ನಿವೃತ್ತ ಯೋಧ ಸಂದೀಪ ಮಂಜರಗಿ ಅವರ ಸಾವಿನ ಪ್ರಕರಣವು ಭಯಾನಕ ತಿರುವು ಪಡೆದಿದೆ. 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ, ಪತ್ನಿ ಸುಮಾ ತನ್ನ ಪ್ರಿಯಕರನೊಂದಿಗೆ ಸೇರಿ ಆಸ್ಪತ್ರೆಯಲ್ಲಿಯೇ ವಿಷ ನೀಡಿ ಪತಿಯನ್ನು ಹತ್ಯೆ ಮಾಡಿದ್ದಾಳೆ. ವಿಮೆ ಹಣ ಹಂಚಿಕೆ ಜಗಳದಿಂದಾಗಿ ಈ ಸಂಚು ಬಯಲಾಗಿದ್ದು, 9 ಜನರ ಬಂಧನವಾಗಿದೆ.

ಬೆಳಗಾವಿ (ಜೂ.15): ದೇಶ ಕಾಯುವ ನಿವೃತ್ತ ಯೋಧನೊಬ್ಬನ ಸಾವಿನ ಪ್ರಕರಣ ಈಗ ಭಯಾನಕ ತಿರುವು ಪಡೆದುಕೊಂಡಿದೆ. ಕೇವಲ 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಸ್ವಂತ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿರುವ ರೋಚಕ ಕಥೆಯನ್ನು ಬೆಳಗಾವಿ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಸಂಬಂಧ ಪತ್ನಿ ಸೇರಿದಂತೆ ಒಟ್ಟು 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ಹಿನ್ನೆಲೆ:

ನಿವೃತ್ತ ಯೋಧ ಸಂದೀಪ ಮಂಜರಗಿ (46) ಈ ಪ್ರಕರಣದ ದುರ್ದೈವಿ. ಕೆಲವು ದಿನಗಳ ಹಿಂದೆ ಸಣ್ಣ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸಂದೀಪ್ ಅವರನ್ನು ಅವರ ಪತ್ನಿ ಸುಮಾ, ಘಟಪ್ರಭಾದ ಜೆಜೆ ಕೋ-ಆಪರೇಟಿವ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅದೇ ಆಸ್ಪತ್ರೆಯಲ್ಲಿ ಪತಿಯ ಪ್ರಾಣ ತೆಗೆಯಲು ಸುಮಾ ಮತ್ತು ಆಕೆಯ ಪ್ರಿಯಕರ ಪುಂಡಲೀಕ ಕಿರಾತಕ ಸಂಚು ರೂಪಿಸಿದ್ದರು.

ಆಸ್ಪತ್ರೆಯಲ್ಲೇ ಸೈಲೆಂಟ್ ಕೊಲೆ:

ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆತನಿಗೆ ನಿದ್ದೆ ಮಾತ್ರೆಗಳನ್ನು ನೀಡಲಾಗಿತ್ತು. ಅಷ್ಟಕ್ಕೇ ಸುಮ್ಮನಾಗದ ಆರೋಪಿಗಳು, ಆಸ್ಪತ್ರೆಯ ಸಲೈನ್ ಬಾಟಲಿಯ ಮೂಲಕವೇ ವಿಷಪ್ರಾಶನ ಮಾಡಿಸಿ ಪತಿಯನ್ನು ಹತ್ಯೆ ಮಾಡಿದ್ದಾರೆ. ಈ ಕೃತ್ಯಕ್ಕೆ ಸುಮಾ ಮತ್ತು ಪುಂಡಲೀಕನಿಗೆ ಅಪ್ಪಾಸಾಬ್ ನಾಯಿಕವಾಡಿ, ಚನ್ನಪ್ಪಾ ಅಡವಿಸ್ವಾಮಿಮಠ ಸೇರಿದಂತೆ ಒಟ್ಟು 9 ಜನ ಸಾಥ್ ನೀಡಿದ್ದರು.

ಪೊಲೀಸರಿಗೂ ಲಂಚ, ವರದಿ ತಿದ್ದುಪಡಿ:

ಕೊಲೆಯ ನಂತರ ಎಫ್‌ಎಸ್‌ಎಲ್ (FSL) ವರದಿಯಲ್ಲಿ ವಿಷಪ್ರಾಶನದ ಬಗ್ಗೆ ಉಲ್ಲೇಖವಾಗಿತ್ತು. ಆದರೆ, 2 ಕೋಟಿ ರೂಪಾಯಿ ವಿಮೆ ಹಣ ಸಿಗಬೇಕೆಂಬ ಉದ್ದೇಶದಿಂದ ಆರೋಪಿಗಳು ಹಣದ ಆಮಿಷವೊಡ್ಡಿ ಎಫ್‌ಎಸ್‌ಎಲ್ ವರದಿಯನ್ನೇ ತಿದ್ದುಪಡಿ ಮಾಡಿಸಲು ಪ್ರಯತ್ನಿಸಿದ್ದರು. ಇದಕ್ಕೆ ಕೆಲವು ಪೊಲೀಸ್ ಸಿಬ್ಬಂದಿಯೂ ಸಹಕರಿಸಿದ್ದರು ಎಂಬ ಸ್ಫೋಟಕ ಮಾಹಿತಿ ಸುದ್ದಿಗೋಷ್ಠಿಯಲ್ಲಿ ಹೊರಬಂದಿದೆ.

ಬಾಂಬ್ ಸಿಡಿಸಿದ ಇನ್ಶೂರೆನ್ಸ್ ಜಗಳ:

ಇಷ್ಟೆಲ್ಲಾ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದು ವಿಮೆ ಹಣದ ಹಂಚಿಕೆಯ ವಿಚಾರದಲ್ಲಿ! ಸಂದೀಪ್ ಅವರ ಹೆಸರಿನಲ್ಲಿದ್ದ 2 ಕೋಟಿ ರೂ. ವಿಮೆ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಪತ್ನಿ ಸುಮಾ ಮತ್ತು ಪ್ರಿಯಕರ ಪುಂಡಲೀಕ ನಡುವೆ ಜಗಳ ಆರಂಭವಾಗಿತ್ತು. ಈ ಸುಳಿವು ಬೆನ್ನಟ್ಟಿದ ಯಮಕನಮರಡಿ ಮತ್ತು ಘಟಪ್ರಭಾ ಪೊಲೀಸರು ತನಿಖೆ ನಡೆಸಿದಾಗ ಈ ಭೀಕರ ಹತ್ಯಾಕಾಂಡ ಬಯಲಾಗಿದೆ. ಬೆಳಗಾವಿ ಎಸ್‌ಪಿ ಕೆ. ರಾಮರಾಜನ್ ಅವರು ಸುದ್ದಿಗೋಷ್ಠಿ ನಡೆಸಿ, ಪ್ರಕರಣದ ಹಂತ ಹಂತದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ಮತ್ತು ದಕ್ಷತೆಯಿಂದ ಕೆಲಸ ಮಾಡಿದ ಪೊಲೀಸ್ ತಂಡವನ್ನು ಶ್ಲಾಘಿಸಿದ್ದಾರೆ.