ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಭದ್ರಕಾಳಿ ವಿಗ್ರಹ ಕಣ್ಮರೆ!
* ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿದ್ದ ಭದ್ರಕಾಳಿ ವಿಗ್ರಹ
* ಭಾರತೀಯ ಪುರಾತತ್ವ ಇಲಾಖೆಗೆ ಒಳಪಟ್ಟಿರುವ ದೇವಾಲಯ
* ಸಮಂಜಸವಾದ ಉತ್ತರ ನೀಡದ ದೇವಾಲಯದ ಸಿಬ್ಬಂದಿ
ನಂಜನಗೂಡು(ಸೆ.18): ನಾಡಿನ ಪ್ರಸಿದ್ಧ ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿದ್ದ ಭದ್ರಕಾಳಿ ವಿಗ್ರಹ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಭಾರತೀಯ ಪುರಾತತ್ವ ಇಲಾಖೆಗೆ ಒಳಪಟ್ಟಿರುವ ಈ ದೇವಾಲಯದ ಸುಮಾರು 3 ಅಡಿಗಳಷ್ಟು ಎತ್ತರದ ಭದ್ರಕಾಳಿಯ ಮೂರ್ತಿ ಕಾಣೆಯಾಗಿದೆ. ಯಾರಿಗೂ ಸಮಂಜಸವಾದ ಉತ್ತರವನ್ನು ದೇವಾಲಯ ಸಿಬ್ಬಂದಿ ನೀಡುತ್ತಿಲ್ಲ. ಪುರಾತತ್ವ ಇಲಾಖೆಯ ಕಾವಲುಗಾರರು, ದೇವಾಲಯದ ಒಳಾವರಣದಲ್ಲಿ ಇರುವ ಮೂರ್ತಿಗಳನ್ನೇ ಸಂರಕ್ಷಣೆ ಮಾಡುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಸರಿಯಾದ ನಿರ್ವಹಣೆ ಇಲ್ಲದೇ ಹಾಗೂ ಅಜಾಗರೂಕತೆಯಿಂದ ಮೂರ್ತಿಯು ಮುರಿದು ಬಿದ್ದಿದ್ದು, ಈ ಸಂಗತಿ ಭಕ್ತರಿಗೆ, ಸಾರ್ವಜನಿಕರಿಗೆ ತಿಳಿಸದೇ ದೇವಾಲಯದ ಸಿಬ್ಬಂದಿ ದೇವರಮೂರ್ತಿಯನ್ನು ಬೇರೆಡೆಗೆ ಸ್ಥಳಾಂತರಿಸಿ ವಿಚಾರವನ್ನು ಗೌಪ್ಯವಾಗಿ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದೇಗುಲ ಧ್ವಂಸ : ಇದಕ್ಕೆಲ್ಲಾ ಬಿಜೆಪಿ ಸರ್ಕಾರವೇ ಕಾರಣ
ದೇವಾಲಯಗಳ ನಿರ್ಮಾಣ ಕಾಲದಲ್ಲೇ ದೇವಾಲಯದ ಎಡಭಾಗದಲ್ಲಿ 64 ನಯನಾರ್ ವಿಗ್ರಹಗಳು ಬಲಭಾಗದಲ್ಲಿ 18 ಶಿವನ ಅವತಾರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನೂರಾರು ವರ್ಷಗಳ ಹಿಂದೆ ಪ್ರತಿಷ್ಠಾಪನೆಗೊಂಡ ವಿಗ್ರಹಕ್ಕೆ ಹಾಕಿದ್ದ ಅಷ್ಟ ಬಂಧನ ಶಕ್ತಿ ಕಳೆದುಕೊಂಡು ಮೂರ್ತಿಗಳು ಅಲುಗಾಡುವ ಸ್ಥಿತಿಯನ್ನು ತಲುಪಿದ್ದರೂ ದುರಸ್ತಿ ಮಾಡಿರಲಿಲ್ಲ, ಈ ಕುರಿತು ಈ ಹಿಂದೆಯೇ ಅಷ್ಟಮಂಗಲ ಪ್ರಶ್ನೆ ಹಾಕಿದ್ದಾಗ ‘ಅಷ್ಟಬಂಧನ ಹಾಕಿ ಕಲಾಪೂರ್ಣ ಮಾಡಬೇಕೆಂದು ಪ್ರಸ್ತವನೆ ಸಲ್ಲಿಕೆಯಾಗಿತ್ತು. ಆದರೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಆಸಕ್ತಿ ತೋರಲಿಲ್ಲ. 100 ಕೋಟಿಗೂ ಹೆಚ್ಚು ಹಣ ದೇವಾಲಯ ಖಾತೆಯಲ್ಲಿದೆ, ಇಷ್ಟೆಲ್ಲ ಆದಾಯದಲ್ಲಿ ಸಮೃದ್ಧವಾಗಿದ್ದರೂ ಮೂರ್ತಿಗಳ ಸಂರಕ್ಷಣೆಗೆ ಹಣ ವ್ಯಯ ಮಾಡಲು ಆಸಕ್ತಿ ತೋರುತ್ತಿಲ್ಲ.