ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಹತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಆಶಾ ಕಾರ್ಯಕರ್ತೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ವೇತನ ಮತ್ತು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ ಈಗ 10 ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಸರ್ಕಾರ ಮತ್ತು ಆಶಾ ಕಾರ್ಯಕರ್ತೆಯರ ಭಿನ್ನಮತ ಈಗ ಬಹಿರಂಗ ವಾಗ್ವಾದದ ಸ್ವರೂಪ ಪಡೆದುಕೊಂಡಿದೆ. ಹತ್ತು ದಿನಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಆಶಾ ಕಾರ್ಯಕರ್ತೆಯರ ಕಾರ್ಯವೈಖರಿ ಮತ್ತು ವಿಶ್ವಾಸದ ಕುರಿತು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದು, ಇದಕ್ಕೆ ಆಶಾ ಕಾರ್ಯಕರ್ತೆಯರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಆಶಾಗಳ ಬಗ್ಗೆ ಸಚಿವ ಯು.ಟಿ. ಖಾದರ್ ಬಹಿರಂಗ ಅಸಮಾಧಾನ

ಆಶಾ ಕಾರ್ಯಕರ್ತೆಯರ ನಡೆಗೆ ವೈಯಕ್ತಿಕವಾಗಿಯೂ ಹಾಗೂ ಆರೋಗ್ಯ ಸಚಿವನಾಗಿಯೂ ತಮಗೆ ಬೇಸರವಾಗಿದೆ ಎಂದು ಯು.ಟಿ. ಖಾದರ್ ಹೇಳಿದ್ದಾರೆ. ನಮ್ಮ ಮೇಲೆ ಆಶಾ ಕಾರ್ಯಕರ್ತೆಯರು ವಿಶ್ವಾಸ ಇಡದಿರುವಾಗ, ನಾವು ಯಾಕೆ ಅವರ ಮೇಲೆ ವಿಶ್ವಾಸ ಇಡಬೇಕು. ನೀವು ಕೇಂದ್ರದಿಂದ ನೇಮಕಾತಿ ಆದವರು. ರಾಜ್ಯದಿಂದ ಅಲ್ಲ. ಕೇಂದ್ರದವರು ಅನುದಾನ ಕೊಡುತ್ತೇವೆ ಅಂತ ಹೇಳಿ ಕೊಡಲಿಲ್ಲ. ನೀವು ಕೇಂದ್ರದಿಂದ ನೇಮಕ ಆಗಿದ್ದರೂ ಕೂಡ ನಮ್ಮ ಜನರು. ನಮ್ಮ ಜೊತೆ ಕೆಲಸ ಮಾಡುವವರು. ಇವತ್ತು ಅಕ್ಷರ ದಾಸೋಹದವರು 4,500 ಸಾವಿರಕ್ಕೆ ದುಡಿಯುತ್ತಿದ್ದಾರೆ. ಟೀಚರ್ ಗಳು 12 ಸಾವಿರಕ್ಕೆ ದುಡಿಯುತ್ತಿದ್ದಾರೆ. ದಾದಿಯರು 10 ಸಾವಿರಕ್ಕೆ ದುಡಿಯುತ್ತಿದ್ದಾರೆ. ಅದು ಬಿಟ್ಟು ಈಗಲೇ ಆಗಬೇಕು ಬರೆದುಕೊಡಬೇಕು ಎಂದರೆ ಹೇಗೆ? ಇಲಾಖೆಗಳ ಜೊತೆ ಈ ಬಗ್ಗೆ ಚರ್ಚೆ ಮಾಡಬೇಕು. ಸರ್ಕಾರದ ಅಧೀನದಲ್ಲೇ ಇದ್ದು ಈ ರೀತಿ ಮಾಡೋದು ಸರಿಯಾ ಎಂದು ಅವರು ಪ್ರಶ್ನಿಸಿದ್ದಾರೆ.

10 ದಿನಗಳ ಕಾಲ ಪ್ರತಿಭಟನೆ ನಡೆದರೂ ಆರೋಗ್ಯ ಇಲಾಖೆ ಯಾವುದೇ ದೊಡ್ಡ ಸಮಸ್ಯೆಗೆ ಸಿಲುಕಿಲ್ಲ ಮತ್ತು ಗ್ರಾಮೀಣ ಭಾಗಗಳಲ್ಲೂ ಸಮಸ್ಯೆ ಉಂಟಾಗಿಲ್ಲ. ಹೆರಿಗೆ ಸೇರಿದಂತೆ ಇತರ ಆರೋಗ್ಯ ಸೇವೆಗಳು ಸುಗಮವಾಗಿಯೇ ಸಾಗುತ್ತಿವೆ ಎಂದಿರುವ ಖಾದರ್, ಆಶಾ ಕಾರ್ಯಕರ್ತೆಯರು ಇದ್ದರೂ ವ್ಯವಸ್ಥೆ ನಡೆಯುತ್ತದೆ, ಇಲ್ಲದಿದ್ದರೂ ನಡೆಯುತ್ತದೆ ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೆ ವೈದ್ಯರು ಮತ್ತು ದಾದಿಯರು ಇಲ್ಲವೇ ಎಂದೂ ಅವರು ಪ್ರಶ್ನಿಸಿದ್ದಾರೆ.

