ಚಾಮರಾಜನಗರ(ಡಿ.22): ಶಿಲಾನ್ಯಾಸ, ಗುದ್ದಲಿಪೂಜೆ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಚಾಲನೆ ತೋರುವಲ್ಲಿ ಆಸಕ್ತಿ ತಳೆಯುವ ಸರ್ಕಾರ ಹಾಗೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಾವು ಚಾಲನೆ ನೀಡಿದ ಕಾಮಗಾರಿ ಎಷ್ಟರ ಮಟ್ಟಿಗೆ ಸಾಗಿದೆ. ಮುಗಿದಿದೆ ಎಂದು ಪರಿಶೀಲಿಸದೆ, ದಿಟ್ಟಕ್ರಮ ಕೈಗೊಳ್ಳದೆ ಕೈಚಲ್ಲಿ ಕುಳಿತರೆ ಏನಾಗಲಿದೆ ಎಂಬುದಕ್ಕೆ ಹನೂರು ತಾಲೂಕಿನ ಲೊಕ್ಕನಹಳ್ಳಿ ಜಿಪಂ ವ್ಯಾಪ್ತಿಯ ಬೈಲೂರು ಶಾಲಾ ಕಟ್ಟಡ ಜ್ವಲಂತ ಉದಾಹರಣೆಯಾಗಿದೆ.

ಹೌದು, ಈ ಕಾಮಗಾರಿಗೆ 2013ನೇ ಸಾಲಿನಲ್ಲಿ ಶಾಸಕ ಆರ್‌. ನರೇಂದ್ರ ಅವರು ಖುದ್ದು ಚಾಲನೆ ನೀಡಿದರು. ಪ್ರೌಢಶಾಲಾ ಮಕ್ಕಳ ಅನುಕೂಲಕ್ಕಾಗಿ ಈ ಶಾಲೆ ನಿರ್ಮಾಣವಾಗಲಿ ಎಂದು ಅನುದಾನ ಮಂಜೂರು ಮಾಡಿಸಿಕೊಂಡು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸಹ ಸೂಚಿಸಿದ್ದರು. ಆದರೆ ಈ ಕಾಮಗಾರಿ ಪ್ರಾರಂಭವಾಗಿ 5 ವರ್ಷವಾಗಿದೆ. ಶೇಕಡ 90ರಷ್ಟುಪೂರ್ಣಗೊಂಡು ನಾಲ್ಕು ವರ್ಷಗಳೆ ಸಂದಿದೆ. ಆದರೆ ಸಂಬಂಧಪಟ್ಟಗುತ್ತಿಗೆದಾರರು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇನ್ನೂ ಸಹ ಕಾಮಗಾರಿ ಬಾಕಿ ಇದೆ ಎಂಬ ನೆಪವೊಡ್ಡಿ ಶಿಕ್ಷಣ ಇಲಾಖೆಗೆ ಕಟ್ಟಡ ಹಸ್ತಾಂತರಿಸಿದ ಕಾರಣ ಇನ್ನೂ ಈ ಶಾಲಾ ಕಟ್ಟಡ ಉದ್ಘಾಟನೆ ಭಾಗ್ಯ ಕಂಡಿಲ್ಲ.

ನೀರು, ವಿದ್ಯುತ್‌ ಕಾಮಗಾರಿ ಬಾಕಿ:

ಕಟ್ಟಡದ ಶೇಕಡ 90ರಷ್ಟುಕಾಮಗಾರಿ ಮುಗಿದು ನಾಲ್ಕು ವರ್ಷಗಳೇ ಸಂದಿದೆ ಎನ್ನಲಾಗುತ್ತಿದೆ. ಆದರೆ ಇನ್ನೂ ವಿದ್ಯುತ್‌ ಸಂಪರ್ಕ, ಕುಡಿಯುವ ನೀರು ಪೂರೈಕೆ ಸೇರಿದಂತೆ ಸಣ್ಣ ಕೆಲಸಗಳಷ್ಟೆಬಾಕಿ ಉಳಿದಿವೆ. ಅಂದಾಜಿನ ಪ್ರಕಾರ 50 ಸಾವಿರ ಅಂದಾಜಿನ ಕಾಮಗಾರಿ ಮಾತ್ರ ಬಾಕಿ ಇದೆ ಎಂದೇ ಚರ್ಚೆಯಾಗುತ್ತಿವೆ.

