ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ 'ವಾರ್ಡ್ ಒನ್' ಎಂಬ ಮಹಾ ಅಭಿಯಾನವನ್ನು ನವೆಂಬರ್ 1ರಂದು ಆರಂಭಿಸಲಾಗಿದೆ. ಮೊದಲ ದಿನವೇ ರಸ್ತೆ ಗುಂಡಿ ಮುಚ್ಚುವುದು, ತ್ಯಾಜ್ಯ ತೆರವು ಮತ್ತು ಫುಟ್ಪಾತ್ ದುರಸ್ತಿಯಂತಹ ಕಾರ್ಯಗಳಲ್ಲಿ ಈ ಆಂದೋಲನವು ದಾಖಲೆಯ ಪ್ರಗತಿ ಸಾಧಿಸಿದೆ.
ಬೆಂಗಳೂರು (ನ.02): ಬೆಂಗಳೂರಿನ ಸ್ವಚ್ಛತೆ ಕಾಪಾಡುವುದು, ಪಾದಚಾರಿ ಮಾರ್ಗಗಳ ದುರಸ್ತಿ, ರಸ್ತೆ ಗುಂಡಿ ಮುಚ್ಚುವುದು ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಮಹತ್ತರ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ‘ವಾರ್ಡ್ ಒನ್’ (Ward One) ಮಹಾ ಅಭಿಯಾನಕ್ಕೆ ನವೆಂಬರ್ 1 ರಂದು ಅಧಿಕೃತ ಚಾಲನೆ ದೊರೆತಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಹಾಗೂ ಪಾಲಿಕೆ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಆರಂಭವಾಗಿರುವ ಈ ಆಂದೋಲನವು, ಮೊದಲ ದಿನವೇ ನಗರದ 23 ಕಿಲೋಮೀಟರ್ ರಸ್ತೆಗಳಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ದಾಖಲೆಯ ಪ್ರಗತಿ ಸಾಧಿಸಿದೆ.
ಮೊದಲ ದಿನವೇ ಭರ್ಜರಿ ಫಲಿತಾಂಶ: ಅಂಕಿ-ಸಂಖ್ಯೆಗಳು ಇಲ್ಲಿವೆ ನೋಡಿ
ಅಭಿಯಾನದ ಮೊದಲ ದಿನವೇ ನೂರಾರು ಪೌರಕಾರ್ಮಿಕರು, ಜೆಸಿಬಿ, ಟ್ರ್ಯಾಕ್ಟರ್ಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ರಸ್ತೆಗಿಳಿದು ಕಾರ್ಯನಿರ್ವಹಿಸಿದ್ದು, ಪ್ರಮುಖ ಸಾಧನೆಗಳು ಹೀಗಿವೆ:
21 ರಸ್ತೆ ಗುಂಡಿಗಳಿಗೆ ಮುಕ್ತಿ: ವಾಹನ ಸವಾರರಿಗೆ ಕಿರಿಕಿರಿಯುಂಟುಮಾಡುತ್ತಿದ್ದ 21 ರಸ್ತೆ ಗುಂಡಿಗಳನ್ನು ಒಂದೇ ದಿನದಲ್ಲಿ ಶಾಶ್ವತವಾಗಿ ಮುಚ್ಚಲಾಗಿದೆ.
197 ಟನ್ ತ್ಯಾಜ್ಯ ತೆರವು: ನಗರದ ಸೌಂದರ್ಯ ಹಾಳುಗೆಡವುತ್ತಿದ್ದ 80 ಸ್ಥಳಗಳಿಂದ ಬರೋಬ್ಬರಿ 197 ಟನ್ ಕಟ್ಟಡ ನಿರ್ಮಾಣ (C&D) ತ್ಯಾಜ್ಯ ಹಾಗೂ 11 ಟನ್ ಸಾಮಾನ್ಯ ಕಸವನ್ನು ವಿಲೇವಾರಿ ಮಾಡಲಾಗಿದೆ.
22 ಬ್ಲಾಕ್ ಸ್ಪಾಟ್ ಕ್ಲಿಯರ್: ಸಾರ್ವಜನಿಕರು ನಿರಂತರವಾಗಿ ಕಸ ಎಸೆಯುತ್ತಿದ್ದ 22 ಕಸದ ಕಪ್ಪು ಚುಕ್ಕೆಗಳನ್ನು (Black Spots) ಸ್ವಚ್ಛಗೊಳಿಸಿ ಸುಂದರಗೊಳಿಸಲಾಗಿದೆ.
ಪಾದಚಾರಿ ಮಾರ್ಗಗಳ ಸುಧಾರಣೆ: 0.8 ಕಿ.ಮೀ ಉದ್ದದ ಫುಟ್ಪಾತ್ ದುರಸ್ತಿ ಮಾಡಲಾಗಿದ್ದು, ಪಾದಚಾರಿಗಳಿಗೆ ಅಡ್ಡಿಯಾಗಿದ್ದ 33 ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ.
