ಬಿಜೆಪಿ ಶಾಸಕ ಮುನಿರತ್ನಗೆ ಯಾರು ಮೊಟ್ಟೆ ಎಸೆದಿದ್ದಾರೆ ಅಂತ ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ
ಮುನಿರತ್ನ ವಿಚಾರದಲ್ಲಿ ಯಾರು ಮಾಡಿದ್ದಾರೆ ಗೊತ್ತಿಲ್ಲ. ಮೊಟ್ಟೆ ಎಸೆದಿದ್ದಾರೆ ಅಂತಾ ಗೊತ್ತಿದೆ, ಯಾರು ಅಂತ ಗೊತ್ತಿಲ್ಲ. ಇಬ್ಬರು ಮೊಟ್ಟೆ ಎಸೆದಿದ್ದಾರೆ ಅಂತ ಗೊತ್ತಿದೆ. ಪಾರ್ಟಿಗೆ ಸೇರಿದವರಾ ಅಥವಾ ಬೇರೆಯವರು ಅನ್ನೋದು ಗೊತ್ತಿಲ್ಲ ಎಂದ ಸಿಎಂ ಸಿದ್ದರಾಮಯ್ಯ
ಬೆಳಗಾವಿ(ಡಿ.25): ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳಾಗಿವೆ. ಈಗ ಶತಮಾನೋತ್ಸವ ಆಚರಣೆ ಮಾಡುತ್ತಿದ್ದೇವೆ. ಡಿ.26ರಂದು(ಗುರುವಾರ) ಮಧ್ಯಾಹ್ನ ಮೂರು ಗಂಟೆಗೆ ಎಐಸಿಸಿ ಕಾರ್ಯಕಾರಣಿ ಸಭೆ ಇದೆ. ಡಿ. 27ರಂದು ಸುವರ್ಣ ಸೌಧದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಉದ್ಘಾಟನೆ ಆಗಲಿದೆ. ಮಧ್ಯಾಹ್ನ ಬೃಹತ್ ಸಮಾವೇಶ ಕಾರ್ಯಕ್ರಮ ಕೂಡ ನಡೆಯಲಿದೆ. ವರ್ಷಪೂರ್ತಿ ಗಾಂಧೀಜಿ ವಿಚಾರವಾಗಿ ಕಾರ್ಯಕ್ರಮ ಆಚರಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಬುಧವಾರ) ನಗರದ ಸಾಂಬ್ರಾ ಏರ್ಪೋರ್ಟ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಮುನಿರತ್ನ ವಿಚಾರದಲ್ಲಿ ಯಾರು ಮಾಡಿದ್ದಾರೆ ಗೊತ್ತಿಲ್ಲ. ಮೊಟ್ಟೆ ಎಸೆದಿದ್ದಾರೆ ಅಂತಾ ಗೊತ್ತಿದೆ, ಯಾರು ಅಂತ ಗೊತ್ತಿಲ್ಲ. ಇಬ್ಬರು ಮೊಟ್ಟೆ ಎಸೆದಿದ್ದಾರೆ ಅಂತ ಗೊತ್ತಿದೆ. ಪಾರ್ಟಿಗೆ ಸೇರಿದವರಾ ಅಥವಾ ಬೇರೆಯವರು ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಶಾಸಕ ಮುನಿರತ್ನ ಮೇಲೆ ಮೊಟ್ಟೆ ಹೊಡೆದ ಕಾಂಗ್ರೆಸ್ ಕಾರ್ಯಕರ್ತರು; ಇಲ್ಲಿದೆ ಇಂಚಿಂಚು ಮಾಹಿತಿ!
ಕಾಂಗ್ರೆಸ್ ಶತಮಾನೋತ್ಸವದಿಂದ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅವರು, ಯಾವಾಗಲೂ ಬದಲಾವಣೆ ಆಗ್ತಿರುತ್ತೆ. ನೂರು ವರ್ಷದಲ್ಲಿ ಇದ್ದಂತ ಪರಿಸ್ಥಿತಿ ಈಗಿಲ್ಲ. ರಾಜಕೀಯ ಬದಲಾವಣೆ ಆಗುತ್ತೆ, ರಾಜಕೀಯ ಚಳುವಳಿಗಳು ಆಗ್ತವೆ ಎಂದು ತಿಳಿಸಿದ್ದಾರೆ.
ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಸಿ.ಟಿ. ರವಿ ದೂರು ವಿಚಾರದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಿ.ಟಿ. ರವಿ ಅವರ ತಪ್ಪುಗಳನ್ನ ಮುಚ್ಚಿಕೊಳ್ಳಲು ಏನೆಲ್ಲ ಮಾಡ್ತಿದ್ದಾರೆ. ಏನೆಲ್ಲಾ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಪ್ರಕರಣವನ್ನ ಸಿಒಡಿಗೆ ವಹಿಸಿದ್ದೇವೆ ಎಂದು ಹೇಳಿದ್ದಾರೆ.
ಖಾನಾಪುರ ಸಿಪಿಐ ಅಮಾನತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ ಅವರು, ಸಿಪಿಐ ಅವರು ಪೊಲೀಸ್ ಠಾಣೆಯಲ್ಲಿ ಬಿಜೆಪಿಯವರಿಗೆ ಪಾರ್ಟಿ ಮೀಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟರು. ಅವರ ಮೇಲೆ ಶಿಸ್ತು ಕ್ರಮ ಕೈಗೊಂಡಿದ್ದೇವೆ. ಪೊಲೀಸ್ ಠಾಣೆಯಲ್ಲಿ ಬಿಜೆಪಿಯವರು ಬಂದು ಮೀಟಿಂಗ್ ಮಾಡಬಹುದಾ?. ಪೊಲೀಸ್ ಇನ್ಸ್ಪೆಕ್ಟರ್ ಮೀಟಿಂಗ್ ಮಾಡಲು ಅವಕಾಶ ಕೊಟ್ಟರು. ಸೆಕ್ಯೂರಿಟಿ ಉದ್ದೇಶದಿಂದ ಖಾನಾಪುರಕ್ಕೆ ಕರೆದುಕೊಂಡು ಹೋಗಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.