ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಕೈಹಿಡಿದ ಮಾಜಿ ವಿಧಾನ ಪರಿಷತ್‌ ಸದಸ್ಯ ಬಿಎಂಎಲ್‌ ಕಾಂತರಾಜು ಔತಣಕೂಟದ ನೆಪದಲ್ಲಿ ಕ್ಷೇತ್ರದ ಮುಂದಿನ ರಾಜಕೀಯ ಬದಲಾವಣೆ ಸೂಚನೆಯಂತೆ ಪ್ರಮುಖ ನಾಯಕರ ಶಕ್ತಿ ಪ್ರದರ್ಶನ

 ದಾಬಸ್‌ಪೇಟೆ (ಅ.04): ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಕೈಹಿಡಿದ ಮಾಜಿ ವಿಧಾನ ಪರಿಷತ್‌ ಸದಸ್ಯ ಬಿಎಂಎಲ್‌ ಕಾಂತರಾಜು ಔತಣಕೂಟದ ನೆಪದಲ್ಲಿ ಕ್ಷೇತ್ರದ ಮುಂದಿನ ರಾಜಕೀಯ ಬದಲಾವಣೆ ಸೂಚನೆಯಂತೆ ಪ್ರಮುಖ ನಾಯಕರ ಶಕ್ತಿ ಪ್ರದರ್ಶನ ಮಾಡಿದ್ದು ತಾಲೂಕಿನಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ.

ನೆಲಮಂಗಲ ತಾಲೂಕಿನ ಖಾಸಗಿ ಫಾರಂ ಹೌಸ್‌ನಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಬಿಎಂಎಲ್‌ ಕಾಂತರಾಜು ಆಯೋಜಿಸಿದ್ದ ಬಿಎಂಎಲ್‌ ಅಭಿಮಾನಿಗಳ ಔತಣಕೂಟ ಸಮಾರಂಭದಲ್ಲಿ ಪ್ರಮುಖ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.

ವಿಧಾನ ಪರಿಷತ್‌ ಮಾಜಿ ಸದಸ್ಯ ಬಿಎಂಎಲ್‌ ಕಾಂತರಾಜು ಮಾತನಾಡಿ, ನಾನು 100ರಿಂದ 150 ಜನರಿಗೆ ಕರೆ ಮಾಡಿ ತಿಳಿಸಿದ್ದೆ. ಆದರೆ ಈ ಜನಸಾಗರ ನೋಡಿ ತುಂಬಾ ಸಂತೋಷವಾಗಿದೆ. ನಮ್ಮ ತಂದೆ ಬಿಎಂಎಲ್‌ ಕೃಷ್ಣಪ್ಪ ಅವರ ಮೇಲಿನ ಗೌರವ, ನಮ್ಮ ಕುಟುಂಬದ ಮೇಲಿನ ನಿಮ್ಮ ಅಭಿಮಾನಕ್ಕೆ ನಾನು ಎಂದೆಂದಿಗೂ ಚಿರ ಋುಣಿಯಾಗಿರುತ್ತೇನೆ. ಟಿ.ಬೇಗೂರು ಜಿಪಂ ಚುನಾವಣೆಯಲ್ಲಿ (Election) ನನ್ನನ್ನು ಗೆಲ್ಲಿಸಿದ್ದೀರಾ, ಆಗಲೂ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ನೀವೆಲ್ಲ ಮುಂದೆಯೂ ನಮ್ಮ ಬೆಂಬಲಕ್ಕೆ ನಿಲ್ಲುತ್ತೀರೆಂಬ ನಂಬಿಕೆ ನನಗಿದೆ ಎಂದರು.

ಬಿಎಂಎಲ್‌ ನಿಷ್ಠರು:ಜೆಡಿಎಸ್‌ (JDS) ತಾಲೂಕು ಮಾಜಿ ಅಧ್ಯಕ್ಷ ಎನ್‌.ಪಿ.ಹೇಮಂತ್‌ಕುಮಾರ್‌, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಪಟ್ಟಾಭಿರಾಮಯ್ಯ, ಬರಗೇನಹಳ್ಳಿ ಪರಮೇಶ್‌ ಮತ್ತಿತರರು ಮಾತನಾಡಿ, ನಾವೆಲ್ಲಾ ಬಿಎಂಎಲ್‌ ಕೃಷ್ಣಪ್ಪ ಅವರ ಮುಖಂಡತ್ವದಲ್ಲಿ ರಾಜಕಾರಣ ಮಾಡಿದ್ದೇವೆ. ಅವರ ಬಳಿಕ ಬಿಎಂಎಲ್‌ ಕಾಂತರಾಜು ನಾಯತ್ವವನ್ನು ಒಪ್ಪಿಕೊಂಡು ಬಿಎಂಎಲ್‌ ಕುಟುಂಬಕ್ಕೆ ನಿಷ್ಠರಾಗಿದ್ದೇವೆಂದರು.

