ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪದೇ ಪದೇ ಅಮೆರಿಕಾಕ್ಕೆ ಪ್ರಯಾಣ ಬೆಳೆಸುತ್ತಿರುವುದರಿಂದ ಅಸಮಾಧಾನಗೊಂಡಿರುವ ಕ್ಷೇತ್ರದ ಮತದಾರರು, ಶಾಸಕರನ್ನು ಭೇಟಿಯಾಗಲು ಉಚಿತ ಅಮೆರಿಕಾ ವೀಸಾ ಕೊಡಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ವ್ಯಂಗ್ಯವಾಗಿ ಮನವಿ ಮಾಡಿದ್ದಾರೆ. ತೀವ್ರ ಬರಗಾಲವಿದ್ದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಶಾಸಕರು ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ: ತಮ್ಮ ಶಾಸಕರನ್ನು ಭೇಟಿಯಾಗಲು ಅಮೆರಿಕಾಕ್ಕೆ ಉಚಿತ ವೀಸಾ ವ್ಯವಸ್ಥೆಗೆ ಮನವಿ‌ ಮಾಡುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಮೇಲುಕೋಟೆ ಕ್ಷೇತ್ರದ ಮತದಾರರು ಮನವಿ ಮಾಡಿದ್ದಾರೆ. ಸದ್ಯ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಮೆರಿಕಾಗೆ ತೆರಳಿದ್ದಾರೆ, ಈ ಹಿನ್ನೆಲೆಯಲ್ಲಿ ಶಾಸಕರ ಭೇಟಿಗೆ ಮತದಾರರು ವಿಶೇಷ ಮನವಿ ಮಾಡಿದ್ದಾರೆ.

ಶಾಸಕರ ಪದೇ ಪದೇ ವಿದೇಶಿ ಪ್ರಯಾಣ

ಶಾಸಕರಾಗಿ ಆಯ್ಕೆಯಾದಗಿನಿಂದ ಪದೇ ಪದೇ ದರ್ಶನ್ ಪುಟ್ಟಣಯ್ಯ ಅವರು ವಿದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಶಾಸಕರಾದಾಗಿನಿಂದ ಈವರೆಗೆ 18 ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಶಾಸಕರು ಕ್ಷೇತ್ರದಲ್ಲಿರುವ ಬದಲು ಪದೇ ಪದೇ ವಿದೇಶ ಮಾಡುತ್ತಿದ್ದ, ಕ್ಷೇತ್ರದ ಜನರ ಸಮಸ್ಯೆ ಆಲಿಸುತ್ತಿಲ್ಲ ಎಂದು ಕ್ಷೇತ್ರದ ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ವಿಶೇಷ ಮನವಿ

ಇದರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ವಿಚಿತ್ರ ಮನವಿ ಪತ್ರ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ತೀವ್ರ ಬರಗಾಲವಿದೆ, ರೈತರು ಸಂಕಷ್ಟದಲ್ಲಿದ್ದಾರೆ. ಕೆರೆ-ಕಟ್ಟೆಗಳಲ್ಲಿ ನೀರಿಲ್ಲ, ಹೇಮಾವತಿ ನೀರು ಹರಿಸುವಲ್ಲಿ ಶಾಸಕರು ಒತ್ತಡ ಹಾಕುತ್ತಿಲ್ಲ. ಕೆಆರ್‌ಎಸ್ ನೀರು ತಮಿಳುನಾಡಿಗೆ ಹರಿದರೂ ಮೌನ ವಹಿಸಿದ್ದಾರೆ. ರೈತರ ಕಷ್ಟವನ್ನೆ ಆಲಿಸುತ್ತಿಲ್ಲ, ಸದನದಲ್ಲೂ ಚರ್ಚೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದೇಶಕ್ಕೆ ಹೋಗಿ ನಾವು ಮನವಿ ಕೊಡುತ್ತೇವೆ!

ರೈತ ಪ್ರತಿನಿಧಿಯಾಗಿ ಶಾಸಕರಾಗಿರುವ ದರ್ಶನ್ ಪುಟ್ಟಣ್ಣಯ್ಯ ಅವರು ವಿಧಾನಸಭೆಯ ಕಲಾಪದಲ್ಲಿ ಭಾಗಿಯಾಗಿ, ಸಮರ್ಪಕ ಕಾರ್ಯನಿರ್ವಹಣೆ ಇಲ್ಲ ಎಂಬ ಆರೋಪಿಸಿದ್ದಾರೆ. ಪಾಂಡವಪುರ ತಾಲೂಕು ಬರಪೀಡಿತ ಘೋಷಣೆ ವಿಳಂಬವಾಗಿದೆ. ರೈತ ಸಂಘದಿಂದ ಬಂದ ಶಾಸಕ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬರಗಾಲದ ಸಂಧರ್ಭದಲ್ಲಿ ಪದೇ ಪದೇ ವಿದೇಶಕ್ಕೆ ಹೋಗುತ್ತಿದ್ದಾರೆ. ಇದರಿಂದ‌‌ ಶಾಸಕರಿಗೆ ಮನವಿ ಕೊಡಲು, ಪ್ರಶ್ನೆ ಮಾಡಲು ಸಾಧ್ಯವಾಗುತ್ತಿಲ್ಲ. ತಂದೆ ಕೆ.ಎಸ್ ಪುಟ್ಟಣ್ಣಯ್ಯ ಹೋರಾಟದ ಹಾದಿ ಮಗ ಅನುಸರಿಸುತ್ತಿಲ್ಲ. ಈ ಕಾರಣದಿಂದ ಕ್ಷೇತ್ರದ ಜನರು ವಿದೇಶಕ್ಕೆ ಹೋಗಲು ಅನುಕೂಲ ಮಾಡಿಕೊಡಿ. ನಾವು ಅಲ್ಲೆ ಹೋಗಿ ಶಾಸಕರಿಗೆ ಮನವಿ ಕೊಡ್ತಿವಿ ಎಂದು ವ್ಯಂಗ್ಯವಾಡಿದ್ದಾರೆ.

YouTube video player