ತಮಿಳುನಾಡು ಸರ್ಕಾರವು ಬೆಂಗಳೂರಿನ ಬೊಮ್ಮಸಂದ್ರದಿಂದ ಹೊಸೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಆಸಕ್ತಿ ತೋರಿದೆ. ಆದರೆ, ಸಾರಿಗೆ ತಜ್ಞರು ಈ ಯೋಜನೆಗೆ ಮೆಟ್ರೋಗಿಂತ ಉಪನಗರ ರೈಲು ಹೆಚ್ಚು ಸೂಕ್ತವೆಂದು ಅಭಿಪ್ರಾಯಪಟ್ಟಿದ್ದು, ಯಾವುದೇ ನಿರ್ಧಾರಕ್ಕೂ ಮುನ್ನ ವೈಜ್ಞಾನಿಕ ಬೇಡಿಕೆ ಅಧ್ಯಯನದ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಬೆಂಗಳೂರು: ತಮಿಳುನಾಡಿನ ಹೊಸೂರು ಮತ್ತು ಬೆಂಗಳೂರಿನ ಬೊಮ್ಮಸಂದ್ರವನ್ನು ಸಂಪರ್ಕಿಸುವ ಪ್ರಸ್ತಾವಿತ ಗಡಿಯಾಚೆಗಿನ ಮೆಟ್ರೋ ಮಾರ್ಗಕ್ಕೆ ತಮಿಳುನಾಡು ತೀವ್ರ ಆಸಕ್ತಿ ತೋರುತ್ತಿದೆ. ತಮಿಳುನಾಡು ವಿತ್ತ ಸಚಿವ ಎನ್. ಮೇರಿ ವಿಲ್ಸನ್ ಬುಧವಾರ ಬಜೆಟ್ ಮಂಡನೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೃಷ್ಣಗಿರಿ ಜಿಲ್ಲೆಯ ಹೊಸೂರಿನಿಂದ ಕರ್ನಾಟಕದ ಬೊಮ್ಮಸಂದ್ರದವರೆಗೆ ಮೆಟ್ರೋ ರೈಲು ಮಾರ್ಗವನ್ನು ನಿರ್ಮಿಸುವ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದೊಂದಿಗೆ ಚರ್ಚೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಬೊಮ್ಮಸಂದ್ರವು ಹೊಸೂರಿನಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ.
ಈ ನಡುವೆ, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಪ್ರಯತ್ನವನ್ನು ಸಾರಿಗೆ ತಜ್ಞರು ಸ್ವಾಗತಿಸಿದ್ದರೂ, ಕೇವಲ ರಾಜಕೀಯ ಘೋಷಣೆಗಳ ಆಧಾರದ ಮೇಲೆ ಮೆಟ್ರೋ ಯೋಜನೆಯನ್ನು ಅಂತಿಮಗೊಳಿಸುವುದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಸಾರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವ ಮುನ್ನ ಪ್ರಯಾಣಿಕರ ನೈಜ ಬೇಡಿಕೆಯನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಬೆಂಗಳೂರಿನ ಮೆಟ್ರೋ ಜಾಲವನ್ನು ಹೊಸೂರಿಗೆ ಜೋಡಿಸುವ ಉದ್ದೇಶ ಹೊಂದಿರುವ ಈ 23 ಕಿಲೋಮೀಟರ್ ಉದ್ದದ ಕಾರಿಡಾರ್‌ಗಾಗಿ ಪ್ರಸ್ತುತ ವಿವರವಾದ ಕಾರ್ಯಸಾಧ್ಯತಾ ವರದಿ (Feasibility Report) ಸಿದ್ಧಗೊಳ್ಳುವ ಅಂತಿಮ ಹಂತದಲ್ಲಿದೆ.
ಅವೈಜ್ಞಾನಿಕ ನಿರ್ಧಾರ ಮತ್ತು ವೈಜ್ಞಾನಿಕ ಬೇಡಿಕೆ ಅಧ್ಯಯನ
ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಚಾಲಕ ಪ್ರೊ. ಆಶಿಶ್ ವರ್ಮಾ ಮಾತನಾಡಿ, "ಕಾರ್ಯಸಾಧ್ಯತಾ ಅಧ್ಯಯನವು ಪ್ರತಿ ದಿಕ್ಕಿನಲ್ಲಿ ಗಂಟೆಗೆ ಎಷ್ಟು ಪ್ರಯಾಣಿಕರು ಸಂಚರಿಸುತ್ತಾರೆ (PHPDT) ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಗರಿಷ್ಠ ದಟ್ಟಣೆ ಇರುವ ಮಾರ್ಗಗಳನ್ನು ಗುರುತಿಸಿದ ನಂತರವಷ್ಟೇ ಸೂಕ್ತ ಸಾರಿಗೆ ಮಾದರಿಯನ್ನು ಶಿಫಾರಸು ಮಾಡಬೇಕು ಎಂದಿದ್ದಾರೆ.
ಪ್ರಮುಖ ವಾಣಿಜ್ಯ ಹಾಗೂ ಕೈಗಾರಿಕಾ ಕೇಂದ್ರಗಳ ನಡುವೆ ಸಾರ್ವಜನಿಕ ಸಾರಿಗೆಯನ್ನು ವಿಸ್ತರಿಸುವುದು ಸೂಕ್ತ. ಆದರೆ, ಮೊದಲೇ ಮೆಟ್ರೋ ಎಂದು ನಿರ್ಧರಿಸಿ, ನಂತರ ಕಾರ್ಯಸಾಧ್ಯತಾ ಅಧ್ಯಯನ ನಡೆಸುವುದು ಸಂಪೂರ್ಣವಾಗಿ ಅವೈಜ್ಞಾನಿಕ. ಬೇಡಿಕೆಯ ಪ್ರಮಾಣವನ್ನು ಆಧರಿಸಿ ಈ ಕಾರಿಡಾರ್‌ಗೆ ಮೆಟ್ರೋ, ಮೆಟ್ರೋ ಲೈಟ್, ಉಪನಗರ ರೈಲು (Suburban Rail) ಅಥವಾ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಪೈಕಿ ಯಾವುದು ಅಗತ್ಯ ಎಂಬುದನ್ನು ತೀರ್ಮಾನಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಲವು ಭಾರತೀಯ ನಗರಗಳಲ್ಲಿ ನೈಜ ಬೇಡಿಕೆಯನ್ನು ಪರಿಶೀಲಿಸದೆ ಮೆಟ್ರೋ ನಿರ್ಮಿಸಿದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿ, ಮೂಲಸೌಕರ್ಯಗಳು ಸದ್ಬಳಕೆಯಾಗದೆ ನಷ್ಟ ಅನುಭವಿಸುತ್ತಿರುವುದನ್ನು ಪ್ರೊ. ವರ್ಮಾ ಉಲ್ಲೇಖಿಸಿದ್ದಾರೆ. ಅಲ್ಲದೆ, ತಮಿಳುನಾಡು ಮತ್ತು ಕರ್ನಾಟಕದ ವಿಭಿನ್ನ ಮೆಟ್ರೋ ವ್ಯವಸ್ಥೆಗಳ ನಡುವಿನ ಹೊಂದಾಣಿಕೆ ಸಮಸ್ಯೆಯ ಕುರಿತ ವರದಿಗಳನ್ನು ಅವರು ತಳ್ಳಿಹಾಕಿದ್ದಾರೆ. "ವ್ಯವಸ್ಥೆಗಳ ತಾಂತ್ರಿಕ ಹೊಂದಾಣಿಕೆ ದೊಡ್ಡ ಸಮಸ್ಯೆಯಲ್ಲ. ಪ್ರಯಾಣಿಕರು ಸುಲಭವಾಗಿ ಪ್ರತ್ಯೇಕ ರೈಲುಗಳಿಗೆ ಬದಲಾಯಿಸಲು ಒಂದು ಸಾಮಾನ್ಯ ಇಂಟರ್‌ಚೇಂಜ್ ಟರ್ಮಿನಲ್ ನಿರ್ಮಿಸಿದರೆ ಸಾಕು. ಕೊಚ್ಚಿಯ ಮೆಟ್ರೋ ಮತ್ತು ವಾಟರ್ ಮೆಟ್ರೋ ಹಾಗೂ ಜಾಗತಿಕವಾಗಿ ಉಪನಗರ ರೈಲು, ಟ್ರಾಮ್ ಮತ್ತು ಮೆಟ್ರೋಗಳ ನಡುವಿನ ಸಂಪರ್ಕ ವ್ಯವಸ್ಥೆಗಳೇ ಇದಕ್ಕೆ ಉತ್ತಮ ನಿದರ್ಶನ ಎಂದು ಅವರು ವಿವರಿಸಿದ್ದಾರೆ.
ಮೆಟ್ರೋಗಿಂತ ಉಪನಗರ ರೈಲು ಹೆಚ್ಚು ಸೂಕ್ತ
ಬೆಂಗಳೂರಿನ ನಮ್ಮ ಮೆಟ್ರೋದ ಅಸ್ತಿತ್ವದಲ್ಲಿರುವ ಹಳದಿ ಮಾರ್ಗವನ್ನು (Yellow Line) ಹೊಸೂರಿನವರೆಗೆ ವಿಸ್ತರಿಸುವುದು ಪ್ರಾಯೋಗಿಕವಾಗಿ ಸರಿಯೇ ಎಂಬ ಬಗ್ಗೆ ರೈಲು ಹಾಗೂ ಚಲನಶೀಲತೆ ತಜ್ಞ ಸಂಜೀವ್ ದ್ಯಾಮನ್ನವರ್ ಅನುಮಾನ ವ್ಯಕ್ತಪಡಿಸಿದ್ದಾರೆ. ಮೆಟ್ರೋವನ್ನು ಪ್ರಾಥಮಿಕವಾಗಿ ನಗರದೊಳಗಿನ ಅಲ್ಪಾವಧಿ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಹೊಸೂರಿನಿಂದ ಬರುವ ಪ್ರಯಾಣಿಕರೇ ಮೆಟ್ರೋವನ್ನು ಭರ್ತಿ ಮಾಡಿದರೆ, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಬೆಂಗಳೂರಿನ ಒಳಗಿನ ನಿಲ್ದಾಣಗಳಿಂದ ಹತ್ತುವ ಪ್ರಯಾಣಿಕರಿಗೆ ಜಾಗವೇ ಸಿಗದೆ ತೀವ್ರ ತೊಂದರೆಯಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ದ್ಯಾಮಣ್ಣವರ್ ಅವರ ಪ್ರಕಾರ:
- ಮೆಟ್ರೋ ವ್ಯವಸ್ಥೆಯು 30 ರಿಂದ 40 ಕಿ.ಮೀ ವ್ಯಾಪ್ತಿಯ ನಗರ ಪ್ರಯಾಣಕ್ಕೆ ಸೂಕ್ತ.
- ಹೊಸೂರಿನಂತಹ ದೀರ್ಘ ಪ್ರಾದೇಶಿಕ ಪ್ರಯಾಣಗಳಿಗೆ ಉಪನಗರ ರೈಲು ಅಥವಾ RRTS ವ್ಯವಸ್ಥೆ ಹೆಚ್ಚು ಪರಿಣಾಮಕಾರಿ.
- ಪ್ರಸ್ತುತ ಯೋಜನೆ ಹಂತದಲ್ಲಿರುವ ಬೆಂಗಳೂರು ಉಪನಗರ ರೈಲು ಮಾರ್ಗವನ್ನು ಹೀಲಲಿಗೆಯಿಂದ ಹೊಸೂರಿನವರೆಗೆ ವಿಸ್ತರಿಸುವುದು ಸೂಕ್ತ.
"ಉಪನಗರ ರೈಲುಗಳು ಹೆಚ್ಚಿನ ಸಾಮರ್ಥ್ಯ, ಹೆಚ್ಚಿನ ವೇಗ, ಕಡಿಮೆ ನಿಲ್ದಾಣಗಳು ಮತ್ತು ಕಡಿಮೆ ನಿರ್ಮಾಣ ವೆಚ್ಚವನ್ನು ಹೊಂದಿರುತ್ತವೆ. ಇದನ್ನು ಚಂದಾಪುರ ವೃತ್ತದ ಬಳಿ ಸಂಯೋಜಿಸಿದರೆ, ಕೇಂದ್ರ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಬೊಮ್ಮಸಂದ್ರದಲ್ಲಿ ಮೆಟ್ರೋಗೆ ಬದಲಾಯಿಸಬಹುದು ಅಥವಾ ಉಪನಗರ ರೈಲಿನ ಮೂಲಕವೇ ಕೆಎಸ್‌ಆರ್ ಬೆಂಗಳೂರು ಅಥವಾ ಇತರ ಪ್ರಮುಖ ರೈಲು ನಿಲ್ದಾಣಗಳಿಗೆ ನೇರವಾಗಿ ತಲುಪಬಹುದು" ಎಂದು ಅವರು ಸಲಹೆ ನೀಡಿದ್ದಾರೆ.
ಒಂದು ವೇಳೆ ಎರಡೂ ಸರ್ಕಾರಗಳು ಮೆಟ್ರೋ ಸಂಪರ್ಕಕ್ಕೇ ಆದ್ಯತೆ ನೀಡುವುದಾದರೆ, ಬೆಂಗಳೂರಿನ ಪ್ರಸ್ತುತ ಮೆಟ್ರೋ ಜಾಲವನ್ನು ನೇರವಾಗಿ ವಿಸ್ತರಿಸುವ ಬದಲು, ಹೊಸೂರು ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ನಡುವೆ 'ವಿಶೇಷ ಉದ್ದೇಶದ ವಾಹನ' (SPV) ಮಾದರಿಯಲ್ಲಿ ಪ್ರತ್ಯೇಕ ಗಡಿಯಾಚೆಗಿನ ಮೆಟ್ರೋ ಮಾರ್ಗವನ್ನು ನಿರ್ಮಿಸುವುದು ಒಳಿತು. ಇದರಿಂದ ನಗರದ ಒಳಗಿನ ಪ್ರಯಾಣಿಕರ ಹಿತಾಸಕ್ತಿಯೂ ರಕ್ಷಣೆಗೊಂಡು, ಪ್ರಾದೇಶಿಕ ಸಂಪರ್ಕವೂ ಸುಲಭವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