ಹೀಗಾಗಿ ಕಟ್ಟಡ ಮಕ್ಕಳ ಉಪಯೋಗಕ್ಕೆ ಲಭ್ಯವಾಗಿಲ್ಲ. ಬೈಲೂರು ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ತರಗತಿಗಳು ಪ್ರಾಥಮಿಕ ಶಾಲೆಯ ಕೊಠಡಿಗಳಲ್ಲಿ ನಡೆಯುತ್ತಿದೆ. ಎರಡು ತರಗತಿಗಳು ಇಲ್ಲೆ ನಡೆಯುತ್ತಿರುವುದರಿಂದ ಜಾಗದ ಹಾಗೂ ಕೊಠಡಿಗಳ ಸಮಸ್ಯೆ ಇದೆ. ಸಮಸ್ಯೆ ಮನಗಂಡು ಇಲ್ಲಿ ಪ್ರೌಢಶಾಲೆಗೆ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಿದ್ದರೂ ಅದು ಇನ್ನು ಸಹ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಮಕ್ಕಳ ಉಪಯೋಗಕ್ಕೆ ಬಂದಿಲ್ಲ.

ತುಂಡು ಗುತ್ತಿಗೆ ಅವಾಂತರದಿಂದ ಅದ್ವಾನ:

ರಾಜ್ಯಮಟ್ಟದಲ್ಲೆ 75 ಲಕ್ಷ ಅಂದಾಜಿನ ಈ ಕಾಮಗಾರಿಯನ್ನು ಖಾಸಗಿ ಕಂಪನಿಯೊಂದಕ್ಕೆ ಸರ್ಕಾರ ಟೆಂಡರ್‌ ನೀಡಿದೆ. ಟೆಂಡರ್‌ ಪಡೆದ ಖಾಸಗಿ ಕಂಪನಿ ತುಂಡು ಗುತ್ತಿಗೆ ನೀಡಿದ ಪರಿಣಾಮ ತುಂಡು ಗುತ್ತಿಗೆ ಪಡೆದವರು ಕಾಮಗಾರಿ ಶೇಕಡ 90ರಷ್ಟುಪೂರ್ಣಗೊಳಿಸಿ, ಶೇಕಡ 10ರಷ್ಟುಉಳಿಸಿ ಸುಮ್ಮನಾಗಿದ್ದಾರೆ. ಹೇಗೊ ಇಲಾಖೆಗೆ ಹಸ್ತಾಂತರಿಸಿ ಕೈತೊಳೆದುಕೊಳ್ಳುವ ತಂತ್ರಗಾರಿಕೆ ತುಂಡು ಗುತ್ತಿಗೆ ಪಡೆದವರಾಗಿದೆ. ಉನ್ನತ ಮೂಲಗಳ ಮಾಹಿತಿ ಪ್ರಕಾರ ಶಾಸಕರೇ ಈ ಕಾಮಗಾರಿ ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಿಸಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಭಾರತದಲ್ಲಿ ಹೊಂದಾಣಿಕೆ ಸಾಧ್ಯವಿಲ್ಲಾಂದ್ರೆ ಪಾಕ್‌ಗೆ ಹೋಗಬಹುದು ಎಂದ ಶಾಸಕ

