ಶಿವಮೊಗ್ಗದ ಹೊಳೆಹೊನ್ನೂರು ಕೂಡಲಿ ಮಠದಲ್ಲಿ 100 ವರ್ಷದ ಪುರಾತನ ಚಿನ್ನದ ಪಾದುಕೆ ಕಳ್ಳತನವಾಗಿದೆ ಎಂದು ದೂರು ದಾಖಲಾಗಿತ್ತು. ಆದರೆ ಪೊಲೀಸರ ತನಿಖೆಯ ವೇಳೆ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಕಳುವಾಗಿದೆ ಎನ್ನಲಾದ ಪಾದುಕೆ ಎಸ್‌ಬಿಐ ಬ್ಯಾಂಕ್‌ನ ಲಾಕರ್‌ನಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದು, ಇದು ಕೇವಲ ಮರೆವಿನಿಂದಾದ ಘಟನೆ ಎಂದು ತಿಳಿದುಬಂದಿದೆ.
ಶಿವಮೊಗ್ಗ: ಜಿಲ್ಲೆ ಹೊಳೆಹೊನ್ನೂರು ಕೂಡಲಿ ಮಠದಲ್ಲಿ 100 ವರ್ಷದ ಪುರಾತನ ಪಾದುಕೆ ಕಳ್ಳತನವಾಗಿದೆ ಅಂತ 2024ರಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. 1.5 ಕೆಜಿ ಚಿನ್ನದ ಪಾದುಕೆ ಕಳ್ಳತನ ಅಂತ ಹೇಳಲಾಗಿತ್ತು. ಆದರೆ ಈಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪಾದುಕೆ ಕಳುವಾಗಿರಲೇ ಇಲ್ಲ, ಬದಲಾಗಿ SBI ಲಾಕರ್ ನಲ್ಲಿ ಸೇಫ್ ಆಗಿ ಇತ್ತು ಅನ್ನೋದು ಪತ್ತೆಯಾಗಿದೆ.
FIR ಆಗಿದ್ದು ಹೇಗೆ?
ಹೊಳೆಹೊನ್ನೂರು ಕೂಡಲಿ ಮಠದ ದೊಡ್ಡ ಗುರುಗಳು ವಿದ್ಯಾನಂದ ಭಾರತಿ ಶ್ರೀಗಳು ಚಾತುರ್ಮಾಸಕ್ಕೆ ಹೋಗಿ ವಾಪಸ್ ಬಂದಾಗ ಬೀರುವಿನಲ್ಲಿದ್ದ ಪಾದುಕೆ ನಾಪತ್ತೆಯಾಗಿತ್ತು. ಬೀರುವಿನ ಬೀಗ ರಿಪೇರಿ ಮಾಡಿಸಿದ್ದು, ಯಾರೋ ಕದ್ದಿದ್ದಾರೆ ಅಂತ 2024 ರಲ್ಲಿ ಹೊಲೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅನುಮಾನ ಯಾರ ಮೇಲೆ?
ಕೂಡಲಿ ಶೃಂಗೇರಿ ಮಠದ ಪಾದುಕೆ ಕಳ್ಳತನ ಆಗಿದೆ ಅಂತ 2024ರಲ್ಲಿ ಮಠದ ಹಿರಿಯ ಶ್ರೀ ವಿದ್ಯಾ ಅಭಿನವ ವಿದ್ಯಾರಣ ಭಾರತೀ ಸ್ವಾಮೀಜಿ ಅವರು ಡಿಜಿಪಿ, ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದರು. ಇದರೊಂದಿಗೆ 1.5 KG ಚಿನ್ನದ ಪಾದುಕೆ ಕಳ್ಳತನ ಅಂತ 2024 ರಲ್ಲಿ PSI ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಲಾಕರ್ನಲ್ಲೇ ಪಾದುಕೆ ಇಟ್ಟು ಕಳವು ಎಂದು ಹಿರಿಯ ಶ್ರೀ, ಕಿರಿಯ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ, ಸಿಬ್ಬಂದಿ ಶ್ರೀನಿವಾಸ್ ವಿರುದ್ಧ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಇದರೊಂದಿಗೆ ಮಠದ ಚಿಕ್ಕ ಗುರುಗಳು ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಹಾಗೂ ಮಹಾರಾಷ್ಟ್ರ, ಗುಲ್ಬರ್ಗದ ಅಡುಗೆ ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತವಾಗಿತ್ತು. ಪೊಲೀಸರು CDR, ವಿಚಾರಣೆ ಎಲ್ಲಾ ಮಾಡಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ತನಿಖೆಯಲ್ಲಿ ಬಯಲಾದ ಸತ್ಯ!
