ಉತ್ತರ ಕರ್ನಾಟಕದ ಸಮಸ್ಯೆಗೆ ಧ್ವನಿಯಾಗುವುದೇ ಬೆಳಗಾವಿ ಅಧಿವೇಶನ?
ಅಧಿವೇಶನದಿಂದ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ಪರಿಹಾರ ಸಿಗುತ್ತದೆ. ಪ್ರಾದೇಶಿಕ ಅಸಮಾನತೆ ನಿವಾರಣೆಯಾಗುತ್ತದೆ ಎಂಬ ನಿರೀಕ್ಷೆಗಳಿದ್ದವು. ಆದರೆ, ಪ್ರತಿಸಲ ಅಧಿವೇಶನ ಕಾಟಾಚಾರವೆಂಬಂತೆ ನಡೆಯುತ್ತಿರುವುದು ವಾಸ್ತವ ಸತ್ಯ.
ಶಿವಾನಂದ ಗೊಂಬಿ
ಹುಬ್ಬಳ್ಳಿ(ಡಿ.07): ಮತ್ತೊಂದು ಚಳಿಗಾಲದ ಬೆಳಗಾವಿ ಅಧಿವೇಶನಕ್ಕೆ ಮಹೂರ್ತ ನಿಗದಿಯಾಗಿದೆ. ಈ ಸಲವಾದರೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿ ಪರಿಹಾರ ಸಿಗುವುದೇ? ಅಥವಾ ಹಿಂದಿನ ಎಲ್ಲ ಸದನದಂತೆ ಈ ಸಲವೂ ಕಾಟಾಚಾರದ ಅಧಿವೇಶನ ಆಗುತ್ತದೆಯೋ? ಈ ಭಾಗದ ಶಾಸಕರೆಲ್ಲರೂ ಒಗ್ಗಟ್ಟಾಗುತ್ತಾರೆಯೇ?
ಇದು ಡಿ. 9ರಿಂದ ನಡೆಯಲಿರುವ ಬೆಳಗಾವಿ ಅಧಿವೇಶನದ ಕುರಿತು ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆ. ಬೆಳಗಾವಿಯಲ್ಲಿ ₹ 400 ಕೋಟಿ ವ್ಯಯಿಸಿ ಸುವರ್ಣ ವಿಧಾನಸೌಧ ನಿರ್ಮಿಸಿರುವುದೇ ಉತ್ತರ ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಅಸಮಾನತೆ ನಿವಾರಣೆಗೆ. ಆದರೆ 2006ರಿಂದ (ಕೋವಿಡ್ ಸಮಯದ 2 ವರ್ಷ ನಡೆದಿಲ್ಲ) ಪ್ರತಿವರ್ಷ 10 ದಿನ ಚಳಿಗಾಲದ ಅಧಿವೇಶನ ನಡೆದಿದೆ. ಅಧಿವೇಶನದಿಂದ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ಪರಿಹಾರ ಸಿಗುತ್ತದೆ. ಪ್ರಾದೇಶಿಕ ಅಸಮಾನತೆ ನಿವಾರಣೆಯಾಗುತ್ತದೆ ಎಂಬ ನಿರೀಕ್ಷೆಗಳಿದ್ದವು. ಆದರೆ, ಪ್ರತಿಸಲ ಅಧಿವೇಶನ ಕಾಟಾಚಾರವೆಂಬಂತೆ ನಡೆಯುತ್ತಿರುವುದು ವಾಸ್ತವ ಸತ್ಯ.