ಈ ವೇಳೆ ಜಿಪಂ ಮಾಜಿ ಸದಸ್ಯ ತ್ಯಾಮಗೊಂಡ್ಲು ಟಿ.ಆರ್‌.ರಾಜಣ್ಣ, ಪುರಸಭೆ ಮಾಜಿ ಅಧ್ಯಕ್ಷರಾದ ಎ.ಪಿಳ್ಳಪ್ಪ, ಎಂ.ನಾರಾಯಣ್‌ಗೌಡ, ಎಪಿಎಂಸಿ ನಿರ್ದೇಶಕ ಗಂಗಣ್ಣ, ಮಾಚನಹಳ್ಳಿ ಜಯಣ್ಣ, ಕೋಡಪ್ಪನಳ್ಳಿ ವೆಂಕಟೇಶ್‌, ಹುರಳಿಹಳ್ಳಿ ಮಂಜುನಾಥ್‌, ಬಿಜಿ.ವಾಸು, ಲಕ್ಷ್ಮೀಕಾಂತ್‌, ವೆಂಕಟೇಶ್‌, ಡಿ.ಅರ್ಜುನ್‌, ಬೆಟ್ಟೇಗೌಡ, ಮಲ್ಲರಬಾಣವಾಡಿ ರುದ್ರೇಶ್‌, ಚಂದ್ರಣ್ಣ, ಬೂದಿಹಾಳ್‌ ಮಂಜುನಾಥ್‌ಗೌಡ, ಎನ್‌.ಪಿ.ರಘುನಾಥ್‌ ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಂಗ್ರೆಸ್ ಸೇರಿದ ಕಾಂತರಾಜು :

ಜೆಡಿಎಸ್‌ನ(JDS) ಮತ್ತೊಂದು ಪ್ರಮುಖ ವಿಕೆಟ್ ಪತನವಾಗಿದೆ. ಜೆಡಿಎಸ್ ನಾಯಕ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಬೆಮಲ್ ಕಾಂತರಾಜು(Beml Kantharaju) ಕಾಂಗ್ರೆಸ್(congress) ಸೇರ್ಪಡೆಯಾದರು.

ಕೆಪಿಸಿಸಿ ಕಚೇರಿಯಲ್ಲಿ ಇಂದು(ಶುಕ್ರವಾರ ) ಡಿ.ಕೆ.ಶಿವಕುಮಾರ್​, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್​, ಟಿ.ಬಿ.ಜಯಚಂದ್ರ ಸೇರಿದಂತೆ ಮತ್ತಿತರರ ಸಮ್ಮುಖದಲ್ಲಿ ಬೆಮೆಲ್​ ಕಾಂತರಾಜು ಪಕ್ಷ ಸೇರ್ಪಡೆಯಾದರು.

ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಕಾಂತರಾಜು, ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಪಕ್ಷ ಸೇರ್ಪಡೆಗೊಂಡಿದ್ದೇನೆ. ದೇಶಕ್ಕಾಗಿ ಏನಾದರೂ ಮಾಡಬೇಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲೂ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು. 

Karnataka Politics ಗುತ್ತಿಗೆದಾರರಿಂದ 1 ರೂ ಪಡೆದಿಲ್ಲ, ಸಾಬೀತು ಪಡಿಸಿದ್ರೆ ರಾಜಕೀಯದಿಂದ ನಿವೃತ್ತಿ, ಸಿದ್ದು ಸವಾಲ್

