Covid 19 Spike: ಒಂದೇ ದಿನದಲ್ಲಿ ಶೇ.12ರಷ್ಟು ಏರಿಕೆ: 7.5 ತಿಂಗಳ ಗರಿಷ್ಠ: 327 ಜನರು ಸೋಂಕಿಗೆ ಬಲಿ!
*ಒಂದೇ ದಿನದಲ್ಲಿ ಸೋಂಕು ಶೇ.12ರಷ್ಟುಏರಿಕೆ: ಸಕ್ರಿಯ ಪ್ರಕರಣ ಸಂಖ್ಯೆ 5.90 ಲಕ್ಷಕ್ಕೆ ಹೆಚ್ಚಳ
*ಒಂದೇ ದಿನದಲ್ಲಿ ಸಕ್ರಿಯ ಕೇಸು 1.18 ಲಕ್ಷ ಏರಿಕೆ: 13 ದಿನದಲ್ಲಿ ಸಕ್ರಿಯ ಕೇಸು ಶೇ.682ರಷ್ಟುಜಿಗಿತ!
*327 ಜನರು ಸೋಂಕಿಗೆ ಬಲಿ: ಶೇ.10ರ ಗಡಿ ದಾಟಿದ ಪಾಸಿಟಿವಿಟಿ: 552 ಒಮಿಕ್ರೋನ್ ಕೇಸು ದಾಖಲು
ನವದೆಹಲಿ (ಜ. 10): ಕೊರೋನಾ ಅಬ್ಬರ (Covid 19 Spike) ದೇಶದಲ್ಲಿ ಮತ್ತಷ್ಟುಏರಿದೆ. ಭಾನುವಾರ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 1,59,632 ಪ್ರಕರಣಗಳು ದಾಖಲಾಗಿದ್ದು, ಇದು 224 ದಿನಗಳ (ಏಳೂವರೆ ತಿಂಗಳ) ಗರಿಷ್ಠವಾಗಿದೆ. ಶನಿವಾರ ದೇಶದಲ್ಲಿ 1.41 ಲಕ್ಷ ಪ್ರಕರಣ ದಾಖಲಾಗಿದ್ದವು. ಇದಕ್ಕೆ ಹೋಲಿಸಿದರೆ ಒಂದೇ ದಿನದಲ್ಲಿ ಪ್ರಕರಣಗಳ ಸಂಖ್ಯೆ ಶೇ.12ರಷ್ಟುಏರಿಕೆಯಾದಂತಾಗಿದೆ. ಮೇ 29ರಂದು 1,65,553 ಕೇಸು ದಾಖಲಾಗಿದ್ದವು. ಆ ಬಳಿಕ ಈ ಪ್ರಮಾಣದ ಏಕದಿನದ ಪ್ರಕರಣಗಳು ದಾಖಲಾಗಿರಲಿಲ್ಲ.
ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 4,72,169ದಿಂದ 5,90,611ಕ್ಕೆ ಏರಿಕೆಯಾಗಿದೆ. ಇದು 197 ದಿನ (ಆರೂವರೆ ತಿಂಗಳ) ಗರಿಷ್ಠ. ಅಂದರೆ ಇಂದೇ ದಿನದಲ್ಲಿ 1.18 ಲಕ್ಷ (ಶೇ.25ರಷ್ಟು) ಸಕ್ರಿಯ ಪ್ರಕರಣಗಳು ಜಿಗಿತ ಕಂಡಿವೆ. ಅಲ್ಲದೆ, ಡಿ.28ರಂದು ಸಕ್ರಿಯ ಕೇಸು 75 ಸಾವಿರಕ್ಕೆ ಕುಸಿತ ಕಂಡಿದ್ದವು. ಅದಕ್ಕೆ ಹೋಲಿಸಿದರೆ ಕೇವಲ 13 ದಿನದಲ್ಲಿ ಸಕ್ರಿಯ ಕೇಸುಗಳ ಪ್ರಮಾಣ ಶೇ.682ರಷ್ಟುಭರ್ಜರಿ ಜಿಗಿತ ಕಂಡಂತಾಗಿದೆ. ಸೋಂಕಿಗೆ ಒಂದೇ ದಿನದಲ್ಲಿ 327 ಜನರು ಬಲಿಯಾಗಿದ್ದಾರೆ. ಪಾಸಿಟಿವಿಟಿ ದರ ಶೇ.10.21ಕ್ಕೆ ಏರಿಕೆಯಾಗಿದೆ. ಕೇವಲ 40,863 ಮಂದಿ ಗುಣಮುಖರಾಗಿದ್ದಾರೆ.
ಇದನ್ನೂ ಓದಿ: PM Covid 19 Meeting ಪ್ರಧಾನಿ ಅಧ್ಯಕ್ಷತೆಯಲ್ಲಿ ಕೋವಿಡ್ 19 ಉನ್ನತ ಮಟ್ಟದ ಸಭೆ ಅಂತ್ಯ, ಮಹತ್ವದ ಸೂಚನೆ ನೀಡಿದ ಮೋದಿ!
