BIG 3: ರಾಣೆಬೆನ್ನೂರಿನ ಅನಾಥ ಅಂಗನವಾಡಿ: ಬಡವರ ಮಕ್ಕಳು ಮಾಡಿದ ಪಾಪವೇನು?

BIg 3 Ranebennur Anganawadi Story: ರಾಣೆಬೆನ್ನೂರಿನ ಇಸ್ಲಾಂಪುರ ವಾರ್ಡಿನ ಕೊರವರ ಓಣಿಯಲ್ಲಿರೋ ಈ ಪುಟ್ಟ ಅಂಗನವಾಡಿಗೆ ಸ್ವಂತ ಸೂರೇ ಇಲ್ಲ

Big 3 Haveri Islampur Ranebennur Anganawadi bad condition mnj

ಹಾವೇರಿ (ಸೆ. 16): ಮಕ್ಕಳೇ ಈ ದೇಶದ ಭವಿಷ್ಯ, ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂದು ದೊಡ್ಡ ದೊಡ್ಡ ಡೈಲಾಗ್ ಹೊಡೆಯುತ್ತಾರೆ ರಾಜಕಾರಣಿಗಳು. ಆದರೆ ಬಡವರ ಮಕ್ಕಳ ಶಿಕ್ಷಣ, ಆರೋಗ್ಯದ ಪರಿಸ್ಥಿತಿ ಮಾತ್ರ ಅಯೋಮಯ. ದುಡ್ಡಿದ್ದವರು ತಮ್ಮ ಮಕ್ಕಳನ್ನು ಹೈಕ್ಲಾಸ್ ಬೇಬಿ ಸಿಟ್ಟಿಂಗು, ಕಾನ್ವೆಂಟು ಅಂತ ಕಳಿಸ್ತಾರೆ. ಆದರೆ ಬಡವರ ಮಕ್ಕಳು ಮಾತ್ರ ಕೋಳಿ ಗೂಡಿನಂತ ಅಂಗನವಾಡಿಯಲ್ಲಿ ಕುಳಿತು ಒದ್ದಾಡಬೇಕು.  ಮುದ್ದು ಮುಖದ ದೇವರಂತ ಮಕ್ಕಳು. ಭವ್ಯ ಭಾರತದ ಭವಿಷ್ಯ ಹೊತ್ತು ಕುಳಿತಿರೋ ನವಭಾರತದ ಕನಸಿನ ಕೂಸುಗಳು. ಈ ಪುಟ್ಟ ಪುಟ್ಟ ಪುಟಾಣಿ ಮಕ್ಕಳು ಆ ಕಡೆ ಈ ಕಡೆ ಹೊರಳೋಕೂ ಜಾಗ ಇಲ್ಲ. ಆರಾಮವಾಗಿ ಕೂರೋಕೆ ಆಗಲ್ಲ. ಊಟ ಮಾಡೋಕೆ ಆಗಲ್ಲ. ಅಕ್ಷರ ಕಲಿಯೋಕೂ ಆಗಲ್ಲ....! 

ಸರ್ಕಾರ ಲಕ್ಷಾಂತರ ಕೋಟಿ ಬಜೆಟ್ ಮಂಡಿಸುತ್ತೆ. ನಾವು ಅಷ್ಟು ಕೋಟಿ ರೂಪಾಯಿ ಕೆಲಸ ಮಾಡಿದಿವಿ. ಇಷ್ಟು ಅಭಿವೃದ್ಧಿ ಮಾಡಿದಿವಿ. ಇಷ್ಟು ಕಡೆದು ಗುಡ್ಡೆ ಹಾಕಿದಿವಿ ಎಂದು ದೊಡ್ಡ ದೊಡ್ಡದಾಗಿ ಮಾತಾಡ್ತಾನೇ ಇರ್ತಾರೆ. ಆದರೆ ಒಂದು ಸಣ್ಣ ಕೋಣೆಯ ಈ ಅಂಗನವಾಡಿಯಲ್ಲಿ ಕೂರೋದು ಬರೋಬ್ಬರಿ 50ಕ್ಕೂ ಹೆಚ್ಚು ಮಕ್ಕಳು.

ಅಂಗನವಾಡಿಗೆ ಸ್ವಂತ ಸೂರೇ ಇಲ್ಲ:  ರಾಣೆಬೆನ್ನೂರಿನ ಇಸ್ಲಾಂಪುರ ವಾರ್ಡಿನ ಕೊರವರ ಓಣಿಯಲ್ಲಿರೋ ಈ ಪುಟ್ಟ ಅಂಗನವಾಡಿಗೆ ಸ್ವಂತ ಸೂರೇ ಇಲ್ಲ. ಬಡವರ ಮಕ್ಕಳು ಮಾಡಿದ ಪಾಪ ಏನು? ಈ ಚಿಕ್ಕ ಕೊಠಡಿಯಲ್ಲೇ ಮಕ್ಕಳಿಗೆ ಅಡುಗೆ ತಯಾರಿಸಿ ಬಡಿಸಬೇಕು. ಅಲ್ಲೇ ಪಾಠ ಮಾಡಬೇಕು‌. ಆಹಾರ ಧಾನ್ಯಗಳನ್ನೂ ಕೂಡಾ ಅಲ್ಲೇ ದಾಸ್ತಾನು ಮಾಡಿ ರಕ್ಷಿಸಿಟ್ಟುಕೊಳ್ಳಬೇಕು.

