ನೆಲಮಂಗಲದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದರಲ್ಲಿ, ಗ್ಯಾಸ್ ಗೀಸರ್ ಸೋರಿಕೆಯಿಂದ ಪತಿ ಮೃತಪಟ್ಟಿದ್ದಾರೆ. ಈ ಸುದ್ದಿಯನ್ನು ಅರಗಿಸಿಕೊಳ್ಳಲಾಗದ ಪತ್ನಿ, ಪತಿಯ ಮುಖವನ್ನೂ ನೋಡದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಂದೇ ದಿನ ತಂದೆ-ತಾಯಿಯನ್ನು ಕಳೆದುಕೊಂಡ ಮಗನ ಆಕ್ರಂದನ ಮುಗಿಲು ಮುಟ್ಟಿದೆ.

ಬೆಂಗಳೂರು/ನೆಲಮಂಗಲ (ಫೆ.07): ಸಾವಿನಲ್ಲೂ ಒಂದಾಗುವ ಮಾತುಗಳನ್ನು ನಾವು ಸಿನಿಮಾ ಅಥವಾ ಕಾದಂಬರಿಗಳಲ್ಲಿ ಕೇಳಿರುತ್ತೇವೆ. ಆದರೆ, ಅಂತಹದ್ದೇ ಮನಕಲಕುವ ಹಾಗೂ ಹೃದಯ ವಿದ್ರಾವಕ ಘಟನೆಯೊಂದು ನೆಲಮಂಗಲದಲ್ಲಿ ನಡೆದಿದೆ. ಸ್ನಾನಕ್ಕೆಂದು ಹೋದ ಪತಿ ಗ್ಯಾಸ್ ಗೀಸರ್ ಸೋರಿಕೆಯಿಂದ ಸಾವನ್ನಪ್ಪಿದರೆ, ಆ ವಿಷಯ ತಿಳಿದ ಪತ್ನಿ ಪತಿಯ ಮುಖವನ್ನೂ ನೋಡದೆ, ಅವರಿಲ್ಲದ ಜಗತ್ತಿನಲ್ಲಿ ನಾನೂ ಇರಲಾರೆ ಎಂದು ಪ್ರಾಣ ಕಳೆದುಕೊಂಡಿರುವ ಘಟನೆ ಇಡೀ ಊರನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಏನಿದು ದುರಂತ?

ಮೂಲತಃ ಕುಣಿಗಲ್ ಪಟ್ಟಣದವರಾದ ರಾಜು (48) ಮತ್ತು ಮೀನಾ (42) ದಂಪತಿ ಕಳೆದ 20 ವರ್ಷಗಳಿಂದ ನೆಲಮಂಗಲದಲ್ಲಿ ನೆಲೆಸಿದ್ದರು. ರಾಜು ಅವರು ಪತ್ನಿ ಹಾಗೂ ಮಗನೊಂದಿಗೆ ನೆಲಮಂಗಲದ ಜಕ್ಕಸಂದ್ರದಲ್ಲಿ ಮನೆಯೊಂದನ್ನು ಲೀಸ್ ಪಡೆದು ವಾಸವಿದ್ದರು. ಮೀನಾ ಅವರು ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದರು. ಅನ್ಯೋನ್ಯವಾಗಿದ್ದ ಈ ದಂಪತಿಯ ಬದುಕಿನಲ್ಲಿ 'ಗ್ಯಾಸ್ ಗೀಸರ್' ರೂಪದಲ್ಲಿ ವಿಧಿ ಅಟ್ಟಹಾಸ ಮೆರೆದಿದೆ.

