ಪತ್ನಿಯ ಹೆರಿಗೆಗಾಗಿ ರಜೆ ಮೇಲೆ ಊರಿಗೆ ಬಂದಿದ್ದ ಸತಾರಾ ಮೂಲದ ಯೋಧ ಪ್ರಮೋದ್ ಜಾಧವ್, ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಯೋಧ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಂದೆಯ ಮುಖ ನೋಡುವ ಮುನ್ನವೇ ಮಗು ಅನಾಥವಾದ ಘಟನೆ ಗ್ರಾಮದಲ್ಲಿ ಶೋಕ ಸೃಷ್ಟಿಸಿದೆ.
ಚಿಕ್ಕೋಡಿ/ಸತಾರಾ: 'ತಾನೊಂದು ಬಗೆದರೆ ದೈವವೊಂದು ಬಗೆಯಿತು' ಎಂಬ ಗಾದೆಮಾತು ಈ ಯೋಧನ ಬದುಕಿನಲ್ಲಿ ಅಕ್ಷರಶಃ ಸತ್ಯವಾಗಿದೆ. ಪತ್ನಿಯ ಹೆರಿಗೆಯ ಸಮಯದಲ್ಲಿ ಜೊತೆಗಿದ್ದು, ಹುಟ್ಟುವ ಮಗುವನ್ನು ಎತ್ತಿ ಮುದ್ದಾಡಬೇಕೆಂಬ ಕನಸು ಹೊತ್ತಿದ್ದ ಸೈನಿಕನೊಬ್ಬ ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿದ್ದಾರೆ. ಯೋಧನ ಸಾವಿನ ಬೆನ್ನಲ್ಲೇ ಜನಿಸಿದ ಮಗು, ತಂದೆಯ ಮುಖ ನೋಡುವ ಮೊದಲೇ ಅನಾಥವಾದ ಘಟನೆ ಇಡೀ ಗ್ರಾಮವನ್ನೇ ಕಣ್ಣೀರಲ್ಲಿ ಮುಳುಗಿಸಿದೆ.
ಪತ್ನಿಯ ಹೆರಿಗೆಗಾಗಿ ಹತ್ತು ದಿನಗಳ ರಜೆ ಮೇಲೆ ಬಂದಿದ್ದ ಯೋಧ
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಅರೆದಾರೆ ಗ್ರಾಮದ ನಿವಾಸಿ ಪ್ರಮೋದ್ ಪರಾಶ್ರಮ ಜಾಧವ್ ಅವರು ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. ಕೇವಲ ಒಂದು ವರ್ಷದ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪ್ರಮೋದ್, ತುಂಬು ಗರ್ಭಿಣಿಯಾಗಿದ್ದ ಪತ್ನಿಯ ಹೆರಿಗೆಗಾಗಿ ಹತ್ತು ದಿನಗಳ ರಜೆ ಪಡೆದು ಊರಿಗೆ ಬಂದಿದ್ದರು. ಪತ್ನಿಯ ನೋವಿಗೆ ಹೆಗಲಾಗಬೇಕು, ಹುಟ್ಟುವ ಮಗುವನ್ನು ಬರಮಾಡಿಕೊಳ್ಳಬೇಕು ಎಂಬುದು ಅವರ ಹಂಬಲವಾಗಿತ್ತು.
ಸಂತೋಷದ ಕ್ಷಣಗಳ ನಡುವೆ ನುಗ್ಗಿದ ಮೃತ್ಯು
ದುರಾದೃಷ್ಟವಶಾತ್, ಶುಕ್ರವಾರ ರಾತ್ರಿ 11:30ರ ಸುಮಾರಿಗೆ ವಡಾ ಫಾಟಾದಿಂದ ಸತಾರಾಕ್ಕೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಹಳೆಯ ಆರ್‌ಟಿಒ ಕಚೇರಿ ವೃತ್ತದಲ್ಲಿ ಪಿಕಪ್ ವಾಹನವೊಂದು ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದ ಪ್ರಮೋದ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮನೆಯಲ್ಲಿ ಮಗುವಿನ ಆಗಮನದ ಸಂಭ್ರಮಕ್ಕೆ ಸಿದ್ಧತೆ ನಡೆಯುತ್ತಿದ್ದಾಗಲೇ ಮೃತ್ಯು ದಾಳಿ ಮಾಡಿತ್ತು.
ತಂದೆ ತೀರಿಹೋದ ಕೆಲವೇ ಗಂಟೆಗಳಲ್ಲಿ ಮಗಳ ಜನನ!
ಪತಿ ಪ್ರಮೋದ್ ಮೃತಪಟ್ಟ ಕೆಲವೇ ಗಂಟೆಗಳಲ್ಲಿ, ಶನಿವಾರ ಮುಂಜಾನೆ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮನೆಯ ಯಜಮಾನ ಸ್ಮಶಾನ ಸೇರಿದ್ದರೆ, ಅತ್ತ ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಅಳು ಕೇಳಿಸಿತ್ತು. ಮಗಳ ಮುಖ ನೋಡಲು ಕಾತರದಿಂದ ಕಾಯುತ್ತಿದ್ದ ತಂದೆ ಇಲ್ಲದ ಸಮಯದಲ್ಲಿ ಜನಿಸಿದ ಆ ಕೂಸು ಯಾವ ಪಾಪ ಮಾಡಿತ್ತೋ ಎಂದು ಗ್ರಾಮಸ್ಥರು ಮರುಗುತ್ತಿದ್ದಾರೆ.
ಕೈ ಹಿಡಿದ ಪತಿ ಚಿತೆಯ ಮೇಲೆ: ಕರುಳು ಹಿಂಡುವಂತಿತ್ತು ಅಂತಿಮ ಸಂಸ್ಕಾರ
ಶನಿವಾರ ಮಧ್ಯಾಹ್ನ ಯೋಧ ಪ್ರಮೋದ್ ಅವರ ಅಂತ್ಯಕ್ರಿಯೆ ಅರೆದಾರೆ ಗ್ರಾಮದ ಸ್ಮಶಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಪತಿಯ ಅಂತಿಮ ದರ್ಶನಕ್ಕೆ ಆಸ್ಪತ್ರೆಯಿಂದಲೇ ನವಜಾತ ಶಿಶುವಿನೊಂದಿಗೆ ಬಂದ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತ್ತು. ತಂದೆಯ ಅರಿವಿಲ್ಲದ ಮಗು ಹಾಗೂ ಗಂಡನನ್ನು ಕಳೆದುಕೊಂಡ ಪತ್ನಿಯ ಸ್ಥಿತಿ ಕಂಡ ಅಲ್ಲಿದ್ದವರ ಕಣ್ಣಾಲಿಗಳು ತೇವಗೊಂಡವು.
ವರದಿ: ಮುಷ್ತಾಕ್ ಪೀರಜಾದೇ ಏಷ್ಯಾ ನೆಟ್ ಸುವರ್ಣ ನ್ಯೂಸ್