ಉಸಿರುಗಟ್ಟೋ ವಾತಾವರಣ: ಇಲ್ಲಿ ಅಂಗನವಾಡಿಯೇ ಅಡುಗೆ ಕೋಣೆ , ಅಂಗನವಾಡಿಯೇ ದಾಸ್ತಾನು ಕೊಠಡಿ, ಅಂಗನವಾಡಿಯೇ ಬೋಧನಾ ಕೊಠಡಿ. ರಾಣೆಬೆನ್ನೂರಿನ ಇಸ್ಲಾಂಪುರ ಓಣಿಯ ಅಂಗನವಾಡಿ ಮಕ್ಕಳಿಗೆ ದಿನ ನಿತ್ಯ ಉಸಿರುಗಟ್ಟೋ ವಾತಾವರಣ ಇರುತ್ತೆ. 12 ವರ್ಷಗಳಿಂದ ಈ ಸಣ್ಣ ಕೋಳಿಗೂಡಿನಂತ ಅಂಗನವಾಡಿಯಲ್ಲೇ ಪುಟ್ಟ ಪುಟ್ಟ ಮಕ್ಕಳಿಗೆ ವಿಧ್ಯಾಭ್ಯಾಸ ಮಾಡಿಸಲಾಗ್ತಿದೆ‌. 12 ವರ್ಷಗಳಿಂದ ಮಕ್ಕಳು ಒದ್ದಾಡ್ತಿದ್ರೂ ಅಂಗನವಾಡಿಗೆ ಸುಸಜ್ಜಿತ  ಕಟ್ಟಡವೇ ಇಲ್ಲ.

BIG 3: ಶಿಥಿಲಾವಸ್ಥೆಯಲ್ಲಿ ರಾಣಿ ವಿಕ್ಟೋರಿಯಾ ಶಾಲೆ: ವಿಜಯಪುರ DC ಭೇಟಿ, ₹30 ಲಕ್ಷ ರಿಲೀಸ್‌

ಹೊಸ ಕಟ್ಟಡ ನಿರ್ಮಾಣಕ್ಕೆ ರಾಣೆಬೆನ್ನೂರು ನಗರಸಭೆಯಿಂದ ಜಾಗ ಗುರುತಿಸುವ ಕೆಲಸವೂ ಆಗಿಲ್ಲ, ಕಟ್ಟಡ ಕೂಡಾ ಕಟ್ಟೋದಾಗಿಲ್ಲ. ಕನಿಷ್ಟ ಒಂದು ಸುಸಜ್ಜಿತ ಬಾಡಿಗೆ ಕಟ್ಟಡದ ವ್ಯವಸ್ಥೆಯನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಿಲ್ಲ. ಅಧಿಕಾರಿಗಳು , ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದೆಕ್ಕೆಲ್ಲಾ ಕಾರಣ. ಲಕ್ಷಾಂತರ ರೂಪಾಯಿ ಸ್ಯಾಲರಿ ತಗೋಳೋ ಅಧಿಕಾರಿಗಳು ಈ ಬಡ ಮಕ್ಕಳು ನಮ್ಮ ಮನೆಯ ಮಕ್ಕಳಿದ್ದಂತೆ ಅಂತ ಯಾವತ್ತೂ ಯೋಚಿಸಿಯೇ ಇಲ್ಲ. ಮಕ್ಕಳಿಗೆ ತಾತ್ಕಾಲಿಕ ಅಂಗನವಾಡಿ ವ್ಯವಸ್ಥೆಯೂ ಇಲ್ಲ. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಪೋಷಕರ ಹಿಡಿಶಾಪಕ್ಕೆ ತುತ್ತಾಗ್ತಿದೆ.

ರಾಣೆಬೆನ್ನೂರು ನಗರ ಸದ್ಯ ಅಭಿವೃದ್ಧಿ  ಪಥದತ್ತ ದಾಪುಗಾಲಿಡುತ್ತಿರುವ ನಗರ, ಪ್ರಮುಖ ವಾಣಿಜ್ಯ ಕೇಂದ್ರ. ಈ ಅಂಗನವಾಡಿ ರಾಣೆಬೆನ್ನೂರಿನ ಹೃದಯ ಭಾಗದಲ್ಲಿದ್ದರೂ ಕೇಳೋರಿಲ್ಲ. ಅಂಗನವಾಡಿ ಸಮಸ್ಯೆ ಬಿಜೆಪಿ ಶಾಸಕ ಅರುಣ್ ಕುಮಾರ್ ಪೂಜಾರ್, ಸೇರಿದಂತೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ , ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಮಕ್ಕಳ ಒದ್ದಾಟ ನೋಡಲಾಗದೇ  BIG 3 ಈ ಅಂಗನವಾಡಿಗೆ ಕಾಲಿಟ್ಟಿದೆ.  

Latest Videos
Follow Us:
Download App:
  • android
  • ios