ಅಧಿವೇಶನ ಬಳಿಕ ಸಂಪುಟ ಕಸರತ್ತು?: ಹಲವು ಸಚಿವರಿಗೆ ಕೊಕ್
ಈ ಭಾಗದ ಸಮಸ್ಯೆಗಳ ಚರ್ಚೆಗೆ ಬರುವುದು ಕೊನೆಯ ಎರಡು ದಿನ. ಶಾಸಕರು, ಸಚಿವರು ಪೂರ್ಣ ಪ್ರಮಾಣದಲ್ಲಿ ಇರುವುದಿಲ್ಲ. ಸದನದಲ್ಲಿರುವ ಶಾಸಕರಿಗೂ ತಮ್ಮೂರಿಗೆ ಹೋಗುವ ಧಾವಂತ. ಹೀಗಾಗಿ ಕಾಟಾಚಾರಕ್ಕೆಂಬಂತೆ ಅಲ್ಲೊಬ್ಬರು, ಇಲ್ಲೊಬ್ಬರು ಶಾಸಕರು ಚರ್ಚೆ ನಡೆಸುತ್ತಾರೆ. ಬೆಳಗಾವಿ ಅಧಿವೇಶನವೆಂದರೆ ಶಾಸಕರಿಗೆ, ಅಧಿಕಾರಿ ವರ್ಗಕ್ಕೆ 10 ದಿನ ಟ್ರಿಪ್ ಇದ್ದಂತೆ ಎಂಬುದು ಕೂಡ ಅಷ್ಟೇ ಸತ್ಯ.
ಏನೇನು ಸಮಸ್ಯೆಗಳಿವೆ?
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ನಮಗೆ ಹಂಚಿಕೆಯಾಗಿರುವ ನೀರಿನ ಪಾಲನ್ನೇ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿ ಸಲ ಅಧಿವೇಶನದಲ್ಲೂ ಚರ್ಚೆಗೆ ಬರುತ್ತದೆ. ಆದರೆ, ಪರಿಹಾರ ಮಾತ್ರ ಸಿಗುತ್ತಲೇ ಇಲ್ಲ. ತುಂಗಭದ್ರಾ ನದಿಗೆ ಪರ್ಯಾಯ ಡ್ಯಾಂ ನಿರ್ಮಾಣದ ಕನಸು ನನಸು ಆಗಿಲ್ಲ. ಮಹದಾಯಿ ತೀರ್ಪು ಬಂದು 7 ವರ್ಷ ಕಳೆದರೂ ಕಾಮಗಾರಿ ಆರಂಭಿಸಲು ಕೇಂದ್ರ ವನ್ಯಜೀವಿ ಮಂಡಳಿ ಅನುಮತಿ ನೀಡಿಲ್ಲ. ಈ ನಿಟ್ಟಿನಲ್ಲಿ ಸರ್ವಪಕ್ಷಗಳು ರಾಜಕೀಯ ಮರೆತು ಚರ್ಚೆ ನಡೆಸಿ ಪರಿಹಾರಕ್ಕೆ ಏನು ಕ್ರಮಕೈಗೊಳ್ಳಬೇಕು ಎಂಬುದನ್ನು ನಿರ್ಣಯಿಸಬೇಕಿದೆ. ಇದರೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಯೋಜನೆಗೆ ಚಾಲನೆ ನೀಡಬೇಕಿದೆ.
ಕೈಗಾರಿಕೆಗೆ ಒತ್ತು:
ಉತ್ತರ ಕರ್ನಾಟಕ ಭಾಗದಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಹೀಗಾಗಿ ಇಲ್ಲಿನ ಪ್ರತಿಭೆಗಳು ಕೆಲಸ ಅರಸಿ ಪುಣೆ, ಬೆಂಗಳೂರು, ಗೋವಾ ಸೇರಿದಂತೆ ವಿವಿಧೆಡೆ ವಲಸೆ ಹೋಗುತ್ತಿದ್ದಾರೆ. ಸರ್ಕಾರವೂ ಸಹ ಇನ್ವೆಸ್ಟ್ ಕರ್ನಾಟಕ-ಹುಬ್ಬಳ್ಳಿ ಕಾರ್ಯಕ್ರಮ ನಡೆಸಿದಾಗ ₹ 83 ಸಾವಿರ ಕೋಟಿ ಬಂಡವಾಳ ಹೂಡಿಕೆಯ ವಾಗ್ದಾನ ನಡೆದಿತ್ತು. ಅದರಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ಕೂಡ ಒಂದು. ಆದರೆ, ಕೈಗಾರಿಕೆಗಳಿಗೆ ಭೂಮಿ ನೀಡುತ್ತೇವೆ ಎಂದಾಗ ಒಂದು ದರ, ಬಳಿಕ ಮತ್ತೊಂದು ದರ ನಿಗದಿ ಮಾಡಿದ್ದರಿಂದ ಕೈಗಾರಿಕೆಗಳು ಈ ಭಾಗದಲ್ಲಿ ತಮ್ಮ ಉದ್ಯಮ ಸ್ಥಾಪಿಸಲು ಹಿಂದೇಟು ಹಾಕಿದವು. ಸರ್ಕಾರವೂ ಉದ್ಯಮಿಗಳ ಮನವೊಲಿಸಿ ಕೈಗಾರಿಕೆ ತರುವಲ್ಲಿ ಆಸಕ್ತಿ ತೋರಲಿಲ್ಲ.
