ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ, ಸರ್ಕಾರವು ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಿದೆ. ಮಳೆ ಕೊರತೆಯಿಂದ ಜಲಾಶಯಗಳು ಬರಿದಾಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದು, ಕೇಂದ್ರದ ನೆರವಿಗೆ ಮನವಿ ಸಲ್ಲಿಸಿದೆ.
ಬೆಂಗಳೂರು (ಆ.27): ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಅಧಿಕೃತವಾಗಿ ಘೋಷಿಸಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬೆಳೆ ಬಿತ್ತನೆ, ಜಲಾಶಯಗಳ ನೀರಿನ ಸಂಗ್ರಹ ಹಾಗೂ ಅಂತರ್ಜಲ ಮಟ್ಟದಲ್ಲಿ ಗಣನೀಯ ಕುಸಿತ ಕಂಡಿದೆ. ರಾಜ್ಯದ ಒಟ್ಟು 190 ತಾಲೂಕುಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, ಇದರಲ್ಲಿ 13 ತಾಲೂಕುಗಳಲ್ಲಿ ಅತ್ಯಂತ ಭೀಕರ ಮಳೆ ಕೊರತೆ ದಾಖಲಾಗಿದೆ. ಸದ್ಯ ಮೊದಲ ಹಂತದಲ್ಲಿ ಪರಿಸ್ಥಿತಿ ಗಂಭೀರವಾಗಿರುವ 89 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 12 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ಗುರುತಿಸಿ ಒಟ್ಟು 101 ತಾಲೂಕುಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ರಾಜ್ಯಾದ್ಯಂತ ಮಳೆ ಕೊರತೆಯ ಅಂಕಿ-ಅಂಶ:
- ದಕ್ಷಿಣ ಒಳನಾಡು: ಶೇ. 41% ರಷ್ಟು ಮಳೆ ಕೊರತೆ
- ಮಲೆನಾಡು: ಶೇ. 35% ರಷ್ಟು ಮಳೆ ಕೊರತೆ
- ಉತ್ತರ ಒಳನಾಡು: ಶೇ. 31% ರಷ್ಟು ಮಳೆ ಕೊರತೆ
- ಕರಾವಳಿ ಭಾಗ: ಶೇ. 24% ರಷ್ಟು ಮಳೆ ಕೊರತೆ
ಜಲಾಶಯಗಳಲ್ಲಿ ನೀರಿನ ಕೊರತೆ & 131 ತಾಲೂಕುಗಳಲ್ಲಿ ಅಂತರ್ಜಲ ಕುಸಿತ
ಮಳೆ ಕೊರತೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಸಂಪೂರ್ಣ ಕ್ಷೀಣಿಸಿದ್ದು, ಪ್ರಸ್ತುತ ಕೇವಲ 684 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ರಾಜ್ಯದ 131 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ರಾಜ್ಯದ 2,021 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗುವ ಆತಂಕವಿದೆ. ರಾಜ್ಯದಲ್ಲಿ ಸದ್ಯ 151 ಲಕ್ಷ ಟನ್ ಮೇವು ಸಂಗ್ರಹವಿದ್ದು, ಇದು ಕೇವಲ 33 ವಾರಗಳಿಗೆ ಮಾತ್ರ ಸಾಕಾಗಲಿದೆ. 49 ತಾಲೂಕುಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಕೇವಲ 20 ವಾರಗಳಿಗಿಂತ ಕಡಿಮೆ ಅವಧಿಯ ಮೇವು ಮಾತ್ರ ಲಭ್ಯವಿದೆ.
ಗೂಳೆ ಹೋಗುವುದನ್ನು ತಡೆಯಲು ಉದ್ಯೋಗ ಖಾತರಿ ಚುರುಕು
ಗ್ರಾಮೀಣ ಭಾಗದಲ್ಲಿ ಬರಗಾಲದಿಂದಾಗಿ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ (ಗೂಳೆ) ಹೋಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ತಡೆಯಲು ನರೇಗಾ (MGNREGA) ಯೋಜನೆಯಡಿ ಹೆಚ್ಚಿನ ಕೆಲಸ ಒದಗಿಸಲು ಸೂಚಿಸಲಾಗಿದೆ. ಜುಲೈನಿಂದ ಆಗಸ್ಟ್ ಅವಧಿಯಲ್ಲಿ ಈಗಾಗಲೇ 66.73 ಲಕ್ಷ ಮಾನವ ದಿನಗಳ (Man-days) ಉದ್ಯೋಗ ಕಲ್ಪಿಸಲಾಗಿದೆ.
ಬರ ನಿರ್ವಹಣೆಗೆ ₹635 ಕೋಟಿ ಅನುದಾನ ಬಳಕೆ:
- ಬರ ಪರಿಹಾರ ಮತ್ತು ಮುನ್ನೆಚ್ಚರಿಕಾ ಕ್ರಮಗಳಿಗಾಗಿ ಸರ್ಕಾರ ವಿವಿಧ ಹಂತಗಳಲ್ಲಿ ಒಟ್ಟು ₹635 ಕೋಟಿ ಅನುದಾನ ಒದಗಿಸಿದೆ.
- ಕುಡಿಯುವ ನೀರಿನ ಪೂರೈಕೆಗಾಗಿ: ಜಿಲ್ಲಾಧಿಕಾರಿಗಳಿಗೆ ₹117 ಕೋಟಿ ಬಿಡುಗಡೆ.
- ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ: ₹189 ಕೋಟಿ ಹಂಚಿಕೆ.
- ಡಿಸಿಗಳ ಪಿಡಿ (PD) ಖಾತೆಯಲ್ಲಿ: ₹329 ಕೋಟಿ ಅನುದಾನ ಲಭ್ಯ.
- ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ಕಿಟ್‌ಗಳನ್ನು ವಿತರಿಸಲಾಗುತ್ತಿದೆ.
ಕೇಂದ್ರದಿಂದ ₹1,239 ಕೋಟಿ ನೆರವಿಗೆ ಮನವಿ
15ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ರಾಜ್ಯಕ್ಕೆ ಬರ ಪರಿಹಾರವಾಗಿ ಕೇಂದ್ರ ಸರ್ಕಾರದಿಂದ ಒಟ್ಟು ₹1,239 ಕೋಟಿ ಅನುದಾನ ಬಿಡುಗಡೆಯಾಗಬೇಕಿದೆ. ಇದರಲ್ಲಿ ಮೊದಲ ಕಂತಾಗಿ ₹450 ಕೋಟಿ ತಕ್ಷಣವೇ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಸಮಗ್ರ ವರದಿ ಹಾಗೂ ಮನವಿ ಪತ್ರ ಸಲ್ಲಿಸಲಾಗುತ್ತಿದೆ. ಬರಗಾಲದ ಸಂಕಷ್ಟದಲ್ಲಿರುವ ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕಾಲಮಿತಿಯೊಳಗೆ ಅಗತ್ಯ ಹಣಕಾಸಿನ ನೆರವು ನೀಡಬೇಕು ಎಂದು ಸರ್ಕಾರ ಒತ್ತಾಯಿಸಿದೆ.


