ಬೆಂಗಳೂರಿನಲ್ಲಿ ಪುಟ್ಟ ಮಗು ವೆನ್ನೆಲಾಳನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ತಾಯಿ ಪ್ರಿಯಾಂಕಳನ್ನು, ನಾಲ್ಕು ದಿನಗಳ ಸತತ ಕಾರ್ಯಾಚರಣೆಯ ನಂತರ ಕಾಡುಗೋಡಿ ಪೊಲೀಸರು ಹಾಸನದ ಸಕಲೇಶಪುರದಲ್ಲಿ ಬಂಧಿಸಿದ್ದಾರೆ. ಪ್ರಕರಣ ದಾಖಲಿಸಲು ವಿಳಂಬ ಮಾಡಿದ ಪೊಲೀಸರ ವಿರುದ್ಧ ಮಕ್ಕಳ ರಕ್ಷಣಾ ಆಯೋಗವು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದೆ.

ಬೆಂಗಳೂರು: ರಾಜಧಾನಿಯ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪುಟ್ಟ ಮಗು ವೆನ್ನೆಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ನಾಲ್ಕು ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ತಲೆಮರೆಸಿಕೊಂಡಿದ್ದ ಹೆತ್ತ ತಾಯಿ ಪ್ರಿಯಾಂಕಳನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಸತತ ಕಾರ್ಯಾಚರಣೆ ನಡೆಸಿದ ಕಾಡುಗೋಡಿ ಪೊಲೀಸರು ಆರೋಪಿಯನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮಗುವನ್ನು ಕೊಲೆ ಮಾಡಿದ ಬಳಿಕ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಆರೋಪಿ ಪ್ರಿಯಾಂಕ ನಿರಂತರವಾಗಿ ಜಾಗ ಬದಲಾಯಿಸುತ್ತಿದ್ದಳು ಬೆಂಗಳೂರು ನಂತರ ಮೈಸೂರು ಅಲ್ಲಿಂದ ಹಾಸನ ಜಿಲ್ಲೆಯ ಸಕಲೇಶಪುರ ಹೋಗಿದ್ದಳು. ಮಾರ್ಚ್ ತಿಂಗಳಲ್ಲೇ ನಡೆದಿದ್ದ ಈ ಭೀಕರ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಲ್ಕು ದಿನಗಳ ಸತತ ಕಾರ್ಯಾಚರಣೆ:

ಬೆಂಗಳೂರಿನಲ್ಲಿ ಮಗುವನ್ನು ಹತ್ಯೆಗೈದ ವಿಷಯ ಬಹಿರಂಗವಾಗಿದ್ದೇ ತಡ ಈಕೆ ಮೊದಲು ಮೈಸೂರಿಗೆ ಓಡಿಹೋಗಿದ್ದಳು. ಪೊಲೀಸರು ತನ್ನನ್ನು ಬೆನ್ನಟ್ಟುತ್ತಿರುವ ಸುಳಿವು ಸಿಗುತ್ತಿದ್ದಂತೆ ಮೈಸೂರಿನಿಂದ ಹಾಸನ ಜಿಲ್ಲೆಯ ಸಕಲೇಶಪುರಕ್ಕೆ ತೆರಳಿ ತಲೆಮರೆಸಿಕೊಂಡಿದ್ದಳು. ಆರೋಪಿಯ ಸುಳಿವು ಪತ್ತೆಹಚ್ಚಲು ಕಾಡುಗೋಡಿ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಹಗಲಿರುಳು ಸತತ ಹುಡುಕಾಟ ನಡೆಸಿದ್ದರು. ಕೊನೆಗೂ ಸಕಲೇಶಪುರದಲ್ಲಿ ಆಕೆಯನ್ನು ಬಂಧಿಸಿ, ಸದ್ಯ ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರುತ್ತಿದ್ದಾರೆ.