ದೇಶದಲ್ಲಿ 552 ಒಮಿಕ್ರೋನ್ ಕೇಸು:
ಭಾನುವಾರದ ಒಟ್ಟಾರೆ ಕೊರೋನಾ ಪ್ರಕರಣಗಳ ಪೈಕಿ 552 ಪ್ರಕರಣಗಳು ಒಮಿಕ್ರೋನ್ ರೂಪಾಂತರಿಗೆ (Omicron Variant) ಸೇರಿವೆ. ಇದರಿಂದಾಗಿ ದೇಶದಲ್ಲಿ ಒಮಿಕ್ರೋನ್ ಪೀಡಿತರ ಸಂಖ್ಯೆ 3,623ಕ್ಕೇರಿದೆ. ಆದರೆ 1409 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. 27 ರಾಜ್ಯಗಳಲ್ಲಿ ಈ ರೂಪಾಂತರಿ ಕಾಣಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ಒಮಿಕ್ರೋನ್ 1000ದ ಗಡಿ ದಾಟಿದ್ದು, ದೇಶದಲ್ಲೇ ಅತ್ಯಧಿಕ 1009 ಪ್ರಕರಣಗಳು ದಾಖಲಾಗಿವೆ.
ಭಾನುವಾರವೂ ದೇಶದ ಹಲವು ಪ್ರಮುಖ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಮೊದಲ ಎರಡು ಅಲೆಗಳಂತೆ ಈಗಲೂ ಅತಿ ಹೆಚ್ಚು ಕೇಸು ದಾಖಲಾಗುತ್ತಿರುವ ಮಹಾರಾಷ್ಟ್ರ, ದೆಹಲಿ, ಕೇರಳದಲ್ಲಿ ಹೊಸ ಕೇಸುಗಳು ಮತ್ತೆ ಏರುಗತಿ ಕಂಡಿವೆ. ಅದರ ಜೊತೆಗೆ ಪಶ್ಚಿಮ ಬಂಗಾಳ ಸೇರಿದಂತೆ ಇತರೆ ಹಲವು ರಾಜ್ಯಗಳಲ್ಲಿ ನಿಧಾನವಾಗಿ ಹೊಸ ಪ್ರಕರಣಗಳು ಏರಿಕೆ ಕಾಣುತ್ತಿವೆ.
ರಾಜ್ಯ ಕೇಸ್ 1 ದಿನದ ಏರಿಕೆ ಪಾಸಿಟಿವಿಟಿ ದರ
ಮಹಾರಾಷ್ಟ್ರ 44388, ಶೇ. 7.12 23.53%
ದೆಹಲಿ 22,751 ಶೇ.12.7 31.61%
ಪ. ಬಂಗಾಳ 24,287 ಶೇ.29.7 33.89%
ಕೇರಳ 6,238 ಶೇ.4.9 11.53
ಇದನ್ನೂ ಓದಿ: Covid 3rd Wave ಆತಂಕವಿದ್ದರೂ ಆರಂಭವಾಗದ ಆಕ್ಸಿಜನ್ ಘಟಕ
ಇಟಲಿಯಿಂದ ಬಂದ 125 ಜನರಿಗೆ ಸೋಂಕೆಂದ ಲ್ಯಾಬ್ ವಿರುದ್ಧ ತನಿಖೆ
ಇಟಲಿಯಿಂದ (Italy) ಪಂಜಾಬ್‌ನ ಅಮೃತಸರಕ್ಕೆ (Amritsar) ಬಂದಿಳಿದ ಪ್ರಯಾಣಿಕರ ಕೊರೋನಾ ವರದಿ ತಪ್ಪಾಗಿ ನೀಡಿದ ಆರೋಪದಡಿ ದೆಹಲಿಯ ಖಾಸಗಿ ಲ್ಯಾಬ್ (Lab) ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಇಟಲಿಯ ರೋಮ್‌ನಿಂದ ಶುಕ್ರವಾರ ಭಾರತಕ್ಕೆ ಬಂದ 173 ಮಂದಿಗೆ ಹಾಗೂ ಗುರುವಾರ ಅಮೃತಸರಕ್ಕೆ ಬಂದಿಳಿದ 125 ಮಂದಿಗೆ ಕೋವಿಡ್ ಪಾಸಿಟಿವ್ (Covid Positive) ಎಂದು ದೆಹಲಿಯ ಲ್ಯಾಬ್ ವರದಿ ನೀಡಿತ್ತು. ಆದರೆ ಈ ವರದಿ ತಪ್ಪಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಲ್ಯಾಬ್‌ನ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಆದೇಶಿಸಿದ್ದು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ತನಿಖೆಗೆ ಆದೇಶಿಸಿದೆ.