ಆದರೆ ಸುಮಾರು ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿದ್ದ ಪೊಲೀಸರ ತನಿಖೆಯಲ್ಲಿ 100 ವರ್ಷದ ಪಾದುಕೆ ಕಳ್ಳತನ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿತ್ತು. ಅಸಲಿಗೆ ಪಾದುಕೆ ಕಳುವಾಗಿರಲಿಲ್ಲ, ಲಾಕರ್ನಲ್ಲೇ ಇಟ್ಟು ದೂರು ನೀಡಿರುವುದು ತಿಳಿದು ಬಂದಿತ್ತು. ಪೊಲೀಸರು ಅರ್ಚಕರನ್ನ ವಿಚಾರಿಸಿದಾಗ ಶಾಕಿಂಗ್ ಸತ್ಯ ಬಯಲಾಗಿತ್ತು. ನಾವು ಪಾದುಕೆ ನೋಡಿ 8-10-15 ವರ್ಷವೇ ಆಯ್ತು ಅಂತ ಅರ್ಚಕರೇ ಹೇಳಿದ್ದರಂತೆ. ಎಲ್ಲಿ ಇದೆ ಅಂತಲೇ ಯಾರಿಗೂ ಗೊತ್ತಿರಲಿಲ್ಲ. ಆಗಲೇ ತನಿಖಾಧಿಕಾರಿಗೆ ಅನುಮಾನ ಬಂದು ಲಾಕರ್ ಚೆಕ್ ಮಾಡಿದ್ದಾರೆ.
SBI ಲಾಕರ್ ನಲ್ಲಿ ಪತ್ತೆ, ಕಳ್ಳತನ ಅಲ್ಲ Mistake of Fact!
ಶಿವಮೊಗ್ಗದ SBI ಬ್ಯಾಂಕ್ ನ 91/92 ನಂಬರ್ ಲಾಕರ್ ಓಪನ್ ಮಾಡಿಸಿದಾಗ ಮಹಾರಾಜರ ಕಾಲದ ಚಿನ್ನಾಭರಣಗಳ ಜೊತೆ ಪಾದುಕೆ ಪತ್ತೆಯಾಗಿದೆ. ಇದು 1.5 ಕೆಜಿ ಅಲ್ಲ, ಕೇವಲ ಮರಕ್ಕೆ ಬಂಗಾರದ ತಗಡು ಹೊದಿಸಿದ 300-400 ಗ್ರಾಂ ಪಾದುಕೆ. ಯಾವುದೇ ಕಳ್ಳತನ ನಡೆದಿಲ್ಲ, ಇದು ಕೇವಲ ಮರೆವಿನಿಂದ ಆದ Mistake of Fact ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಭಕ್ತರ ಭಾವನೆಗೆ ಧಕ್ಕೆ ಆಗಬಾರದು ಎಂದು ಪೊಲೀಸರು ಫೋಟೋ, ವಿಡಿಯೋ Display ಮಾಡದೆ ಮಠಕ್ಕೆ ವಾಪಸ್ ಹಸ್ತಾಂತರಿಸಿದ್ದಾರೆ. ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಆದರೆ ಭಕ್ತರು ಈ ಬಗ್ಗೆ ಬೇರೆಯದ್ದೆ ಅನುಮಾನ ವ್ಯಕ್ತಪಡಿಸಿದ್ದು, ಹಿರಿಯ ಸ್ವಾಮೀಜಿಗಳ ಕುರಿತಂತೆ ಅಪಪ್ರಚಾರ ಮಾಡಲಾಗಿತ್ತು. ಲಾಕರ್ನಲ್ಲಿದ್ದ ಪಾದುಕೆಗಳನ್ನು ಮರೆಮಾಚಿ ದೂರು ನೀಡಲಾಗಿತ್ತಾ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ 100 ವರ್ಷದ ಪಾದುಕೆ ಕಳ್ಳತನ ಅಂತ ಭಾರೀ ಸುದ್ದಿಯಾಗಿದ್ದ ಪ್ರಕರಣ ಅಂತಿಮವಾಗಿ ಲಾಕರ್ ನಲ್ಲೇ ಸೇಫ್ ಆಗಿ ಸಿಕ್ಕಿ ಸುಖಾಂತ್ಯ ಕಂಡಿದೆ.


