ಮೈಸೂರಿನ ಪ್ರಿನ್ಸಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದಕ್ಕೆ ಸಂಸದ ಯದುವೀರ್ ಒಡೆಯರ್ ವಿರೋಧ

ಪ್ರಿನ್ಸಸ್ ಹೆಸರು ಆ ರಸ್ತೆಗೆ ಸುಮ್ಮನೇ ಬಂದಿರುವುದಲ್ಲ. ಮಹಾರಾಣಿ ಕೃಷ್ಣಾಜಮ್ಮಣ್ಣಿಯವರ ನೆನಪಿಗೋಸ್ಕರ ಅವರ  ಕುಟುಂಬ ಈ ಹೆಸರಿಟ್ಟಿತ್ತು. ಕೃಷ್ಣಾಜಮ್ಮಣ್ಣಿಯವರು ಕ್ಷಯರೋಗದಿಂದ ಮೃತಪಟ್ಟರು. ಇದರಿಂದ ಕ್ಷಯದ ಬಗ್ಗೆ ಅಧ್ಯಯನ ಮಾಡುವುದಕ್ಕಾಗಿಯೇ ಕ್ಷಯ ರೋಗ ಆಸ್ಪತ್ರೆಯನ್ನು ಮಾಡಲಾಯಿತು: ಸಂಸದ ಯದುವೀರ್ ಒಡೆಯರ್
 

BJP MP Yaduveer Wadiyar opposes naming CM Siddaramaiah's Princes Road in Mysuru grg

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಡಿ.25):  ಮೈಸೂರಿನ ಪ್ರಿನ್ಸಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯನವರ ಹೆಸರಿಡುವುದಕ್ಕೆ ಮೈಸೂರು- ಕೊಡಗು ಸಂಸದ ಯದುವೀರ್ ಒಡೆಯರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. 

ಇಂದು(ಬುಧವಾರ) ನಗರದ ಕೊಡಗು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಯದುವೀರ್ ಒಡೆಯರ್ ಅವರು, ಪ್ರಿನ್ಸಸ್ ಹೆಸರು ಆ ರಸ್ತೆಗೆ ಸುಮ್ಮನೇ ಬಂದಿರುವುದಲ್ಲ. ಮಹಾರಾಣಿ ಕೃಷ್ಣಾಜಮ್ಮಣ್ಣಿಯವರ ನೆನಪಿಗೋಸ್ಕರ ಅವರ  ಕುಟುಂಬ ಈ ಹೆಸರಿಟ್ಟಿತ್ತು. ಕೃಷ್ಣಾಜಮ್ಮಣ್ಣಿಯವರು ಕ್ಷಯರೋಗದಿಂದ ಮೃತಪಟ್ಟರು. ಇದರಿಂದ ಕ್ಷಯದ ಬಗ್ಗೆ ಅಧ್ಯಯನ ಮಾಡುವುದಕ್ಕಾಗಿಯೇ ಕ್ಷಯ ರೋಗ ಆಸ್ಪತ್ರೆಯನ್ನು ಮಾಡಲಾಯಿತು. ಜೊತೆಗೆ ಅಲ್ಲಿ ಕೃಷ್ಣಾಜಮ್ಮಣ್ಣಿ ಸ್ಯಾನಿಟೋರಿಯಂ ಕೂಡ ಶುರು ಮಾಡಲಾಯಿತು. ಹೀಗಾಗಿ ಅವರ ಹೆಸರನ್ನು ಆ ರಸ್ತೆಗೆ ನಾಮಕರಣ ಮಾಡಲಾಗಿದೆ. ಆದರೆ ಈ ರಸ್ತೆ ಕೆಆರ್‌ಎಸ್‌ಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಜನರು ಅದನ್ನು ಸಾಮಾನ್ಯವಾಗಿ ಕೆಆರ್‌ಎಸ್‌ ರಸ್ತೆ ಎಂದು ಕರೆಯುತ್ತಾರೆ. ಆದರೆ ಈಗ ಸಿದ್ದರಾಮಯ್ಯನವರ ಹೆಸರು ಇಡುವ ಬೆಳವಣಿಗೆ ಬೇಸರ ಎನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. 

