ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ಡಾ. ಶ್ರೀನಿಧಿ ಅವರ ವಿವಾಹವು ರಾಮನಗರದ ಜಾನಪದ ಲೋಕದಲ್ಲಿ ಸರಳವಾಗಿ ಮಂತ್ರ ಮಾಂಗಲ್ಯದ ಮೂಲಕ ನೆರವೇರಲಿದೆ. ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕುಟುಂಬದ ಸಮ್ಮತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ರಾಮನಗರ (ನ.26): ಮಾಜಿ ಸಂಸದ ದಿವಂಗತ ಆರ್. ಧ್ರುವನಾರಾಯಣ ಅವರ ಪುತ್ರ ಹಾಗೂ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ವೈದ್ಯೆ ಡಾ. ಶ್ರೀನಿಧಿ ಅವರ ವಿವಾಹವು ರಾಮನಗರದ ಜಾನಪದ ಲೋಕದಲ್ಲಿ ಗುರುವಾರ ನೆರವೇರಲಿದೆ. ಶಾಸಕನಾಗಿದ್ದರೂ ಅದ್ಧೂರಿತನ ತೋರಿಸದೇ ಸರಳವಾಗಿ ಮಂತ್ರ ಮಾಂಗಲ್ಯದ ಮೂಲಕ ಮದುವೆ ಮಾಡಿಕೊಳ್ಳುತ್ತಿದ್ದು, ಮದುವೆ ಕಾರ್ಯಕ್ರಮಕ್ಕಾಗಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಮೂಲದ ಡಾ. ಶ್ರೀನಿಧಿ ಅವರೊಂದಿಗೆ ದರ್ಶನ್ ಧ್ರುವನಾರಾಯಣ್ ಅವರು ಮಂತ್ರಮಾಂಗಲ್ಯದ ಮೂಲಕ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸೇರಿದಂತೆ ಹಲವು ಸಚಿವರು, ಶಾಸಕರು ಹಾಗೂ ಕುಟುಂಬದ ಆಪ್ತರು ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿವಾಹ ಮತ್ತು ಆರತಕ್ಷತೆಯ ಪ್ರಮುಖ ವಿವರಗಳು

ವಿವಾಹ ಸ್ಥಳ: ರಾಮನಗರದಲ್ಲಿನ ಜಾನಪದ ಲೋಕದಲ್ಲಿ ಸರಳ ಮಂತ್ರಮಾಂಗಲ್ಯ ವಿವಾಹ.

ಆರತಕ್ಷತೆ: ಜಾನಪದ ಲೋಕದ ವಿವಾಹದ ಬಳಿಕ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ನಿಶ್ಚಿತಾರ್ಥ: ಕಳೆದ ನವೆಂಬರ್ 2ರಂದು ಮಂಡ್ಯದ ಕೆ.ಆರ್. ಪೇಟೆಯಲ್ಲಿ ಆಪ್ತರು ಹಾಗೂ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿತ್ತು.

ನಾಲ್ಕು ವರ್ಷಗಳ ಪ್ರೇಮಕ್ಕೆ ದಾಂಪತ್ಯದ ಮುದ್ರೆ

ದರ್ಶನ್ ಧ್ರುವನಾರಾಯಣ್ ಮತ್ತು ಡಾ. ಶ್ರೀನಿಧಿ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಸ್ನೇಹ ಮತ್ತು ಪ್ರೀತಿಯಿಂದ ಇದ್ದು, ಇಬ್ಬರೂ ಕುಟುಂಬಗಳ ಸಮ್ಮತಿಯೊಂದಿಗೆ ಮದುವೆಯಾಗುತ್ತಿದ್ದಾರೆ. ತಂದೆ ಆರ್. ಧ್ರುವನಾರಾಯಣ ಅವರ ಅಕಾಲಿಕ ನಿಧನದ ನಂತರ ಶಾಸಕರಾಗಿ ಜನಮನ್ನಣೆ ಗಳಿಸಿದ ದರ್ಶನ್ ಅವರ ಬದುಕಿನಲ್ಲಿ ಇದೀಗ ಸಂಭ್ರಮದ ಕ್ಷಣ ಮೂಡಿಬಂದಿದೆ.