ಗ್ಯಾಸ್ ಗೀಸರ್ ಬಲಿ

ನಿನ್ನೆ ಸಂಜೆ ರಾಜು ಅವರು ಸ್ನಾನ ಮಾಡಲೆಂದು ಬಾತ್‌ರೂಮ್‌ಗೆ ತೆರಳಿದ್ದರು. ಆದರೆ, ಒಂದು ಗಂಟೆಯಾದರೂ ಅವರು ಹೊರಬರಲಿಲ್ಲ. ಇದರಿಂದ ಆತಂಕಗೊಂಡ ಮಗ, ಬಾಗಿಲು ಬಡಿದಿದ್ದಾನೆ. ಪ್ರತಿಕ್ರಿಯೆ ಬಾರದಿದ್ದಾಗ ಬಾಗಿಲು ಒಡೆದು ನೋಡಿದಾಗ, ರಾಜು ಅವರು ಗ್ಯಾಸ್ ಗೀಸರ್‌ನಿಂದ ಹೊರಬಂದ ವಿಷಕಾರಿ ಅನಿಲ ಸೇವಿಸಿ (ಕಾರ್ಬನ್ ಮೋನಾಕ್ಸೈಡ್ ಎಂದು ಶಂಕಿಸಲಾಗಿದೆ) ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದರು. ತಕ್ಷಣ ಮಗ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದನಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು.

ಪತಿಯನ್ನು ಬಿಟ್ಟಿರಲಾರದೆ ಪತ್ನಿ ಆತ್ಮ*ಹತ್ಯೆ

ಆಸ್ಪತ್ರೆಯಲ್ಲಿ ತಂದೆ ಮೃತಪಟ್ಟಿರುವ ವಿಷಯವನ್ನು ಮಗ ಫೋನ್ ಮೂಲಕ ತಾಯಿ ಮೀನಾ ಅವರಿಗೆ ತಿಳಿಸಿದ್ದಾನೆ. ಕೆಲಸದಲ್ಲಿದ್ದ ಮೀನಾ ಅವರಿಗೆ ಈ ಸುದ್ದಿ ಬರಸಿಡಿಲಿನಂತೆ ಬಡಿದಿದೆ. 20 ವರ್ಷಗಳ ಕಾಲ ಜೊತೆಯಾಗಿ ಬಾಳಿದ್ದ ಸಂಗಾತಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗದ ಅವರು, ಪತಿಯ ಅಂತಿಮ ದರ್ಶನವನ್ನೂ ಪಡೆಯುವ ಧೈರ್ಯವಿಲ್ಲದೆ ಕಠಿಣ ನಿರ್ಧಾರಕ್ಕೆ ಬಂದರು. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಜಿ. ಶ್ರೀನಿವಾಸಪುರಕ್ಕೆ ತೆರಳಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿದ್ದಾರೆ.

ಕಣ್ಣೀರು ತರಿಸುವ ಡೆತ್ ನೋಟ್

ಆತ್ಮ*ಹತ್ಯೆಗೂ ಮುನ್ನ ಮೀನಾ ಅವರು ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿನ ಸಾಲುಗಳು ಕರುಳು ಹಿಂಡುವಂತಿವೆ. 'ನನ್ನ ಗಂಡನನ್ನು ಬಿಟ್ಟು ಒಂದು ನಿಮಿಷವೂ ನಾನು ಬದುಕಿರುವುದಿಲ್ಲ. ನನ್ನನ್ನು ಕ್ಷಮಿಸಿಬಿಡಿ' ಎಂದು ಬರೆದಿದ್ದಾರೆ. ಅಲ್ಲದೆ, ಕುಟುಂಬದ ಆರ್ಥಿಕ ವ್ಯವಹಾರಗಳ ಬಗ್ಗೆಯೂ ಉಲ್ಲೇಖಿಸಿದ್ದು, 'ಯಾರ್ಯಾರಿಗೆ ಏನೇನು ಕೊಡಬೇಕೋ ಅದೆಲ್ಲವನ್ನೂ ಕೊಟ್ಟುಬಿಡಿ' ಎಂದು ಮಗನಿಗೆ ಸೂಚನೆ ನೀಡುವಂತೆ ಬರೆದಿಟ್ಟಿದ್ದಾರೆ.

ಒಂದೇ ದಿನ, ಕೆಲವೇ ಗಂಟೆಗಳ ಅಂತರದಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಗನ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಘಟನೆಯು ಗ್ಯಾಸ್ ಗೀಸರ್ ಬಳಕೆಯ ಸುರಕ್ಷತೆಯ ಬಗ್ಗೆಯೂ ಎಚ್ಚರಿಕೆಯ ಗಂಟೆ ಬಾರಿಸಿದೆ.