ಬಿಜೆಪಿ ಶಾಸಕ ಮುನಿರತ್ನಗೆ ಯಾರು ಮೊಟ್ಟೆ ಎಸೆದಿದ್ದಾರೆ ಅಂತ ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು ಅರಸರ ಅಭಿವೃದ್ಧಿ ಕೆಲಸಗಳಿಂದ ಹಳೇ ಮೈಸೂರು ಭಾಗ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಆಧುನಿಕ ಕಾಲದ ಜನಪ್ರತಿನಿಧಿಗಳು ನಾವು ಜನರಿಂದ ಮತ ಪಡೆದು ಆಯ್ಕೆಯಾಗಿ ಬಂದಿದ್ದೇವೆ. ನಮ್ಮಗಳ ಹೆಸರನ್ನು ಇಡುವುದು ಸರಿಯಲ್ಲ. ನಿಮ್ಮ ಹೆಸರು ಇಡಬೇಕೆಂದಿದ್ದರೆ ಬೇರೆ ಸಾಕಷ್ಟು ರಸ್ತೆಗಳಿವೆ. ಅವುಗಳಿಗೆ ನಿಮ್ಮ ಹೆಸರಿಟ್ಟುಕೊಳ್ಳಿ ಎಂದು ಸಂಸದ ಯದುವೀರ್ ಒಡೆಯರ್ ಅವರು ಪ್ರಿನ್ಸಸ್ ರಸ್ತೆಗೆ ಸಿದ್ದರಾಮಯ್ಯನವರ ಹೆಸರಿಡುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. 

ಇನ್ನು ನಿಮ್ಮದೇ ಪಕ್ಷದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯನವರ ಹೆಸರು ಇಡುವುದು ಒಳ್ಳೆಯದೇ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಂಸದ ಯದುವೀರ್ ಅವರು, ಸಿದ್ದರಾಮಯ್ಯನವರ ಕೆಲಸಗಳು ಅವರಿಗೆ ಇಷ್ಟ ಆಗಿರಬಹುದು ಅದಕ್ಕೆ ಹೇಳಿದ್ದಾರೆ ಎನಿಸುತ್ತದೆ. ಇದು ಪ್ರಜಾಪ್ರಭುತ್ವ ಅಲ್ಲವೇ ಅವರವರ ಇಷ್ಟ ಹೇಳಲಿ ಬಿಡಿ ಎಂದರು. 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ದ್ವೇಷದ ರಾಜಕಾರಣ ಹೆಚ್ಚುತ್ತಿದೆ: ಬಿ.ವೈ

ಇನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಿ.ಟಿ. ರವಿ ಅವರು ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ ಎಂಬ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ನೀಡಿರುವುದಕ್ಕೆ ಸಂಸದ ಯದುವೀರ್ ಒಡೆಯರ್ ಕಿಡಿ ಕಾರಿದರು. ಇದನ್ನು ನೂರಕ್ಕೆ ನೂರರಷ್ಟು ನಾನು ಖಂಡಿಸುತ್ತೇನೆ. ಸಿ.ಟಿ.ರವಿ ಅವರು ಏನೇ ಹೇಳಿರಬಹುದು ಇಲ್ಲವೆ ಹೇಳಿಲ್ಲದೆ ಇರಬಹುದು. ಅದನ್ನು ಸಭಾಪತಿಗಳು ತೀರ್ಮಾನ ಮಾಡಬೇಕಾಗಿತ್ತು. ಸಭಾಪತಿ ಅವರು ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ರೆಕಾರ್ಡಿಂಗ್ ನಲ್ಲಿ ಅಂತಹದ್ದು ಯಾವುದೂ ಇಲ್ಲ ಎಂದಿದ್ದಾರೆ. ಆದರೆ ಆ ಕಾನೂನನ್ನು ಮೀರಿ ಸಿ.ಟಿ. ರವಿ ಅವರನ್ನು ಬಂಧನ ಮಾಡಲಾಯಿತು. ಜೊತೆಗೆ ರಾತ್ರಿ ಇಡೀ ಅವರನ್ನು ಎಲ್ಲೆಲ್ಲೋ, ಸುತ್ತಾಡಿಸಿ ಏನೆಲ್ಲಾ ಮಾಡಲಾಯಿತು. ಇದನ್ನು ನಾನು ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ. 

ಇದನ್ನು ನ್ಯಾಯಾಂಗ ತನಿಖೆಗೆ ಕೊಡುವಂತೆ ನಾನು ಮೊದಲೇ ಹೇಳಿದ್ದೇನೆ. ಇಲ್ಲವೇ ಸಿಬಿಐ ಅಥವಾ ರಾಜ್ಯ ಸರ್ಕಾರದ ಪ್ರಭಾವ ಇಲ್ಲದಿರುವ ಸಂಸ್ಥೆಗೆ ತನಿಖೆಗೆ ನೀಡಿ ಅಂತ ಹೇಳಿದ್ದೇನೆ. ಹೀಗಾಗಿ ಅದೇ ರೀತಿ ತನಿಖೆ ಆಗುವುದು ಸೂಕ್ತ ಎಂದು ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದರು.

Latest Videos
Follow Us:
Download App:
  • android
  • ios