ಕೆಳಹಂತದ ವಾಸ್ತವ ಮರೆಮಾಚಲಾಗುತ್ತಿದೆ: ಆಶಾಗಳ ತಿರುಗೇಟು

ಸಚಿವ ಯು.ಟಿ. ಖಾದರ್ ಅವರ ಹೇಳಿಕೆಗೆ ಆಶಾ ಕಾರ್ಯಕರ್ತೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರು ಮೊದಲು ಕೆಳಹಂತದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಸರಿಯಾದ ಮಾಹಿತಿ ಪಡೆಯಲಿ.

ಆಶಾ ಕಾರ್ಯಕರ್ತೆಯರು ಲಭ್ಯವಿಲ್ಲದ ಕಾರಣ ಕೆಲವೆಡೆ ಮನೆಗಳಲ್ಲೇ ಹೆರಿಗೆಗಳಾಗಿವೆ ಮತ್ತು ಶಿಶು ಮರಣ ಪ್ರಕರಣಗಳೂ ಸಂಭವಿಸಿವೆ. ಆದರೆ ಇಂತಹ ಗಂಭೀರ ವಿಷಯಗಳನ್ನು ಸಚಿವರು ಮರೆಮಾಚುತ್ತಿದ್ದಾರೆ ಎಂದು ಕಾರ್ಯಕರ್ತೆಯರು ಆರೋಪಿಸಿದ್ದಾರೆ. ಗರ್ಭಿಣಿಯರು ಮತ್ತು ಶಿಶುಗಳಿಗೆ ಸಕಾಲಕ್ಕೆ ಲಸಿಕೆ ಹಾಕಿಸಲು ಆಗದೆ ಕುಟುಂಬಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಕೊರೊನಾ ಕಾಲದ ಸೇವೆಯನ್ನು ನೆನಪಿಸಿದ ಕಾರ್ಯಕರ್ತೆಯರು

ವಿಶ್ವಾಸದ ಬಗ್ಗೆ ಮಾತನಾಡುತ್ತಿರುವ ಸಚಿವರ ನಡೆಯನ್ನು ಖಂಡಿಸಿರುವ ಆಶಾ ಕಾರ್ಯಕರ್ತೆಯರು, ತಮಗೆ ಈಗಲೂ ವಿಶ್ವಾಸವಿದೆ ಮತ್ತು ಆ ವಿಶ್ವಾಸದ ಮೇಲೆಯೇ ಇಷ್ಟು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಕೊರೊನಾ ಸಂಕಷ್ಟದ ಅವಧಿಯಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದಾಗ ಈ ವಿಶ್ವಾಸದ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಆರೋಗ್ಯ ಸಚಿವ ಯುಟಿ ಖಾದರ್ ಹೇಳಿಕೆ ವಿರುದ್ಧ ಸಿಡಿದಿದ್ದ ಆಶಾ ಹೋರಾಟದ ಮುಖಂಡೆ ನಾಗಲಕ್ಷ್ಮಿ, ಸಚಿವ ಹೇಳಿಕೆ‌ ಖಂಡಸುತ್ತೇವೆ. ನಮ್ಮನ್ನು ನಿರ್ಲಕ್ಷ್ಯದಿಂದ ಈ ಮಾತನ್ನಾಡಿದ್ದಾರೆ. ವೈದ್ಯರು ವೈದ್ಯರ ಕೆಲಸ ಮಾಡುತ್ತಿದ್ದಾರೆ, ನರ್ಸ್ ಗಳು ನರ್ಸ್ ಕೆಲಸ ಮಾಡುತ್ತಿದ್ದಾರೆ. ಆಶಾ ಕೆಲಸ ಯಾರು ಮಾಡುತ್ತಿದ್ದಾರೆ? ಕಳೆದ ಹತ್ತು ದಿನದಿಂದ ಏನಾಗಿದೆ ಎಂದು ಅವರ ಸಿಬ್ಬಂದಿ ಕರೆಕ್ಟ್ ಫ್ಯಾಕ್ಟ್ ಸಂಗ್ರಹ ಮಾಡಲಿ. ಸಚಿವರದ್ದು ಬೆದರಿಕೆ ಮತ್ತು ಹೆದರಿಸುವಂತ ಹೇಳಿಕೆ. ಸಂವಿಧಾನದ ದಿನದಂದೆ, ನಮ್ಮ ಹಕ್ಕು ಧಮನ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಮನೆಗಳಲ್ಲಿ ಗರ್ಭಿಣಿಯರ ಹೆರಿಗೆ ಆಗುತ್ತಿದೆ. ಹೆರಿಗೆ ಸಾವು ಆಗುತ್ತಿವೆ. ಕೆಲವೇ ಸಮಯದಲ್ಲಿ ಎಷ್ಟು ಮರಣವಾಗಿದೆ ಎಂದು ವರದಿ ನೀಡುತ್ತೇವೆ. ಸಚಿವರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು.

