ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 17ರಂದು ಗೃಹೋಪಯೋಗಿ ವಸ್ತುಗಳ ಬಹಿರಂಗ ಹರಾಜು ನಡೆಯಲಿದೆ. ಇ.ಡಿ. ತನಿಖೆ ಎದುರಿಸುತ್ತಿರುವ ಈ ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ಸಿದ್ದಪ್ಪ ನೀಲಣ್ಣನವರ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಬೆಳಗಾವಿ: ಶಿವಂ ಅಸೋಸಿಯೇಟ್ಸ್ ಬೆಳಗಾವಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹೋಪಯೋಗಿ ದಿನಸಿ ಹಾಗೂ ಇತರೆ ವಸ್ತುಗಳನ್ನು ಬಹಿರಂಗ ಹರಾಜು ಮಾಡಲು ನಿರ್ಧರಿಸಲಾಗಿದೆ. ವಿಶೇಷಾಧಿಕಾರಿಗಳು ಹಾಗೂ ಬೆಂಗಳೂರಿನ ಸಕ್ಷಮ ಪ್ರಾಧಿಕಾರಿಗಳ ನಿರ್ದೇಶನದ ಮೇರೆಗೆ ಅ.17ರಂದು ಬೆಳಗ್ಗೆ 11 ಗಂಟೆಗೆ ಹೊನಗಾ ಕೈಗಾರಿಕಾ ಪ್ರದೇಶದ ಕೆಐಎಡಿಬಿ ಗೋಡೌನ್ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಹೊನಗಾ ಕೈಗಾರಿಕಾ ಪ್ರದೇಶದ ನಂ.18/ಸಿ ವಿಳಾಸದಲ್ಲಿರುವ ಗೋಡೌನ್ನಲ್ಲಿ ಹರಾಜು ನಡೆಯಲಿದ್ದು, ಆಸಕ್ತರು ಭಾಗವಹಿಸಬಹುದು ಎಂದು ಬೆಳಗಾವಿ ಉಪವಿಭಾಗದ ಹಿರಿಯ ಉಪವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇ.ಡಿ. ಪ್ರಕರಣದ ತನಿಖೆ
ಬೆಳಗಾವಿಯ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ ಐಆರ್ ಆಧಾರದಲ್ಲಿ ಇ.ಡಿ. ಪ್ರಕರಣದ ತನಿಖೆ ಆರಂಭಿಸಿತ್ತು. ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), 2023, ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019 ಮತ್ತು ಕರ್ನಾಟಕದ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ (ಕೆಪಿಐಡಿ ಕಾಯ್ದೆ) 2004ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ನ್ಯಾಯಾಂಗ ಬಂಧನದಲ್ಲಿ ಶಿವಾನಂದ ಸಿದ್ದಪ್ಪ ನೀಲಣ್ಣನವರ್
ಆರೋಪಿ ಶಿವಾನಂದ ಸಿದ್ದಪ್ಪ ನೀಲಣ್ಣನವರ್, ಶಿವಂ ಅಸೋಸಿಯೇಟ್ಸ್ ಮತ್ತು ಇತರ ಸಂಸ್ಥೆಗಳ ಮೂಲಕ ವಂಚನೆಯ ಜಾಲವನ್ನು ನಡೆಸುತ್ತಿದ್ದ ಎಂಬುದು ಇ.ಡಿ. ತನಿಖೆಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಶಿವಾನಂದನನ್ನು ಆಗಸ್ಟ್ 13ರಂದು ಬಂಧಿಸಲಾಗಿದ್ದು, ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಹೂಡಿಕೆದಾರರಿಂದ 2,459.49 ಕೋಟಿ ರು. ಸಂಗ್ರಹ
ಶಿವಾನಂದ ಸಿದ್ದಪ್ಪ ನೀಲಣ್ಣನವರ್ ಹಾಗೂ ಆತನ ಸಹಚರರು ಸಂಘಟಿತ ಹೂಡಿಕೆ ವಂಚನೆ ನಡೆಸಿದ್ದಾರೆ ಎಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ನಡೆದ ತನಿಖೆಯಲ್ಲಿ ತಿಳಿದುಬಂದಿದೆ. ಹೆಚ್ಚಿನ ಆದಾಯ ನೀಡುವುದಾಗಿ ಭರವಸೆ ನೀಡಿ 35 ಸಾವಿರಕ್ಕೂ ಅಧಿಕ ಸಾರ್ವಜನಿಕ ಹೂಡಿಕೆದಾರರಿಂದ 2,459.49 ಕೋಟಿ ರು. ಸಂಗ್ರಹಿಸಲಾಗಿದೆ.


