Asianet Suvarna News Asianet Suvarna News

Covid 19 Spike: ಲಾಲ್‌ಬಾಗ್ ಫಲಪುಷ್ಟ ಪ್ರದರ್ಶನ ಈ ಬಾರಿಯೂ ರದ್ದು!

*ಗಣರಾಜ್ಯೋತ್ಸವ ನಿಮಿತ್ತ ಜ.20ರಿಂದ ಆಯೋಜಿಸಿದ್ದ ಪ್ರದರ್ಶನ ರದ್ದು
*ಪ್ರಕರಣ ಹೆಚ್ಚಾಗಿ ಸೋಂಕು ತಡೆಗೆ ಸರ್ಕಾರ ಹಲವು ಕ್ರಮ
*ಕೊರೋನಾ ಪ್ರಾರಂಭದ ಬಳಿಕ ಸತತ ಐದನೇ ಬಾರಿಗೆ ರದ್ದು

Bengaluru Lalbagh flower show cancelled amid Covid 19 Spike mnj
Author
Bengaluru, First Published Jan 10, 2022, 5:35 AM IST

ಬೆಂಗಳೂರು (ಜ. 10): ಕೊರೋನಾ ಸೋಂಕು (Covid 19) ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಜ.20ರಿಂದ ನಡೆಸಲು ಉದ್ದೇಶಿಸಿದ್ದ ಫಲಪುಷ್ಪ ಪ್ರದರ್ಶನ ( Lalbagh flower show ) ರದ್ದುಗೊಳಿಸಲು ತೋಟಗಾರಿಕೆ ಇಲಾಖೆ ತೀರ್ಮಾನಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಸೋಂಕಿನ ಪ್ರಕರಣ ಕಡಿಮೆ ಇದ್ದ ವರನಟ ಡಾ.ರಾಜಕುಮಾರ್‌ ಮತ್ತು ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಕುರಿತು ಪ್ರದರ್ಶನ ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈಗ ಮತ್ತೇ ಸೋಂಕಿನ ಪ್ರಕರಣ ಹೆಚ್ಚಾಗಿ ಸೋಂಕು ತಡೆಗೆ ಸರ್ಕಾರ ಹಲವು ಕ್ರಮ ಕೈಗೊಂಡಿರುವ ಕಾರಣ ಪ್ರದರ್ಶನ ರದ್ದುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಾರಂಭದಲ್ಲಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುವುದಕ್ಕಾಗಿ ಸರ್ಕಾರ ಅನುಮತಿ ನೀಡಿತ್ತು. ಆದರೆ, ಬಿಬಿಎಂಪಿ ಅನುಮತಿ ನೀಡಿರಲಿಲ್ಲ. ಪ್ರದರ್ಶನ ನಡೆಸಿದರೆ ಒಂದು ಬಾರಿಗೆ ಕೇವಲ 300 ಅಥವಾ 500 ಜನರನ್ನು ಮಾತ್ರ ಒಳಬಿಡಬೇಕು ಎಂದು ಪಾಲಿಕೆ ಷರತ್ತು ವಿಧಿಸಿತ್ತು. ಲಾಲ್‌ಬಾಗ್‌ನಲ್ಲಿ ಇರುವ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಬರುವ ಜನರನ್ನು ತಡೆಯುವುದು ಕಷ್ಟ. ಒಂದು ವೇಳೆ 500 ಜನರನ್ನು ಬಿಟ್ಟರೆ ಅವರು ಪ್ರದರ್ಶನ ಮತ್ತು ಉದ್ಯಾನವನ ನೋಡಲು ಕನಿಷ್ಠವೆಂದರೂ 2-3 ಗಂಟೆ ಸಮಯ ತೆಗೆದುಕೊಳ್ಳುತ್ತಾರೆ. ಹೀಗಿರುವಾಗ, ಕೋಟಿಗಟ್ಟಲೆ ಹಣ ಖರ್ಚು ಮಾಡಿ ಕಡಿಮೆ ಜನರನ್ನು ಬಿಟ್ಟರೆ ನಮಗೆ ತೀವ್ರ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಆದ್ದರಿಂದ ಪ್ರದರ್ಶನ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಮೈಸೂರು ಉದ್ಯಾನ ಕಲಾಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  Covid 19 Spike: ಒಂದೇ ದಿನದಲ್ಲಿ ಶೇ.12ರಷ್ಟು ಏರಿಕೆ: 7.5 ತಿಂಗಳ ಗರಿಷ್ಠ: 327 ಜನರು ಸೋಂಕಿಗೆ ಬಲಿ!

