ಬೆಂಗಳೂರಿನ ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗ ತೆರವು ವೇಳೆ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದ ಪ್ರಮುಖ ಆರೋಪಿ, ನಮ್ಮ ಕರ್ನಾಟಕ ಸೇನೆಯ ಬಸವರಾಜ್ ಪಡುಕೋಟೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೂ ಮುನ್ನ ವಿಡಿಯೋ ಬಿಡುಗಡೆ ಮಾಡಿ ಪ್ರಕರಣಕ್ಕೆ ತಿರುವು ನೀಡಲು ಯತ್ನಿಸಿದ್ದ ಈತನನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ತಡರಾತ್ರಿ ಬಂಧಿಸಿದ್ದು, ಈವರೆಗೆ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ.
ಬೆಂಗಳೂರು (ಜು.22): ಸಿಲಿಕಾನ್ ಸಿಟಿ ಬೆಂಗಳೂರಿನ ಶಿವಾಜಿನಗರದಲ್ಲಿ (Shivajinagar) ಪಾದಚಾರಿ ಮಾರ್ಗ ತೆರವುಗೊಳಿಸುವ ಕಾರ್ಯಾಚರಣೆ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority - GBA) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ (Main Accused), ನಮ್ಮ ಕರ್ನಾಟಕ ಸೇನೆಯ ಬಸವರಾಜ್ ಪಡುಕೋಟೆಯನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ.
ಏನಿದು ಘಟನೆ?
ಕಳೆದ ಮಂಗಳವಾರ ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ಶಿವಾಜಿನಗರ ಬಸ್ ನಿಲ್ದಾಣದ ಬಳಿ ಜಿಬಿಎ ಅಧಿಕಾರಿಗಳು ಪಾದಚಾರಿ ಮಾರ್ಗ ಒತ್ತುವರಿ (Footpath Encroachment Clearance) ತೆರವುಗೊಳಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ವ್ಯಾಪಾರಿಗಳು ಹಾಗೂ ಸಂಘಟನೆಯ ಕಾರ್ಯಕರ್ತರು ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಗಲಾಟೆ ವಿಕೋಪಕ್ಕೆ ತಿರುಗಿ, ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ (Pepper Spray Attack) ಸಿಂಪಡಿಸಿ ಹಲ್ಲೆ ನಡೆಸಲಾಗಿತ್ತು. ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು 6 ಅಧಿಕಾರಿಗಳ ಮೇಲೆ ಈ ದೌರ್ಜನ್ಯ ನಡೆದಿತ್ತು.
ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಬಸವರಾಜ್!
ಬಂಧನಕ್ಕೊಳಗಾಗುವ ಮೊದಲು ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದ ಬಸವರಾಜ್, ಪ್ರಕರಣಕ್ಕೆ ಹೊಸ ತಿರುವು ನೀಡಲು ಯತ್ನಿಸಿದ್ದರು. "ನಾವು ಫುಟ್ ಪಾತ್ ವಿಚಾರಕ್ಕೆ ಗಲಾಟೆ ಮಾಡಿಲ್ಲ. ಅಲ್ಲಿ ನಮ್ಮ ಕನ್ನಡ ಸೇನೆಯಿಂದ ಕನ್ನಡ ಧ್ವಜ (Kannada Flag) ಹಾರಿಸಲಾಗಿತ್ತು ಮತ್ತು ಗಣೇಶ ದೇವಸ್ಥಾನವಿತ್ತು. ಅಧಿಕಾರಿಗಳು ಯಾವುದಾದರೇನು ತೆಗೆದುಹಾಕಿ ಎಂದು ಉದ್ಧಟತನದಿಂದ ಮಾತನಾಡಿದರು. ಅದಕ್ಕೆ ನಾವು ಪ್ರತಿರೋಧ ಒಡ್ಡಿದೆವು" ಎಂದು ಹೇಳಿಕೊಂಡಿದ್ದ. ಅಷ್ಟೇ ಅಲ್ಲದೆ, ನಾಳೆ ತಾನೇ ಪೊಲೀಸರಿಗೆ ಶರಣಾಗುವುದಾಗಿ (Surrender) ವಿಡಿಯೋದಲ್ಲಿ ತಿಳಿಸಿದ್ದ.
ಪೊಲೀಸರ ಮಿಂಚಿನ ಕಾರ್ಯಾಚರಣೆ:
ಆದರೆ, ಆರೋಪಿ ಶರಣಾಗುವ ಮೊದಲೇ ಹದ್ದಿನ ಕಣ್ಣಿಟ್ಟಿದ್ದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು (Commercial Street Police), ಬಸವರಾಜ್ ಇದ್ದ ಜಾಗ ಪತ್ತೆ ಹಚ್ಚಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಜಿಬಿಎ ಶಿವಾಜಿನಗರ ಉಪ ವಿಭಾಗದ ಎಇ ಮಾಧವ್ ರಾವ್ ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ (BNS Sections) 109(1), 132, 74 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ (FIR) ದಾಖಲಿಸಲಾಗಿದೆ.
ಇಲ್ಲಿಯವರೆಗೆ 11 ಮಂದಿ ಬಂಧನ:
ಈ ಹಲ್ಲೆ ಪ್ರಕರಣದಲ್ಲಿ ಪೊಲೀಸರು ಈವರೆಗೆ ಒಟ್ಟು 11 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಸಿದ್ದಾಪುರದ ಭರತ್, ಕೊಟ್ರೇಶ್, ಬಸವರಾಜ್, ಪರಶುರಾಮ್, ರಘು, ರಂಜಿತ್, ಮುಜಾಹಿದ್ ಅಹಮದ್, ಪಂಪಣ್ಣ, ರಂಗಸ್ವಾಮಿ ಮತ್ತು ಕಿರಣ್ ಎಸ್. ನಾಯಕ್ ಸೇರಿದ್ದಾರೆ. ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ (Obstructing Public Servant), ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.