ಸರ್ಕಾರದ ಮೇಲೆ ಅಪಾರವಾದ ವಿಶ್ವಾಸ ಇದೆ, ಇತ್ತು. ಆದರೆ ಹಿಂದೆ ವಿಶ್ವಾಸ ದ್ರೋಹ ಮಾಡಿದವರು ನೀವು. ಕಳೆದ ಮೂರು ವರ್ಷಗಳಲ್ಲಿ ಹೇಳಿದನ್ನ ಮಾಡದೆ, ವಿಶ್ವಾಸ ದ್ರೋಹ ಮಾಡಿದವರು ನೀವು. ಪ್ರತಿಭಟನೆ ಮಾಡುವ 20 ದಿನದ ಮುಂಚೆಯೇ ಮಾಹಿತಿ ನೀಡಿದ್ದೇವೆ ಏನ್ ಮಾಡಿದ್ರಿ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ನಂಬಿಕೆ ಇಡಿ, ಹಠ ಬಿಡಿ: ಸಿಎಂ

ಇನ್ನು ಜಪಾನ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿರುವ ಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಆಶಾ ಕಾರ್ಯಕರ್ತರ ಜೊತೆ ನಾಳೆ ಮಾತಾಡುತ್ತೇನೆ. ನಿಮ್ಮ ಪರ ನಾನು ಇದ್ದೇನೆ. ಸರ್ಕಾರ ಹೆದರಿಸಿಕೊಂಡು ಇರಬೇಡಿ. ರಾಜಕೀಯ ಮಾಡೋರು ನಿಮಗೆ ಸಹಾಯ ಮಾಡಲ್ಲ. ಕೇಂದ್ರ ಸರ್ಕಾರಕ್ಕೆ ಯಾಕೆ ಹಣ ಕೇಳ್ತಾ ಇಲ್ಲ‌. ಯುಪಿಎ ಹಣ ನೀಡಿದ್ದೆ ಕೊನೆ. ಬಿಜೆಪಿ ನಾಯಕರು ಯಾಕೆ ಒತ್ತಡ ಹಾಕಲ್ಲ. ಕೇವಲ ನಮ್ಮ ಸರ್ಕಾರದ ಮೇಲೆ ಹೇಳುತ್ತೀರಿ? ದಯಮಾಡಿ ಮನವಿ ಮಾಡುತ್ತೇನೆ. ಪ್ರತಿಷ್ಠೆ ಬಿಡಿ, ಹೋರಾಟ ಕೈಬಿಡಿ‌. ನಾವು ಎಲ್ಲಾ ಗ್ಯಾರಂಟಿ ನೀಡಿದ್ದೇವೆ. ಯುವನಿಧಿ ಒಂದನ್ನು ಹೊರತುಪಡಿಸಿ ಎಲ್ಲಾ ನೀಡಿದ್ದೇವೆ ಎಂದರು.

ಯಟಿ ಖಾದರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ, ನಮಗೆ ಎಲ್ಲರೂ ಬೇಕು. ನಾನು ಮುಖ್ಯಮಂತ್ರಿ ಆಗಿ ಮನವಿ ಮಾಡುತ್ತೇನೆ. ನಾನು ಹಣಕಾಸು ಇಲಾಖೆ ಜೊತೆ ನಾಲ್ಕು ಬಾರಿ ಚರ್ಚೆ ಮಾಡಿದ್ದೇನೆ. ಹೆಣ್ಣುಮಕ್ಕಳು ಮನೆಯ ಕಣ್ಣು. ನಿಮ್ಮ ಜೊತೆ ನಾನು ಇದ್ದೇನೆ. ನಾನು ಮನವಿ ಮಾಡುತ್ತೇನೆ ಹೋರಾಟ ಬಿಡಿ. ನಂಬಿಕೆ ಇಡಿ. ಹಠ ಬಿಡಿ. ನಮೃತೆಯಿಂದ ಹೇಳುತ್ತೇನೆ ಎಂದು ಮನವಿ ಮಾಡಿದ್ದಾರೆ.