ಚಾಮರಾಜನಗರ(ಡಿ.22): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ತಿದ್ದುಪಡಿ ಸ್ವತಂತ್ರ ಭಾರತದ ಒಂದು ಕರಾಳ ಮಸೂದೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಇದರ ಮೂಲಕ ದೇಶ ವಿಭಜನೆ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಂಸದ, ಕಾಂಗ್ರೆಸ್‌ ವಕ್ತಾರ ಆರ್‌. ಧ್ರುವನಾರಾಯಣ ಆರೋಪಿಸಿದ್ದಾರೆ.

ಚಾಮರಾಜನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜಾತ್ಯತೀತ ಹಿನ್ನೆಲೆ ಹೊಂದಿರುವ ಭಾರತವನ್ನು ಧರ್ಮಾಧಾರಿತವಾಗಿ ವಿಭಜನೆ ಮಾಡುವ ಮೂಲಕ ಅಂತಾರಾಷಿತ್ರೕಯ ಮಟ್ಟದಲ್ಲಿ ಇತರೆ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡುತ್ತಿದೆ ಎಂದಿದ್ದಾರೆ.

ಸೂರ್ಯಗ್ರಹಣ: ಬರಿಗಣ್ಣಿನ ವೀಕ್ಷಣೆ ಅಪಾಯ, ಗ್ರಹಣ ನೋಡುವುದು ಹೇಗೆ..?

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ದೇಶದ ಭದ್ರತೆ ಹಾಗೂ ಅಭಿವೃದ್ಧಿಪರ ಚಿಂತನೆ ಮಾಡುವ ಬದಲು ಧರ್ಮ ಆಧಾರಿತ ರಾಜಕಾರಣ ಮಾಡಿ ದೇಶದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಮಾಡುತ್ತಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್‌ ಹೋರಾಟ ಮಾಡುತ್ತಿವೆ. ನಮ್ಮ ಪಕ್ಷ ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರ ಪರವಾದ ಹೋರಾಟವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಇದರ ಹೊರತಾಗಿ ಯಾವುದೇ ರೀತಿಯ ಮುಲಾಜಿಗೆ ಒಳಗಾಗುವುದಿಲ್ಲ. ಪಕ್ಷದ ಸಂಘಟನೆ ನಮ್ಮ ಗುರಿಯಾಗಬೇಕು ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ 5 ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಶಾಂತಿ ನೆಲೆಸಿತ್ತು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಗೋಲಿಬಾರ್‌ ನಡೆಯಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಗೋಲಿಬಾರ್‌ ನಡೆಸುತ್ತಿದೆ. ಹಿಂದೆಯೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಗೋಲಿಬಾರ್‌ ನಡೆದಿತ್ತು ಎಂದವರು ಹೇಳಿದ್ದಾರೆ.

ಮೂರು ಕೊಠಡಿಯಲ್ಲಿ ನೂರು ಮಕ್ಕಳಿಗೆ ಪಾಠ, 8 ತರಗತಿಗಳ ಮಕ್ಕಳು ಮೂರೇ ಕೋಣೆಯಲ್ಲಿ..!

ಮಾಜಿ ಸಚಿವ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ಆರ್‌. ನರೇಂದ್ರ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮರಿಸ್ವಾಮಿ, ಚುಡಾ ಮಾಜಿ ಅಧ್ಯಕ್ಷ ಸೈಯದ್‌ ರಫೀ ಇದ್ದರು.

ಬೆಂಕಿ ಹಚ್ಚುವುದು ಅವರೇ ಹೊರತು ನಾವಲ್ಲ

ಬೆಂಕಿ ಹಚ್ಚುವುದು ಅವರೇ ಹೊರತು ನಾವಲ್ಲ ಎಂದು ಮೈಸೂರು ಸಂಸದ ಪ್ರತಾಪ್‌ ಸಿಂಹಗೆ ಮಾಜಿ ಸಂಸದ ಹಾಗೂ ಕಾಂಗ್ರೆಸ್‌ ವಕ್ತಾರ ಆರ್‌. ಧ್ರುವನಾರಾಯಣ ತಿರುಗೇಟು ನೀಡಿದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್‌ ಸಿಂಹ ಅವರನ್ನು ಎಷ್ಟುಪ್ರತಿಭಟನೆ ನಡೆಸಿದ್ದೀಯಾ, ಎಷ್ಟುಬಸ್‌ಗಳಿಗೆ ಬೆಂಕಿ ಹಚ್ಚಿದ್ದೀಯ ಎಂದು ಅಮಿತ್‌ ಶಾ ಕೇಳಿದ್ದರಂತೆ. ಸ್ವತಃ ಪ್ರತಾಪ್‌ ಸಿಂಹ ತಮ್ಮ ಹೇಳಿಕೆ ವಿಡಿಯೋ ವನ್ನು ವೈರಲ್‌ ಮಾಡಿದ್ದರು. ಹಾಗಾಗಿ ಬೆಂಕಿ ಹಚ್ಚುವವರು ಅವರೇ ಹೊರತು ನಾವಲ್ಲ. ಬಿಜೆಪಿ ಸರ್ಕಾರ ಕರಾಳ ಮಸೂದೆಗಳನ್ನು ತಂದು ಹಿಂಸಾಚಾರ ಭುಗಿಲೇಳುವಂತೆ ಮಾಡುತ್ತಿದೆ ಧ್ರುವನಾರಾಯಣ ಆರೋಪಿಸಿದ್ದಾರೆ.