ಮಂಗಳೂರು (ನ.12):  ಇನ್ನು 10 ವರ್ಷ ಮಾತ್ರವಲ್ಲ ಮುಂದೆಯೂ ಹತ್ತಾರು ವರ್ಷ ಕಾಲ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಅಧಿಕಾರ ಸಿಗುವುದಿಲ್ಲ, ಬಿಜೆಪಿಯೇ ಆಡಳಿತ ನಡೆಸಲಿದೆ. ಕಾಂಗ್ರೆಸ್ಸಿನ ಕಪಟನಾಟಕ ಜನತೆಗೆ ಗೊತ್ತಾಗಿದೆ ಎಂದು ದ.ಕ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

 ಸ್ವಘೋಷಿತರು ರಾಜಿನಾಮೆ ನೀಡಲಿ:

ರಾಜ್ಯ ಹಾಗೂ ದೇಶದಲ್ಲಿ ಮೋದಿ ಅಲೆ ಎಲ್ಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಹಿತ ವಿಪಕ್ಷಗಳು ಪ್ರಶ್ನಿಸಿದ್ದವು. ದೇಶಾದ್ಯಂತ ನಡೆದ ಚುನಾವಣಾ ಫಲಿತಾಂಶವೇ ಎಲ್ಲದಕ್ಕೂ ಉತ್ತರ ನೀಡಿದೆ. ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಂಡೆ(ಡಿಕೆಶಿ) ಪುಡಿಯಾಗಿದ್ದು, ಹುಲಿಯಾ(ಸಿದ್ದರಾಮಯ್ಯ)ಗೂಡು ಸೇರಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯರನ್ನು ಅಂದೇ ಹೊರಗಟ್ಟಿದ್ದಾರೆ. ಈಗ ಶಿರಾ, ಆರ್‌ ಆರ್‌ ನಗರದಲ್ಲೂ ದೂರ ಮಾಡಲಾಗಿದೆ. ಇನ್ನು ಬಾದಾಮಿಯಿಂದಲೂ ಸಿದ್ದರಾಮಯ್ಯರನ್ನು ಜನತೆಯೇ ಹೊರಹಾಕುತ್ತಾರೆ. ಈ ಸ್ವಘೋಷಿತ ನಾಯಕರು ತಮ್ಮ ಸ್ಥಾನಕ್ಕೆ ಇನ್ನಾದರೂ ರಾಜಿನಾಮೆ ನೀಡಬೇಕು ಎಂದು ನಳಿನ್‌ ಕುಮಾರ್‌ ಆಗ್ರಹಿಸಿದರು.

ಬಿಟ್ಟು ಗೆಲ್ಲಿಸಿದ್ರು.. ತಗೊಂಡು ಗೆಲ್ಲಿಸಿದ್ರು.. ಬಂಡೆ ಪುಡಿಪುಡಿ ಮಾಡಿದ್ದು ಬಿಜೆಪಿ ಅಲ್ಲ!

ಸಿಎಂ ಬದಲಾವಣೆ ವಿಚಾರ ಬಿಜೆಪಿಯಲ್ಲಿ ಚರ್ಚೆಗೆ ಬರಲೇ ಇಲ್ಲ, ಆದರೂ ಸಿದ್ದರಾಮಯ್ಯ ಪದೇ ಪದೇ ಅದೇ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ. ವಾಸ್ತವದಲ್ಲಿ ಸಿಎಂ ವಿಚಾರ ಮುನ್ನೆಲೆಗೆ ತಂದದ್ದು ಸಿದ್ದರಾಮಯ್ಯರ ಶಿಷ್ಯ ಜಮೀರ್‌ ಅಹ್ಮದ್‌, ಬಳಿಕ ಸಿದ್ದರಾಮಯ್ಯ ಕೂಡ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದರು. ಅದಕ್ಕೆ ಕಾಂಗ್ರೆಸ್‌ನಲ್ಲೇ ವಿರೋಧವೂ ವ್ಯಕ್ತವಾಯಿತು. ಸಿಎಂ ಸ್ಥಾನಕ್ಕೆ ಈಗ ಕಾಂಗ್ರೆಸ್‌ನಲ್ಲಿ ಸಂಗೀತ ಕುರ್ಚಿ ಏರ್ಪಟ್ಟಂತಾಗಿದೆ. ಸಿದ್ದರಾಮಯ್ಯ ಟವಲ್‌ ಸಿದ್ದವಾಗಿಟ್ಟರೆ, ಡಿಕೆಶಿ ಟವಲ್‌ ಎಳೆಯಲು ಕಾಯುತ್ತಿದ್ದಾರೆ. ಬಿಎಸ್‌ವೈ ಅವರನ್ನು ಸಿಎಂ ಕುರ್ಚಿಯಿಂದ ಇಳಿಸುವುದು ಕೇವಲ ಕಾಂಗ್ರೆಸಿಗರ ಹಗಲುಗನಸು ಎಂದು ನಳಿನ್‌ ಕುಮಾರ್‌ ತಿರುಗೇಟು ನೀಡಿದರು.

ಇನ್ನು ನೆಮ್ಮದಿಯ ಆಡಳಿತ: ಉಪ ಚುನಾವಣೆ ವೇಳೆ ಕಾಂಗ್ರೆಸ್‌ ಜಾತಿ, ಹಣ, ಗೂಂಡಾ ರಾಜಕಾರಣ ನಡೆಸಿದೆ. ಭ್ರಷ್ಟಾಚಾರದ ಆರೋಪ ಹೊರಿಸಿದೆ. ಆದರೆ ಜನತೆ ಇದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಆದ್ದರಿಂದ ಇನ್ನು ಎರಡೂವರೆ ವರ್ಷ ಕಾಲ ಸಿಎಂ ಯಡಿಯೂರಪ್ಪ ಅವರು ನೆಮ್ಮದಿಯ ಆಡಳಿತ ನಡೆಸಬಹುದು. ಇನ್ನಾದರೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜನತೆಯ ಉತ್ತರವನ್ನು ಸ್ವೀಕಾರ ಮಾಡುವುದು ಉತ್ತಮ. ಸಜ್ಜನಿಕೆ, ಆದರ್ಶದ ಆಡಳಿತಕ್ಕೆ ಜನತೆ ಆಶೀರ್ವಾದ ಮಾಡಿದೆ ಎಂಬ ಸ್ಪಷ್ಟಸಂದೇಶ ರಾಜ್ಯಕ್ಕೆ ರವಾನೆಯಾಗಿದೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಮಾರ್ಮಿಕವಾಗಿ ಹೇಳಿದರು