ಪೊಲೀಸ್ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಮಕ್ಕಳ ರಕ್ಷಣಾ ಆಯೋಗದ ಕೆಂಗಣ್ಣು

ಈ ಪ್ರಕರಣ ಮಾಧ್ಯಮಗಳ ಮೂಲಕ ಹೊರಬರುತ್ತಿದ್ದಂತೆ, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ತೀವ್ರವಾಗಿ ಪ್ರತಿಕ್ರಿಯಿಸಿದೆ. ಆಯೋಗದ ಅಧ್ಯಕ್ಷರಾದ ಸಂತೋಷ್ ಕುಮಾರ್ ಅವರು ಪ್ರಕರಣದ ಹಾದಿ ಹಾಗೂ ಪೊಲೀಸರ ನಡೆ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಮಾರ್ಚ್ ತಿಂಗಳಲ್ಲೇ ಮಗುವಿನ ಕೊಲೆಯಾಗಿದ್ದರೂ, ಪ್ರಕರಣ ದಾಖಲಿಸಲು ಪೊಲೀಸರು ಇಷ್ಟೊಂದು ತಡ ಮಾಡಿರುವುದು ವ್ಯವಸ್ಥೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಅಧಿಕಾರಿಗಳ ಬೇಜವಾಬ್ದಾರಿತನವೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಮಕ್ಕಳ ವಿಷಯದಲ್ಲಿ ಇಂತಹ ಬೇಜವಾಬ್ದಾರಿತನವನ್ನು ಯಾರೂ ಸಹಿಸಬಾರದು ಎಂದು ಮಕ್ಕಳ ರಕ್ಷಣಾ ಆಯೋಗ ಅಧ್ಯಕ್ಷ ಸಂತೋಷ್ ಕುಮಾರ್ ಹೇಳಿದ್ದಾರೆ.

ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಕ್ಕಳ ರಕ್ಷಣಾ ಆಯೋಗವು, ತನಿಖೆಯಲ್ಲಿ ವಿಳಂಬ ಧೋರಣೆ ತಳೆದ ಅಧಿಕಾರಿಗಳಿಗೆ ಸರಿಯಾದ ಪಾಠ ಕಲಿಸಲು ಮುಂದಾಗಿದೆ. ಕಾಡುಗೋಡಿ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಸಂಪೂರ್ಣ ವರದಿ ಹಾಗೂ ಮಾಹಿತಿ ಕೋರಿ ಬೆಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ಅಧಿಕೃತವಾಗಿ ಪತ್ರ ಬರೆಯಲು ಆಯೋಗ ತೀರ್ಮಾನಿಸಿದೆ. ಮಾರ್ಚ್‌ನಲ್ಲಿ ನಡೆದ ಘಟನೆಗೆ ತಡವಾಗಿ ಎಫ್‌ಐಆರ್ ದಾಖಲಿಸಿ, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು ಯಾರು? ಎಂಬುದನ್ನು ಪತ್ತೆಹಚ್ಚಿ, ಅವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳುವಂತೆ ಆಯೋಗವು ಗೃಹ ಇಲಾಖೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಿದೆ.

ಕೇವಲ ಪೊಲೀಸರಿಂದ ಮಾತ್ರವಲ್ಲದೆ, ಮೃತ ಮಗು ವೆನ್ನೆಲಾಳ ಕುಟುಂಬಸ್ಥರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಘಟನೆಗೆ ಅಸಲಿ ಕಾರಣವೇನು ಎಂಬುದರ ಬಗ್ಗೆ ಆಯೋಗವು ಸ್ವತಂತ್ರವಾಗಿ ಮಾಹಿತಿ ಕಲೆಹಾಕಲಿದೆ. ಹೆತ್ತ ಮಗುವನ್ನೇ ಕರಳು ಹರಿದ ತಾಯಿ ಕೊಂದಿರುವ ಈ ಘಟನೆ ಸಮಾಜದಲ್ಲಿ ತಾಯಿ ಎಂಬ ಪವಿತ್ರ ಸ್ಥಾನಕ್ಕೆ ಕಳಂಕ ತರುವಂತಿದೆ. ಸದ್ಯ ಆರೋಪಿ ಪ್ರಿಯಾಂಕ ಪೊಲೀಸರ ಅತಿಥಿಯಾಗಿದ್ದು, ಮಗುವಿನ ಕೊಲೆಗೆ ನಿಖರವಾದ ಕಾರಣವೇನು? ಇದರ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರಾ? ಎಂಬ ಸತ್ಯಾಂಶ ಪೊಲೀಸ್ ವಿಚಾರಣೆಯ ಬಳಿಕ ಹೊರಬರಬೇಕಿದೆ. ಆದರೆ, ಮಕ್ಕಳ ರಕ್ಷಣೆ ಮಾಡಬೇಕಾದ ಕಾನೂನು ಪಾಲಕರು (ಪೊಲೀಸರು) ಪ್ರಕರಣ ದಾಖಲಿಸಲು ವಿಳಂಬ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.