ಶಿಕ್ಷಣ ಇಲಾಖೆ ಸಹ ಹಲವು ಬಾರಿ ಕಾಮಗಾರಿ ಅಪೂರ್ಣಗೊಂಡಿದೆ. ಇನ್ನೂ ಸಹ ನೀರು, ವಿದ್ಯುತ್‌ ಸಂಪರ್ಕ ಆಗಿಲ್ಲ, ಪೂರ್ಣಗೊಳಿಸಿ ಇಲಾಖೆಗೆ ಕಟ್ಟಡ ಹಸ್ತಾಂತರಿಸಿ ಎಂದು ಹಲವು ಬಾರಿ ಸರ್ಕಾರಕ್ಕೆ, ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದರೂ ಪರಿಹಾರ ಮಾತ್ರ ದೊರೆತಿಲ್ಲ. ಇನ್ನಾದರೂ ಸಂಬಂಧಪಟ್ಟಶಾಸಕರು, ಶಿಕ್ಷಣ ಸಚಿವರು ಹಾಗೂ ಜಿಲ್ಲಾಡಳಿತ ಇತ್ತ ಗಮನಹರಿಸಿದರೆæ ಉತ್ತಮ ಶಾಲಾ ಕಟ್ಟಡದಲ್ಲಿ ಶಾಲಾ ಮಕ್ಕಳು ಕೂರುವ ಭಾಗ್ಯ ಲಭಿಸಲಿದೆ. ಇಲ್ಲದಿದ್ದರೆ ಸರ್ಕಾರದ ಹಣ ಇಚ್ಛಾಶಕ್ತಿ ಕೊರತೆಯಿಂದ ಪೋಲಾಗಲಿದೆ ಎಂಬ ಮಾತುಗಳು ನಾಗರಿಕ ವಲಯದಿಂದಲೇ ಕೇಳಿ ಬರುತ್ತಿದೆ.

3 ಕೊಠಡಿಗಳಲ್ಲಿ 113 ಮಕ್ಕಳಿಗೆ, 2 ಕೊಠಡಿಗಳಲ್ಲಿ 66 ಮಕ್ಕಳು:

ಪ್ರಾಥಮಿಕ ಶಾಲೆಯ ಪ್ರಾಂಗಣದಲ್ಲಿರುವ ಐದು ಕೊಠಡಿಗಳ ಪೈಕಿ ಮೂರು ಕೊಠಡಿಗಳಲ್ಲಿ ಇಲ್ಲಿನ ಶಿಕ್ಷಕರು 1ರಿಂದ 8ನೇ ತರಗತಿ ತನಕ 113 ಶಾಲಾ ಮಕ್ಕಳಿಗೆ ಪಾಠ, ಪ್ರವಚನ ಬೋಧಿಸುತ್ತಾರೆ. ಅದೇ ರೀತಿಯಲ್ಲಿ ಪ್ರೌಢಶಾಲಾ ಶಿಕ್ಷಕರು ಇನ್ನುಳಿದ 2 ಕೊಠಡಿಗಳಲ್ಲಿ 9ರಿಂದ 10ನೇ ತರಗತಿಯ 66ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಪಾಠ ಬೋಧನೆಯಲ್ಲಿ ತೊಡಗುತ್ತಾರೆ. ಇಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರ ಕಚೇರಿ ಒಂದೇ ಕೊಠಡಿಯಲ್ಲಿ ಇದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹಿಸಬೇಕು ಎಂಬುದು ಇಲ್ಲಿನ ಪೋಷಕರ ಮನವಿಯಾಗಿದೆ.

ಮಂಗಳೂರಿಗೆ ಬೆಂಕಿ ಹಾಕಲು ಸಿದ್ದರಾಮಯ್ಯ ಬರ್ತಿದ್ದಾರೆ'..!

ಬೈಲೂರು ಪ್ರೌಢಶಾಲೆ ಕಾಮಗಾರಿ ಶೇಕಡ 95ರಷ್ಟುಪೂರ್ಣಗೊಂಡಿದೆ. ವಿದ್ಯುತ್‌ ಸಂಪರ್ಕ ನೀರಿನ ಸೌಲಭ್ಯ ಕಲ್ಪಿಸಬೇಕು. ಕಾಮಗಾರಿ ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಿಸಿದ ತಕ್ಷಣ ಉದ್ಘಾಟನೆಗೆ ಅಗತ್ಯ ಕ್ರಮ ವಹಿಸಲಾಗುವುದು. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಅಲ್ಲಿನ ಸಮಸ್ಯೆಗಳ ಕುರಿತು ಹಲವು ಬಾರಿ ಪತ್ರ ಬರೆಯಲಾಗಿದೆ ಎಂದು ಹನೂರು ಬಿಇಒ ಸ್ವಾಮಿ ಹೇಳಿದ್ದಾರೆ.

- ಎನ್‌. ನಾಗೇಂದ್ರಸ್ವಾಮಿ