ಫ್ಲೆಕ್ಸ್, ಬ್ಯಾನರ್ ತೆರವು: ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದ 214 ಅನಧಿಕೃತ ಫ್ಲೆಕ್ಸ್ಗಳು ಮತ್ತು ಪೋಸ್ಟರ್ಗಳನ್ನು ಕಿತ್ತೊಗೆಯಲಾಗಿದೆ. ಜೊತೆಗೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ 52 ಹಳೆಯ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಯಾವೆಲ್ಲಾ ವಾರ್ಡ್ಗಳಲ್ಲಿ ಅಭಿಯಾನ ಆರಂಭ?
ಉತ್ತರ ನಗರ ಪಾಲಿಕೆಯ ಪ್ರಮುಖ ವಿಭಾಗಗಳ ಆಯ್ದ ವಾರ್ಡ್ಗಳಲ್ಲಿ ಈ ಅಭಿಯಾನ ಏಕಕಾಲದಲ್ಲಿ ಆರಂಭವಾಗಿದೆ:
- ವಿದ್ಯಾರಣ್ಯಪುರ ವಿಭಾಗ (ವಾರ್ಡ್ 14): ರಾಜೀವ್ ಗಾಂಧಿ ನಗರ
- ಬ್ಯಾಟರಾಯನಪುರ ವಿಭಾಗ (ವಾರ್ಡ್ 17): ಜಕ್ಕೂರು
- ಸರ್ವಜ್ಞನಗರ ವಿಭಾಗ (ವಾರ್ಡ್ 23): ಹೆಣ್ಣೂರು
- ಪುಲಿಕೇಶಿನಗರ ವಿಭಾಗ (ವಾರ್ಡ್ 47): ಪುಲಿಕೇಶಿನಗರ
- ಯಲಹಂಕ ವಿಭಾಗ (ವಾರ್ಡ್ 5): ಯಲಹಂಕ ನ್ಯೂ ಟೌನ್
- ಹೆಬ್ಬಾಳ ವಿಭಾಗ (ವಾರ್ಡ್ 57): ಭೂಪಸಂದ್ರ
- ದಾಸರಹಳ್ಳಿ ವಿಭಾಗ (ವಾರ್ಡ್ 67): ಶೆಟ್ಟಿಹಳ್ಳಿ
ಅನಧಿಕೃತ ಕಸ ಎಸೆದವರಿಗೆ ಶಾಕ್: ₹2.17 ಲಕ್ಷ ದಂಡ!
ಅಸಮರ್ಪಕ ತ್ಯಾಜ್ಯ ನಿರ್ವಹಣೆ ಹಾಗೂ ಘನತ್ಯಾಜ್ಯ ನಿಯಮಗಳನ್ನು ಉಲ್ಲಂಘಿಸಿದ 68 ವಾಣಿಜ್ಯ ಮಳಿಗೆಗಳನ್ನು ಪಾಲಿಕೆ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದ್ದಾರೆ. ನಿಯಮ ಪಾಲಿಸದ ಅಂಗಡಿ ಮಾಲೀಕರಿಗೆ ಒಟ್ಟು ₹2,17,700 ದಂಡ ವಿಧಿಸಿ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಹಲವು ಇಲಾಖೆಗಳ ಮಹಾ ಸಂಗಮ:
‘ವಾರ್ಡ್ ಒನ್’ ಕೇವಲ ಪಾಲಿಕೆಗಷ್ಟೇ ಸೀಮಿತವಾಗಿಲ್ಲ. ಬೆಸ್ಕಾಂ (BESCOM), ಬಿಡಬ್ಲ್ಯೂಎಸ್ಎಸ್ಬಿ (BWSSB), ಅರಣ್ಯ, ತೋಟಗಾರಿಕೆ, ಕೆರೆ ಇಲಾಖೆ, ಮೆಟ್ರೋ (BMRCL), ಬಿಡಿಎ (BDA) ಮತ್ತು ಸಂಚಾರ ಪೊಲೀಸ್ ಇಲಾಖೆಗಳು ಒಟ್ಟಾಗಿ ಈ ಕಾರ್ಯದಲ್ಲಿ ಕೈಜೋಡಿಸಿವೆ. ಪರಿಣಾಮವಾಗಿ, ಸಾರ್ವಜನಿಕರಿಂದ ಬಂದ 32 ದೂರುಗಳನ್ನು ಸ್ಥಳದಲ್ಲೇ ಪರಿಹರಿಸಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯು ಸ್ವಚ್ಛ, ಸುಂದರ ಹಾಗೂ ಗುಂಡಿಮುಕ್ತ ರಸ್ತೆಗಳ ನಗರವನ್ನಾಗಿ ಮಾಡುವವರೆಗೂ ಈ ‘ವಾರ್ಡ್ ಒನ್’ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






