ಕೋಲಾರದ ಶ್ರೀನಿವಾಸಪುರದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಜೋಡಿಯೊಂದು ಹಣದಾಸೆಗೆ ತಮ್ಮ ನವಜಾತ ಗಂಡು ಮಗುವನ್ನು ಮಾರಾಟ ಮಾಡಿದೆ. ಈ ಮಗು ಮಾರಾಟ ಜಾಲವನ್ನು ಪತ್ತೆಹಚ್ಚಿದ ಪೊಲೀಸರು, ಮಗುವನ್ನು ಖರೀದಿಸಿದ ದಂಪತಿ ಹಾಗೂ ಮಧ್ಯವರ್ತಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಕೋಲಾರ: ಮಗು ಆಗಿಲ್ಲವೆಂದು ಈಗಲೂ ಅದೆಷ್ಟೋ ಜನರು ಪರದಾಡ್ತಿದ್ದಾರೆ. ಆಸ್ಪತ್ರೆ, ದೇವಸ್ಥಾನ ಅಂತ ಪ್ರತಿದಿನ ಸುತ್ತಾಡ್ತಿದ್ದಾರೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ಮಗು ಮಾರಾಟ ಜಾಲದಲ್ಲಿ ತೊಡಗಿದ್ದು,ಅಮಾಯಕರನ್ನು ವಂಚಿಸುತ್ತಿದೆ. ಸದ್ಯ ಇದೇ ರೀತಿಯ ವಂಚನೆ ಜಾಲವೊಂದು ಪೊಲೀಸರಿಗೆ ತಗಲಾಕಿಕೊಂಡಿದ್ದು, ಏನೂ ಅರಿಯದ ಹಸುಗೂಸು ತಾಯಿಯ ಮಡಿಲು ಸೇರಿದೆ.

Add Asianetnews Kannada as a Preferred SourcegooglePreferred

ತಾಯಿ ಅಂದ್ರೆ ಭೂಮಿಯ ಭಾರ ಹೊರುವವಳು. ತಾನು ನೋವುಂಡು ಮಕ್ಕಳಿಗೆ ಜೀವನ ಎರೆಯುವವಳು. ಆದ್ರೆ ಇಲ್ಲೊಂದು ತಾಯಿ ತಾನೇ ಹೆತ್ತ ಮಗುವನ್ನು ಹುಟ್ಟಿದ ಮೂರೇ ದಿನದಲ್ಲಿ ಮಾರಾಟ ಮಾಡಿದ್ದಾಳೆ. ಹೌದು ಮಾನವೀಯತೆಯೇ ಇಲ್ಲದಿರುವ ಆಘಾತಕಾರಿ ಘಟನೆಯೊಂದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಮಗು ಹುಟ್ಟಿದ ಕೇವಲ ಐದು ದಿನಗಳಲ್ಲೇ ಜೋಡಿಗಳು ತಮ್ಮದೇ ಗಂಡು ಮಗುವನ್ನು ಮಾರಿದ್ದಾರೆ. 

ಲಿವ್ ಇನ್ ಟುಗೆದರ್ ಇದ್ದ ಜೋಡಿ

ರಾಘವೇಂದ್ರ ಹಾಗೂ ನೀತು ಇಬ್ಬರೂ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು. ನೀತುಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ರು ಸಹ ಗಂಡನನ್ನು ಬಿಟ್ಟು ಚಾಲಕನ ಕೆಲಸ ಮಾಡ್ತಿರುವ ರಾಘವೇಂದ್ರ ಜೊತೆ ಶ್ರೀನಿವಾಸಪುರ ಪಟ್ಟಣದಲ್ಲಿ ಸಂಸಾರ ಮಾಡುತ್ತಿದ್ದಾಳೆ. ಇವರಿಬ್ಬರ ಸಂಬಂಧದ ಕುರುಹು ಎಂಬಂತೆ ಆರು ದಿನಗಳ ಹಿಂದೆ ಶ್ರೀನಿವಾಸಪುರ ಖಾಸಗಿ ಆಸ್ಪತ್ರೆಯಲ್ಲಿ ನೀತು ಹಾಗೂ ರಾಘವೇಂದ್ರಗೆ ಗಂಡು ಮಗು ಜನಿಸಿದೆ, ಆದ್ರೆ ಹಣದ ಆಸೆಗೆ ಹುಟ್ಟಿದ್ದ ಮೂರೇ ದಿನದಲ್ಲಿ ಮಗು ಮಾರಾಟ ಮಾಡಿ ತಗಲಾಕಿಕೊಂಡಿದ್ದು, ಪೊಲೀಸರ ಅತಿಥಿಯಾಗಿದ್ದಾರೆ.

5 ಲಕ್ಷಕ್ಕೆ ಮಗು ಮಾರಾಟ

ಶ್ರೀನಿವಾಸಪುರ ಪಟ್ಟಣದ ನಿವಾಸಿ ಹಾಗೂ ಮಗು ಮಾರಾಟ ಜಾಲದ ಮಧ್ಯವರ್ತಿ ಆಗಿರುವ ನಾರಾಯಣಸ್ವಾಮಿ ಅನ್ನೋ ವ್ಯಕ್ತಿಗೆ ನೀತು ಹಾಗೂ ರಾಘವೇಂದ್ರ ಸೇರಿ ಶುಕ್ರವಾರ ಎರಡು ಲಕ್ಷ ರುಪಾಯಿಗೆ ಗಂಡು ಮಗು ಮಾರಾಟ ಮಾಡುತ್ತಾರೆ. ಬಳಿಕ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮೂಲದ ಮಂಜುಳ ಹಾಗೂ ಕೃಷ್ಣ ಅನ್ನೋ ದಂಪತಿಗೆ ಮಧ್ಯವರ್ತಿ ನಾರಾಯಣಸ್ವಾಮಿ ಐದು ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಮಗು ಮಾರಾಟದ ವಿಚಾರ ತಿಳಿದ ಸ್ಥಳೀಯರೊಬ್ಬರು ಶ್ರೀನಿವಾಸಪುರ ಪೊಲೀಸರಿಗೆ ತಿಳಿಸುತ್ತಾರೆ, ಕೂಡಲೇ ಎಚ್ಚೆತ್ತ ಪೊಲೀಸರು ತನಿಖೆ ನಡೆಸಿದ ಬಳಿಕ ಮಾರಾಟದ ಬಗ್ಗೆ ನೀತು ಹಾಗೂ ರಾಘವೇಂದ್ರ ಒಪ್ಪಿಕೊಂಡಿದಾರೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದ ಕಾರಣ ಮಾರಾಟ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ನೀತು, ರಾಘವೇಂದ್ರ, ನಾರಾಯಣಸ್ವಾಮಿ ಸೇರಿ ಒಟ್ಟು ಐವರನ್ನು ಪೊಲೀಸರು ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಮಗುವನ್ನು ಮರಳಿ ಪಡೆದು ಪೋಷಕರಿಗೆ ಒಪ್ಪಿಸಲಾಗಿದೆ. ಅದೇನೆ ಇರಲಿ ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿದೆ. ಕಾಮದ ಆಸೆಗೆ ಮಗು ಮಾಡಿಕೊಂಡು ಹಣದಾಸೆಗೆ ಮಾರಾಟ ಮಾಡ್ತಿರೋದ್ರಿಂದ ಪವಿತ್ರವಾದ ತಾಯಿ ತನಕ್ಕೆ ಅವಮಾನ ಆಗ್ತಿರೋದಂತು ಸುಳ್ಳಲ್ಲ.