ಹಾನಿಗೆ ಬೇಕಿದೆ ಪರಿಹಾರ
ಹಿಂಗಾರು ಮಳೆ ಅಧಿಕ ಸುರಿದ ಪರಿಣಾಮ ಅಪಾರ ಪ್ರಮಾಣದ ಮನೆ-ಬೆಳೆ ಹಾನಿಯಾಗಿದೆ. ಆದರೆ, ಹಾನಿಗೆ ತಕ್ಕಂತೆ ಪರಿಹಾರ ಸಂತ್ರಸ್ತರಿಗೆ ದೊರಕಿಲ್ಲ. ಕುಸಿದ ಮನೆ ನಿರ್ಮಾಣಕ್ಕೆ ₹ 5 ಲಕ್ಷ ಪರಿಹಾರ ನೀಡಬೇಕು ಎಂಬ ಬೇಡಿಕೆ ಜತೆಗೆ ಸಮರ್ಪಕ ಬೆಳೆಹಾನಿ ಪರಿಹಾರ ನೀಡುವ ಕುರಿತು ಸದನದಲ್ಲಿ ಚರ್ಚೆ ನಡೆಯಬೇಕು ಎಂಬುದು ಅನ್ನದಾತರ ಅಪೇಕ್ಷೆ.
ಬೆಳಗಾವಿ ಅಧಿವೇಶನಕ್ಕೆ ಬಿಜೆಪಿ-ಜೆಡಿಎಸ್ ಪ್ಲಾನ್: ಸಿದ್ದು ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ರಣತಂತ್ರ!
ಬೆಳಗಾವಿಗೇ ಬರಲೇ ಇಲ್ಲ ಕಚೇರಿ:
ಸುವರ್ಣಸೌಧಕ್ಕೆ 9 ಇಲಾಖೆಗಳ ಕೇಂದ್ರ ಕಚೇರಿಯನ್ನು ಸ್ಥಳಾಂತರಿಸಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆಸಿದ ಬಳಿಕ ಸರ್ಕಾರ ಅಸ್ತು ಎಂದಿತ್ತು. ಆದರೆ, ಒಂದೆರಡು ಕಚೇರಿಗಳು ಮಾತ್ರ ಬಂದಿವೆ. ಈ ಭಾಗದ ಅಭಿವೃದ್ಧಿಗೆ ಪೂರಕವಾಗ ಕಚೇರಿಗಳ ಸ್ಥಳಾಂತರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಚರ್ಚೆಯಾಗಬೇಕಿದೆ. ಇದಲ್ಲದೇ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕಕ್ಕೆ ವಿಶೇಷ ಅನುದಾನ, ಕುಡಿಯುವ ನೀರಿನ ಸಮಸ್ಯೆ, ಪರಿಹಾರದ ಚರ್ಚೆ ನಡೆದು ಕ್ರಮ ಕೈಗೊಳ್ಳಬೇಕು ಎಂಬುದು ಜನರ ನಿರೀಕ್ಷೆ.
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ನೀಡುವುದಾಗಿ ಕಳೆದ ಅಧಿವೇಶನದಲ್ಲೇ ಹೇಳಿದ್ದ ಸರ್ಕಾರ ಈ ವರೆಗೂ ಈಡೇರಿಸಿಲ್ಲ. ಈ ಸಂಬಂಧ ಮಹಾನಗರ ಪಾಲಿಕೆಯಲ್ಲೂ ಸರ್ವಾನುಮತದಿಂದ ಠರಾವು ಪಾಸು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಈ ಅಧಿವೇಶನದಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹ.