ಆನೇಕಲ್‌ನ ಚಂದಾಪುರದಲ್ಲಿ ಯಶಸ್ವಿನಿ ಎಂಬ 23 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿನಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಕಾಲೇಜು ಉಪನ್ಯಾಸಕರು ಮತ್ತು ಆಡಳಿತ ಮಂಡಳಿಯ ನಿರಂತರ ಕಿರುಕುಳ ಹಾಗೂ ಅವಮಾನವೇ ತನ್ನ ಮಗಳ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

ಬೆಂಗಳೂರು/ಆನೇಕಲ್ (ಜ.09): ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ದಂತ ವೈದ್ಯಕೀಯ (ಡೆಂಟಲ್) ವಿದ್ಯಾರ್ಥಿನಿಯೊಬ್ಬಳು ಆತ್ಮ*ಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ಕಾಲೇಜು ಆಡಳಿತ ಮಂಡಳಿ ಮತ್ತು ಉಪನ್ಯಾಸಕರ ನಿರಂತರ ಕಿರುಕುಳವೇ ತನ್ನ ಮಗಳ ಸಾವಿಗೆ ಕಾರಣ ಎಂದು ಮೃತ ವಿದ್ಯಾರ್ಥಿನಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಘಟನೆಯ ವಿವರ

ಪರಿಮಳ ಮತ್ತು ಭೋದೆವಯ್ಯ ದಂಪತಿಯ ಏಕೈಕ ಪುತ್ರಿ ಯಶಸ್ವಿನಿ (23) ಆತ್ಮ*ಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಬೊಮ್ಮನಹಳ್ಳಿಯ ಪ್ರತಿಷ್ಠಿತ ಡೆಂಟಲ್ ಕಾಲೇಜಿನಲ್ಲಿ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿ (Oral Medicine and Radiology) ವಿಭಾಗದಲ್ಲಿ 3ನೇ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಕಣ್ಣು ನೋವಿನ ಕಾರಣ ರಜೆ ಹಾಕಿದ್ದ ಯಶಸ್ವಿನಿ, ಗುರುವಾರ ಕಾಲೇಜಿಗೆ ತೆರಳಿದ್ದಳು. ಈ ವೇಳೆ ಉಪನ್ಯಾಸಕರು ವಿದ್ಯಾರ್ಥಿಗಳ ಎದುರೇ ಆಕೆಯನ್ನು ಹೀನಾಯವಾಗಿ ಅವಮಾನಿಸಿದ್ದಾರೆ ಎಂದು ಹೇಳಲಾಗಿದೆ.

ಪೋಷಕರ ಮತ್ತು ಸಹಪಾಠಿಗಳ ಆಕ್ರೋಶ

ಕಣ್ಣಿಗೆ ಯಾವ ಡ್ರಾಪ್ಸ್ ಹಾಕಿಕೊಂಡೆ? ಎಷ್ಟು ಹನಿ ಹಾಕಿದೆ? ಇಡೀ ಬಾಟಲ್ ಸುರಿದುಕೊಂಡೆಯಾ?' ಎಂದು ಉಪನ್ಯಾಸಕರು ವ್ಯಂಗ್ಯವಾಗಿ ಪ್ರಶ್ನಿಸಿ ಅವಮಾನಿಸಿದ್ದರು. ಅಲ್ಲದೆ, ಸೆಮಿನಾರ್ ನೀಡಲು ಅವಕಾಶ ನೀಡದೆ ಮತ್ತು ರೇಡಿಯಾಲಜಿ ಕೇಸ್‌ಗಳನ್ನು ಹಂಚಿಕೆ ಮಾಡದೆ ಆಕೆಗೆ ಮಾನಸಿಕ ಟಾರ್ಚರ್ ನೀಡಲಾಗುತ್ತಿತ್ತು ಎಂದು ಮೃತಳ ತಾಯಿ ಪರಿಮಳ ಕಣ್ಣೀರಿಟ್ಟಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ಮತ್ತು ಸಂಬಂಧಪಟ್ಟ ಉಪನ್ಯಾಸಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ನ್ಯಾಯಕ್ಕಾಗಿ ಪ್ರತಿಭಟನೆ

ಈ ಘಟನೆ ತಿಳಿಯುತ್ತಿದ್ದಂತೆಯೇ ಯಶಸ್ವಿನಿ ಸಹಪಾಠಿಗಳು ಶವಾಗಾರದ ಮುಂದೆ ಜಮಾಯಿಸಿ ಆಕ್ಸ್‌ಫರ್ಡ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು. 'ಯಶಸ್ವಿನಿ ಓದಿನಲ್ಲಿ ಮುಂದಿದ್ದಳು, ಆದರೆ ಕಾಲೇಜಿನ ಕಿರುಕುಳ ಆಕೆಯನ್ನು ಬಲಿಪಡೆದಿದೆ' ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಆಕೆಗೆ ನ್ಯಾಯ ಒದಗಿಸಬೇಕೆಂದು ಘೋಷಣೆ ಕೂಗಿದರು. ಸದ್ಯ ಆನೇಕಲ್ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.