ಸತತ ಐದನೇ ಬಾರಿ ರದ್ದು:

1912ರಲ್ಲಿ ತೋಟಗಾರಿಕಾ ತಜ್ಞ ಜೆ.ಎಚ್‌.ಕೃಂಬಿಗಲ್‌ ಅವರು ಮೊದಲಬಾರಿಗೆ ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದರು. ಅಂದಿನಿಂದ ನಿರಂತರವಾಗಿ ಆಯೋಜಿಸುತ್ತಿದ್ದ ಪ್ರದರ್ಶನ ಎರಡನೇ ವಿಶ್ವ ಮಹಾಯುದ್ಧದ ವೇಳೆ ಹಾಗೂ ಡಾ.ರಾಜ್‌ಕುಮಾರ್‌ ಅಪಹರಣ ಸಂದರ್ಭದಲ್ಲಿ ತಲಾ ಒಂದು ಬಾರಿ ಮಾತ್ರ ರದ್ದಾಗಿತ್ತು. ಇದೀಗ ಕೊರೋನಾ ಪ್ರಾರಂಭದ ಬಳಿಕ ಸತತ ಐದನೇ ಬಾರಿಗೆ ರದ್ದು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ದಸರಾ ವಸ್ತುಪ್ರದರ್ಶನ ಮೊಟಕು?

ದಸರಾ (Dasara) ಮಹೋತ್ಸವದ ಒಂದೂವರೆ ತಿಂಗಳ ಬಳಿಕ ಆಯೋಜಿಸಿದ್ದ ದಸರಾ ವಸ್ತು ಪ್ರದರ್ಶನವನ್ನು ವಾರಂತ್ಯ ಕಪ್ರ್ಯೂ ಮತ್ತು ಸೆಮಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅರ್ಧಕ್ಕೆ ಮೊಟಕುಗೊಳಿಸಲು ದರಸಾ ವಸ್ತುಪ್ರದರ್ಶನ ಪ್ರಾಧಿಕಾರ ಮುಂದಾಗಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ (Cabinet Meeting) ಸಭೆಯ ಬಳಿಕ ವಸ್ತು ಪ್ರದರ್ಶನ ಮುಂದೂಡಿಕೆ ಅಥವಾ ಮೊಟಕುಗೊಳಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಶನಿವಾರ ಮತ್ತು ಭಾನುವಾರದಂದು ವಾರಾಂತ್ಯ ಕರ್ಫ್ಯೂ ಜಾರಿ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಾರದಿರುವ ಕಾರಣ ನಷ್ಟವಾಗುವ ಸಾಧ್ಯತೆ ಇದೆ. ಇದರಿಂದ ಮಳಿಗೆಗಳ ಮಾಲೀಕರು ಚಿಂತೆಗೀಡಾಗಿದ್ದಾರೆ. ಪ್ರಾಧಿಕಾರ ಇಂತಹ ನಿರ್ಧಾರಕ್ಕೆ ಮುಂದಾಗಿದೆ. ಕೋವಿಡ್‌- 19 ಕಾರಣಕ್ಕಾಗಿ 2020 ಮತ್ತು 2021ರ ದಸರಾ ಮಹೋತ್ಸವ ಸಂದರ್ಭದಲ್ಲಿ ವಸ್ತು ಪ್ರದರ್ಶನವನ್ನು ರದ್ದುಗೊಳಿಸಲಾಗಿತ್ತು.

ಇದನ್ನೂ ಓದಿ: ಮೈಸೂರು ದಸರಾ ಲೆಕ್ಕಪತ್ರ, ಯಾವುದಕ್ಕೆ ಎಷ್ಟು ಖರ್ಚು? ಇಲ್ಲಿದೆ ಸಂಪೂರ್ಣ ಮಾಹಿತಿ

ಜಿಲ್ಲೆಯಲ್ಲಿ ಕೊರೋನಾ ಸೋಂಕು (Mysuru) ಪ್ರಕರಣು ಇಳಿಕೆಯಾಗಿದ್ದರಿಂದ ವಸ್ತು ಪ್ರದರ್ಶನ ಪ್ರಾಧಿಕಾರವು ಖಾಸಗಿಯವರಿಗೆ ಗುತ್ತಿಗೆ ನೀಡುವ ಮೂಲಕ ಎರಡು ತಿಂಗಳ ಮಟ್ಟಿಗೆ ವಸ್ತು ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ನ. 27 ರಿಂದ ಜ. 31ರವರೆಗೆ 65 ದಿನಗಳ ಕಾಲ ಪ್ರದರ್ಶನಕ್ಕೆ ಅನುಮತಿ ನೀಡಿದ್ದರಿಂದ ನ. 27 ರಂದು ಆರಂಭವಾಗಿತ್ತು. ಪ್ರದರ್ಶನದಲ್ಲಿ ವಿವಿಧ ಬಗೆಯ ಮನೋರಂಜನಾ ಆಟಿಕೆ, ಫುಟ್‌ ಕೋರ್ಟ್‌, ಫ್ಯಾನ್ಸಿ ಆಭರಣ ಮಳಿಗೆ ಸೇರಿ ಇತರ ಮಳಿಗೆಗಳು ತುಂಬಿ ತುಳುಕುತ್ತಿದ್ದವು.

Follow Us:
Download App:
  • android
  • ios