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ದೇವರು ಮತ್ತು ಶಾಸ್ತ್ರದಲ್ಲಿ ನಂಬಿಕೆ ಇರವುದರಿಂದ ಕಾಂತರಾಜ್ ಪಕ್ಷ ಸೇರ್ಪಡೆ ತಡವಾಗಿದೆ. ಪ್ರತಿ ರಾಜಕೀಯ ಪಕ್ಷಕ್ಕೆ ಒಂದೊಂದು ಸಿದ್ಧಾಂತ ಇರುತ್ತದೆ. ಸಿದ್ಧಾಂತ ಇಲ್ಲ ಅಂದರೆ ಅದು ರಾಜಕೀಯ ಪಕ್ಷವೇ ಇಲ್ಲ. ಜೆಡಿಎಸ್‌ಗೆ ಸಿದ್ಧಾಂತ ಇಲ್ಲ. ಅವಕಾಶವಾದಿ ರಾಜಕಾರಣ ಮಾಡುವ ಪಕ್ಷ. ದೇಶದಲ್ಲಿ ಸಿದ್ಧಾಂತ, ಕಾರ್ಯಕ್ರಮದ ಆಧಾರದ ಮೇಲೆ ರಾಜಕೀಯ ಮಾಡುತ್ತಿದ್ದರೆ ಅದುವೆ ಕಾಂಗ್ರೆಸ್ ಮಾತ್ರ. ಬಿಜೆಪಿ ಪಕ್ಷವು ಆರ್​ಎಸ್‌ಎಸ್ ಮುಖವಾಡ. ಬಿಜೆಪಿಗೆ ರಾಜಕೀಯ ಸಿದ್ಧಾಂತ ಇಲ್ಲ. ದೇವರು, ಧರ್ಮ, ಭಾವನಾತ್ಮಕ ವಿಚಾರ ಇಟ್ಟು ಜನರನ್ನು ಮತಾಂಧರನ್ನಾಗಿ ಮಾಡಿ ಅವರ ಹಿಡನ್ ಅಜೆಂಡಾವನ್ನು ಜಾರಿ ಮಾಡಲು ಪ್ರಯತ್ನಿಸುವ ಪಕ್ಷ ಎಂದು ಟೀಕಿಸಿದರು.

ಹಿಂದೂ ರಾಷ್ಟ್ರ ಮಾಡಬೇಕೆಂಬುದು ಬಿಜೆಪಿ ಅಜೆಂಡಾ. ಬಹುತ್ವ ಇರುವ ಭಾರತವನ್ನು ಒಂದು ಧರ್ಮದ ರಾಷ್ಟ್ರ ಮಾಡಲು ಸಾಧ್ಯವಿಲ್ಲ‌. ಸಂವಿಧಾನದಲ್ಲೂ ಹೇಳಿಲ್ಲ. ಸಂವಿಧಾನದಲ್ಲಿ ಸಹಿಷ್ಣುತೆ ಪದ ಬಳಕೆ ಮಾಡಿದೆ. ಅದಕ್ಕೆ ಹೆಚ್ಚು ಪ್ರಾಧಾನ್ಯತೆ ಇರಬೇಕು. ಇದಕ್ಕೆ ವಿರುದ್ಧವಾಗಿದ್ದು ಬಿಜೆಪಿಯವರು. ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಜೆಡಿಎಸ್ ನನಗೆ ಎಲ್ಲವನ್ನೂ ಕೊಟ್ಟಿದೆ. ನನಗೇನೂ ದ್ರೋಹ ಮಾಡಿಲ್ಲ. ರಾಜಕೀಯ ಅಸ್ತಿತ್ವಕ್ಕಾಗಿ ತುರುವೇಕೆರೆ ಕ್ಷೇತ್ರದಲ್ಲಿ ಸಂಘಟನೆ ಮಾಡುತ್ತಿದ್ದೇನೆ. ಕಾಂಗ್ರೆಸ್ ವರಿಷ್ಠರು ಇದನ್ನು ಗುರುತಿಸಿ ಪಕ್ಷ ಸೇರುವಂತೆ ಆಹ್ವಾನಿಸಿದ್ದಾರೆ ಎಂದು ಕಳೆದ ನಾಲ್ಕೂವರೆ ತಿಂಗಳ ಹಿಂದೆಯೇ ಕಾಂತರಾಜು ಹೇಳಿದ್ದರು. ಆ ಮೂಲಕ ಅವರು ತಮ್ಮ ರಾಜಕೀಯ ಭವಿಷ್ಯದ ಹಿನ್ನೆಲೆ ಕಾಂಗ್ರೆಸ್​ ಸೇರುವ ಸುಳಿವು ಕೊಟ್ಟಿದ್ದರು.

ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಬೆಮಲ್ ಕಾಂತರಾಜು ಜೆಡಿಎಸ್ ಪಕ್ಷ ತೊರೆಯುವುದಾಗಿ ಹಲವು ದಿನಗಳ ಹಿಂದೆಯೇ ಘೋಷಣೆ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.