ಬೆಂಗಳೂರು [ಡಿ.16]:  ಕಬ್ಬನ್‌ಪಾರ್ಕ್ನಲ್ಲಿ ಅಕ್ರಮ ಚಟುವಟಿಕೆ ಕೇಳಿ ಬಂದಿರುವ ಬೆನ್ನಲ್ಲೇ ಪೊಲೀಸರು ಇದೀಗ ಬೈಸಿಕಲ್‌ ಗಸ್ತು ತಿರುಗಲು ಮುಂದಾಗಿದ್ದಾರೆ.

ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ‘ಪೆಡಲ್‌ ಪೊಲೀಸ್‌’ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಬೈಸಿಕಲ್‌ನಲ್ಲಿ ಹಳೇ ಪೊಲೀಸ್‌ ಪದ್ಧತಿಯಂತೆ ಸೈಕಲ್‌ನಲ್ಲಿ ಪೊಲೀಸ್‌ ಗಸ್ತು ವ್ಯವಸ್ಥೆ ಕಂಡು ಬರಲಿದೆ.

ನಗರದ ಪೆಡಲ್‌ ಎಂಬ ಖಾಸಗಿ ಸಂಸ್ಥೆ ಬೆಂಗಳೂರು ಪೊಲೀಸರಿಗೆ ಬೈಸಿಕಲ್‌ಗಳನ್ನು ಉಚಿತವಾಗಿ ನೀಡಿದ್ದು, ಭಾನುವಾರ ಐದು ಬೈಸಿಕಲ್‌ಗಳನ್ನು ಪೊಲೀಸ್‌ ಸಿಬ್ಬಂದಿಗೆ ವಿತರಣೆ ಮಾಡಲಾಗಿದೆ. ಕಬ್ಬನ್‌ಪಾರ್ಕ್ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪ ಈ ಮೊದಲನಿಂದಲೇ ಕೇಳಿ ಬಂದಿದೆ. ಆದರೆ, ವಾಹನ ಪ್ರವೇಶ ನಿರ್ಬಂಧ ಇರುವುದರಿಂದ ಪೊಲೀಸರು ಗಸ್ತು ತಿರುಗುತ್ತಿರಲಿಲ್ಲ. ಅದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಕೆಲ ಕಿಡಿಗೇಡಿಗಳು ಅಕ್ರಮ ಚುಟುವಟಿಕೆ ನಡೆಸುತ್ತಿದ್ದರು. ಇದೀಗ ಬೈಸಿಕಲ್‌ ಮೂಲಕ ಪೊಲೀಸ್‌ ಸಿಬ್ಬಂದಿ ಹಗಲು ಮತ್ತು ರಾತ್ರಿ ಕಬ್ಬನ್‌ಪಾರ್ಕ್ನ ಮೂಲೆ ಮೂಲೆಯಲ್ಲೂ ಗಸ್ತು ತಿರುಗಲಿದ್ದಾರೆ.

1 ವರ್ಷದಲ್ಲಿ 70 ಬಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ : ಬಿದ್ದ ದಂಡದ ಮೊತ್ತವೆಷ್ಟು.?...

ಬೈಸಿಕಲ್‌ನಲ್ಲಿ ಗಸ್ತು ತಿರುಗುವುದರಿಂದ ಪಾರ್ಕ್ಗೆ ಬರುವ ವಾಯುವಿಹಾರಿಗಳ ರಕ್ಷಣೆ ಮಾತ್ರವಲ್ಲ, ಪೊಲೀಸ್‌ ಸಿಬ್ಬಂದಿಗೂ ಉಪಯೋಗವಾಗಲಿದೆ. ಜತೆಗೆ ಪರಿಸರ ಮಾಲಿನ್ಯ ಕೂಡ ತಗ್ಗಲಿದೆ. ಬೆಳಗ್ಗೆ, ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಪೊಲೀಸರು ಸೈಕಲ್‌ ತುಳಿಯುವುದರಿಂದ ಅವರ ದೈಹಿಕ ದೃಢತೆ ಹೆಚ್ಚಾಗಲಿದೆ. ಸದ್ಯ ಕಬ್ಬನ್‌ಪಾರ್ಕ್ ಠಾಣೆಗೆ ಐದು ಬೈಸಿಕಲ್‌ಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಇತರೆ ಠಾಣೆಗಳಿಗೂ ವಿಸ್ತರಿಸುವ ಬಗ್ಗೆ ಯೋಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.