾಂಗ್ರೆಸ್ ಪ್ರಶ್ನೆ
ಜಾಗತಿಕ ಮಟ್ಟದಲ್ಲಿ ಈ ಪ್ರಕರಣ ಸದ್ದು ಮಾಡಿದ್ದರೂ ದೇಶದ ಗೃಹಸಚಿವರಾಗಿ ತಮ್ಮ ಹೊಣೆಗಾರಿಕೆ ಪ್ರದರ್ಶಿಸಿಲ್ಲವೇಕೆ? ಎಂದು ಅಮಿತ್ ಶಾ ಅವರಿಗೆ ಪ್ರಶ್ನೆ ಮಾಡಿದ ಕರ್ನಾಟಕ ಕಾಂಗ್ರೆಸ್
ಬೆಂಗಳೂರು(ಮೇ.01): ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರು ಕರ್ನಾಟಕದಲ್ಲಿದ್ದಾರೆ, ಪಾಪ, ಅವರೇ ಹೇಳಿಕೊಂಡಂತೆ ಅವರಿಗೆ ನಾರಿಶಕ್ತಿ, ಮಾತೃಶಕ್ತಿಯ ಬಗ್ಗೆ ಬಹಳ ಗೌರವವಿದೆಯಂತೆ!. ಅವರ ಪಕ್ಷ ಬಿಜೆಪಿಯೇ ಬೆಂಬಲಿಸಿದ ಅಭ್ಯರ್ಥಿ ಪ್ರಜ್ವಲ್ ರೇವಣ್ಣನಿಂದ ಸಂತ್ರಸ್ತರಾದ ಮಹಿಳೆಯರು ತೀವ್ರ ಆತಂಕ, ನೋವಿನಲ್ಲಿದ್ದಾರೆ, ನಾರಿಶಕ್ತಿಯ ಬಗ್ಗೆ ಗೌರವ ಇರುವ ಅಮಿತ್ ಶಾ ಅವರು ಪೆನ್ ಡ್ರೈವ್ ಪ್ರಕರಣದ ಸಂತ್ರಸ್ತೆಯರನ್ನು ಭೇಟಿಯಾಗಿ ಧೈರ್ಯ ತುಂಬಿಲ್ಲ ಏಕೆ? ಎಂದು ಅಮಿತ್ ಶಾ ಅವರಿಗೆ ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.
ಇಂದು(ಬುಧವಾರ) ತಮ್ಮ ಅಧಿಕೃತ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್, ಜಾಗತಿಕ ಮಟ್ಟದಲ್ಲಿ ಈ ಪ್ರಕರಣ ಸದ್ದು ಮಾಡಿದ್ದರೂ ದೇಶದ ಗೃಹಸಚಿವರಾಗಿ ತಮ್ಮ ಹೊಣೆಗಾರಿಕೆ ಪ್ರದರ್ಶಿಸಿಲ್ಲವೇಕೆ? ಎಂದು ಅಮಿತ್ ಶಾ ಅವರಿಗೆ ಪ್ರಶ್ನೆ ಮಾಡಿದೆ.
ಪ್ರಜ್ವಲ್ ರೇವಣ್ಣ ಬೇಲ್‌ಗೆ ಅಪ್ಲೈ ಮಾಡಿಲ್ಲ; ವಿಚಾರಣೆಗೆ ಹಾಜರಾಗ್ತೀನಿ ಎಂದಿದ್ದಾರೆ: ವಕೀಲ ಅರುಣ್ ಮಾಹಿತಿ
ಪ್ರಜ್ವಲ್ ರೇವಣ್ಣನ ಪ್ರಕರಣದ ಬಗ್ಗೆ ಮೊದಲು ಮಾಹಿತಿ ಸಿಕ್ಕಿದ್ದೇ ಅಮಿತ್ ಶಾ ಅವರಿಗೆ, ಹೀಗಿದ್ದೂ ನಿಷ್ಕ್ರೀಯರಾಗಿ ಕುಳಿತು ಮಹಿಳೆಯರ ಮಾನ ಹರಾಜು ಆಗಲು ಅವಕಾಶ ನೀಡಿದ್ದಕ್ಕೆ ಸಂತ್ರಸ್ತರನ್ನು ಸಂತೈಸುವ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ನಾರಿ ಶಕ್ತಿ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ನಿಜಕ್ಕೂ ಮಹಿಳೆಯರ ಮೇಲೆ ಗೌರವವಿದ್ದರೆ ಮೊದಲು ಸಂತ್ರಸ್ತರ ಮನೆಗೆ ಹೋಗಿ ಆ ಮಹಿಳೆಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.