Asianet Suvarna News Asianet Suvarna News

ದೇಶ ಒಡೆದ ಕಾಂಗ್ರೆಸ್‌ನಿಂದ ಭಾರತ್‌ ಜೋಡೋ: ನಾರಾಯಣಸ್ವಾಮಿ

ಕರ್ನಾಟಕ ಪ್ರವೇಶಿಸಿರುವ ಜೋಡೋ ಯಾತ್ರೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಜೋಡಿಸುವ ಕೆಲಸ ಮಾಡುತ್ತದಾ?: ಛಲವಾದಿ ನಾರಾಯಣಸ್ವಾಮಿ 

Chalavadi Narayanaswamy Slams Congress grg
Author
First Published Oct 2, 2022, 2:30 AM IST

ಬೆಂಗಳೂರು(ಅ.02): ಭಾರತವನ್ನೇ ಇಬ್ಭಾಗ ಮಾಡಿದ ಕಾಂಗ್ರೆಸ್‌ ಇದೀಗ ಭಾರತ್‌ ಜೋಡಿಸಲು ಹೊರಟಿರುವುದು ಹಾಸ್ಯಾಸ್ಪದ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ, ಬಾಂಗ್ಲಾದೇಶ ಇಬ್ಭಾಗ ಮಾಡಿದವರು ಯಾರು? ನಿಮ್ಮ ಕುಟುಂಬವೇ ಭಾರತವನ್ನು ಇಬ್ಬಾಗ ಮಾಡಿ ಇದೀಗ ಇರುವ ಭಾರತವನ್ನು ಜೋಡಿಸಲು ಹೊರಟ್ಟಿದ್ದೀರಿ. ಇದು ಯಾವ ರಾಜಕೀಯಕ್ಕೆ ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಏನು ಪ್ಲಾನ್‌ ಮಾಡುತ್ತಿದೆ ಎನ್ನುವುದು ಭಯೋತ್ಪಾದಕರಿಗೆ ತಿಳಿಯುತ್ತಿತ್ತು. ಭಯೋತ್ಪಾದಕರನ್ನು ಕರೆಸಿ ಕಾಂಗ್ರೆಸ್‌ ಪ್ರಧಾನ ಮಂತ್ರಿಗಳೇ ಕೈಕುಲುಕಿದ್ದರು. ಆದರೆ ಈಗ ಎನ್‌ಡಿಎ ಸರ್ಕಾರ ಭಯೋತ್ಪಾದಕರಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದೆ. ಭಾರತ ವಿರೋಧಿ ಚಟುವಟಿಕೆ ಮಾಡುವವರಿಗೂ ತಕ್ಕ ಶಾಸ್ತಿ ಮಾಡುತ್ತಿದೆ ಎಂದರು.

ಬಿಜೆಪಿ ಮಾಡಿದ ಉತ್ತಮ ರಸ್ತೆಯಲ್ಲಿ ಕಾಂಗ್ರೆಸ್ ಯಾತ್ರೆ ಸಾಗಲಿ, ಫ್ಲೆಕ್ಸ್ ಹರಿದ ಆರೋಪಕ್ಕೆ ಛಲವಾದಿ ತಿರುಗೇಟು!

ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಚಚ್‌ರ್‍, ಮಸೀದಿಗೆ ಭೇಟಿ ನೀಡಿದ್ದರು. ದೇವಸ್ಥಾನಕ್ಕೆ ಹೋಗಿಲ್ಲ. ಹಲವು ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ್ದಾರೆ. ಆದರೆ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿಲ್ಲ. ಪಾಕಿಸ್ತಾನ ಜಿಂದಾಬಾದ್‌ ಎಂದವರನ್ನು ಮತ್ತು ಭಾರತವನ್ನೇ ತೆಗಳಿದ ಕ್ರೈಸ್ತ ಮಿಷನರಿಗಳನ್ನು ವಿರೋಧಿಸುವ ಬದಲು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ಇದೀಗ ಕರ್ನಾಟಕ ಪ್ರವೇಶಿಸಿರುವ ಜೋಡೋ ಯಾತ್ರೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಜೋಡಿಸುವ ಕೆಲಸ ಮಾಡುತ್ತದಾ? ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್‌ 370 ಕುರಿತು ಅಂಬೇಡ್ಕರ್‌ ಸ್ಪಷ್ಟವಾಗಿ ಹೇಳಿದ್ದರು. ಆದರೆ ಹೆಸರಿಗೆ ಮಾತ್ರ ಅಂಬೇಡ್ಕರ್‌ ಎಂದು ಹೇಳುವ ಕಾಂಗ್ರೆಸ್‌ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಕೆಲಸ ಮಾಡಿತು. ಆದರೆ ನರೇಂದ್ರ ಮೋದಿ ಆರ್ಟಿಕಲ್‌ 370 ರದ್ದು ಮಾಡಿ ದೇಶವನ್ನು ಒಗ್ಗೂಡಿಸಿದ್ದಾರೆ. ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅರ್ಟಿಕಲ್‌ 370 ವಾಪಸ್‌ ಪಡೆಯುವುದಾಗಿ ಹೇಳಿದೆ. ಈ ಮೂಲಕ ಮತ್ತೆ ಭಾರತವನ್ನು ವಿಭಜಿಸುವ ಕೆಲಸಕ್ಕೆ ಕಾಂಗ್ರೆಸ್‌ ಯತ್ನಿಸುತ್ತಿದೆ ಎಂದು ಆರೋಪಿಸಿದರು.
 

Follow Us:
Download App:
  • android
  • ios