ಬೆಂಗಳೂರಿನ ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗ ತೆರವು ವೇಳೆ ಅಧಿಕಾರಿಗಳ ಮೇಲೆ ನಡೆದ ಹಲ್ಲೆಗೆ, ಅವರು ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ಪಾಲಿಸದಿದ್ದೇ ಕಾರಣವೆಂದು ಹೇಳಲಾಗಿದೆ. ಕಾರ್ಯಾಚರಣೆಗೂ ಮುನ್ನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ, ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸದೆ ನಿಯಮ ಉಲ್ಲಂಘಿಸಿದ್ದೇ ಈ ಘಟನೆಗೆ ಕಾರಣವಾಯಿತು ಎಂದು ವರದಿಯಾಗಿದೆ. ಈ ಲೋಪವನ್ನು ಆಯುಕ್ತರು ಒಪ್ಪಿಕೊಂಡಿದ್ದಾರೆ.

ಬೆಂಗಳೂರು (ಜು.22): ಬೆಂಗಳೂರಿನ ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗ ತೆರವು (Footpath Encroachment Clearance) ಮಾಡುವ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕಾರಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ (Pepper Spray) ಸಿಂಪಡಿಸಿ, ಹಿಗ್ಗಾಮುಗ್ಗಾ ಥಳಿಸಿದ ಘಟನೆಗೆ ಅಧಿಕಾರಿಗಳು ಅನುಸರಿಸಬೇಕಾದ ಎಸ್‌ಒಪಿ (Standard Operating Procedure - SOP) ಉಲ್ಲಂಘನೆಯೇ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ಏನಿದು ಎಸ್‌ಒಪಿ ನಿರ್ಲಕ್ಷ್ಯ?

ಯಾವುದೇ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವ ಮೊದಲು ಜಿಬಿಎ ಅಥವಾ ಪಾಲಿಕೆ ಅಧಿಕಾರಿಗಳು ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ, ಶಿವಾಜಿನಗರದ (Shivajinagar) ಈ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಈ ಕೆಳಗಿನ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪ ಕೇಳಿಬಂದಿದೆ:

ಪೊಲೀಸರಿಗೆ ಮಾಹಿತಿ ನೀಡಿಲ್ಲ: ಪ್ರತಿ ಏರಿಯಾದಲ್ಲಿ ಕಾರ್ಯಾಚರಣೆ ನಡೆಸುವ ಮೊದಲು ಸ್ಥಳೀಯ ಪೊಲೀಸರಿಗೆ ಲಿಖಿತ ರೂಪದಲ್ಲಿ (Written Intimation) ಮಾಹಿತಿ ನೀಡುವುದು ಕಡ್ಡಾಯ. ಆದರೆ, ಮಂಗಳವಾರದ ಕಾರ್ಯಾಚರಣೆಗೂ ಮುನ್ನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ.

ಸಮನ್ವಯತೆಯ ಕೊರತೆ (Lack of Coordination): ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವಾಗ ಬೆಸ್ಕಾಂ (BESCOM), ಸಂಚಾರಿ ಪೊಲೀಸರು ಮತ್ತು ಕಾನೂನು ಸುವ್ಯವಸ್ಥೆ ಪೊಲೀಸರ ಜೊತೆ ಸಮನ್ವಯತೆ ಸಾಧಿಸಬೇಕಿತ್ತು. ಆದರೆ ಅಧಿಕಾರಿಗಳು ಏಕಾಏಕಿ ತೆರವಿಗೆ ಮುಂದಾಗಿದ್ದು ಪರಿಸ್ಥಿತಿ ಕೈಮೀರಲು ಕಾರಣವಾಯಿತು.

ಈ ಬಗ್ಗೆ ಸ್ವತಃ ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ (Commissioner Jagadish) ಅವರು ಲಿಖಿತ ಮಾಹಿತಿ ನೀಡದ ಅಧಿಕಾರಿಗಳ ಲೋಪವನ್ನು ಒಪ್ಪಿಕೊಂಡಿದ್ದಾರೆ.

ಒತ್ತುವರಿ ತೆರವಿಗೆ ಇರುವ SOP ನಿಯಮಗಳೇನು?:

ಪಾಲನೆಯಾಗದ ಎಸ್‌ಒಪಿ ನಿಯಮಗಳ ಪಟ್ಟಿ ಇಲ್ಲಿದೆ:

  • ಲಿಖಿತ ಮಾಹಿತಿ: ಕಾರ್ಯಾಚರಣೆಗೂ ಮುನ್ನ ಸ್ಥಳೀಯ ಪೊಲೀಸ್ ಠಾಣೆಗೆ ಪತ್ರದ ಮೂಲಕ ಮಾಹಿತಿ ನೀಡಿ ರಕ್ಷಣೆ ಕೋರಬೇಕು.
  • ಬಂದೋಬಸ್ತ್: ಕಾರ್ಯಾಚರಣೆ ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್ (Barricades) ಅಳವಡಿಸಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಬೇಕು.
  • ಸೂಚನಾ ಫಲಕ: ಕೆಲಸ ಪ್ರಗತಿಯಲ್ಲಿದೆ ಎನ್ನುವ ಅಥವಾ ಎಚ್ಚರಿಕೆಯ ಫಲಕಗಳನ್ನು (Caution Boards) ಕಡ್ಡಾಯವಾಗಿ ಅಳವಡಿಸಬೇಕು.
  • ಸಂಚಾರ ವ್ಯವಸ್ಥೆ: ಜೆಸಿಬಿ ಅಥವಾ ಕ್ರೇನ್ ಬಳಸುವಾಗ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಸಂಚಾರಿ ಪೊಲೀಸರ (Traffic Police) ಮೂಲಕ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಬೇಕು.
  • ಬೆಸ್ಕಾಂ ಮಾಹಿತಿ: ವಿದ್ಯುತ್ ಕಂಬ ಅಥವಾ ಲೈನ್‌ಗಳ ಬಳಿ ಕೆಲಸ ಮಾಡುವಾಗ ಬೆಸ್ಕಾಂ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಬೇಕು.

ಅಧಿಕಾರಿಗಳ ವಿರುದ್ಧವೇ ಆಕ್ರೋಶ:

ಒಬ್ಬ ಇಂಜಿನಿಯರ್ ಉಸ್ತುವಾರಿಯಲ್ಲಿ ನಡೆಯಬೇಕಿದ್ದ ಈ ಕಾರ್ಯಾಚರಣೆಯಲ್ಲಿ ಇಷ್ಟೆಲ್ಲಾ ಲೋಪಗಳು ನಡೆದಿರುವುದು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ. ಸರಿಯಾದ ಮುನ್ನೆಚ್ಚರಿಕೆ ಮತ್ತು ಪೊಲೀಸ್ ರಕ್ಷಣೆ ಇಲ್ಲದೆ ಕಾರ್ಯಾಚರಣೆಗೆ ಇಳಿದಿದ್ದೇ ಈ ಮಾರಣಾಂತಿಕ ಹಲ್ಲೆಗೆ ಪ್ರಚೋದನೆ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಾದರೂ ಜಿಬಿಎ (GBA) ಅಧಿಕಾರಿಗಳು ಎಸ್‌ಒಪಿ ಪಾಲಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.