ಬೆಂಗಳೂರು(ಫೆ.16): ಬಿಬಿಎಂಪಿಯ ಮುಖ್ಯಲೆಕ್ಕಾಧಿಕಾರಿ ಕಚೇರಿಯ ಅಧಿಕಾರಿಗಳು ಗುತ್ತಿಗೆದಾರರ ಹೆಸರಿನಲ್ಲಿ ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಯಿಸಿ ಲಪಟಾಯಿಸಿದ 4.15 ಕೋಟಿಯಲ್ಲಿ ಕೇವಲ 8 ಲಕ್ಷ ಮಾತ್ರ ನಕಲಿ ಖಾತೆಯಲ್ಲಿ ಉಳಿದಿದೆ.

ಬಿಬಿಎಂಪಿ ಮುಖ್ಯಲೆಕ್ಕಾಧಿಕಾರಿಯ ಕಚೇರಿಯ ಲೆಕ್ಕ ಅಧೀಕ್ಷಕರಾದ ಅನಿತಾ ಮತ್ತು ರಾಮಮೂರ್ತಿ ಹಾಗೂ ಇದೇ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಎಂಬುವವರು ಗುತ್ತಿಗೆದಾರ ಚಂದ್ರಪ್ಪ ಅವರ ಹೆಸರಿನಲ್ಲಿ ಹಂಪಿನಗರದ ಜನತಾ ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿ ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಸಿದ್ದರು. ಮಹದೇವಪುರ ವಲಯದಲ್ಲಿ 4.15 ಕೋಟಿ ಬಿಬಿಎಂಪಿ ಕಾಮಗಾರಿ ನಡೆಸಿದ್ದ ಗುತ್ತಿಗೆದಾರ ಚಂದ್ರಪ್ಪ ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡಬೇಕಾಗಿದ್ದ ಹಣವನ್ನು ತಾವು ಸೃಷ್ಟಿಸಿದ ನಕಲಿ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು.

ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಮಗನ ಕೊಚ್ಚಿ ಕೊಂದ್ರು..!

ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಆರ್‌.ಗೋವಿಂದರಾಜು ತಮ್ಮ ಕಚೇರಿಯ ಅನಿತಾ, ರಾಮಮೂರ್ತಿ ಹಾಗೂ ರಾಘವೇಂದ್ರ ವಿರುದ್ಧ ಫೆ.12ರಂದು ಬಿಎಂಟಿಎಫ್‌ನಲ್ಲಿ ದೂರು ದಾಖಲಿಸಿದ್ದರು. ಜತೆಗೆ ಬಿಬಿಎಂಪಿ ಆಯುಕ್ತರು ಈ ಮೂವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿರುವ ಬಿಎಂಟಿಎಫ್‌ ಪೊಲೀಸರು ಲೆಕ್ಕ ಅಧೀಕ್ಷಕರಾದ ಅನಿತಾ ಮತ್ತು ರಾಮಮೂರ್ತಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ತಲೆ ಮರಸಿಕೊಂಡಿರುವ ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕನ್ನಡದಲ್ಲಿ ಮಾತಾಡಿದರೆ ದಂಡ: ವರದಿಗೆ ಸೂಚನೆ

ಜನತಾ ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿ ಸೃಷ್ಟಿಸಿದ ನಕಲಿ ಬ್ಯಾಂಕ್‌ ಖಾತೆಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದ .4.15 ಕೋಟಿಗಳಲ್ಲಿ ಕೇವಲ .8 ಲಕ್ಷ ಮಾತ್ರ ಖಾತೆಯಲ್ಲಿ ಉಳಿದಿದೆ. ಗಂಗಾಧರ್‌ ಹಾಗೂ ನಾಗೇಶ್‌ ಎಂಬುವವರ ಹೆಸರಿನಲ್ಲಿ .1.75 ಕೋಟಿ ಮೊತ್ತದ ಡಿಡಿ ಮಾಡಿಸಲಾಗಿದೆ. ಡಿಡಿ ಮೊತ್ತ ಪಾವತಿಯಾಗುವ ಮುನ್ನ ಸಂಬಂಧ ಪಟ್ಟಬ್ಯಾಂಕ್‌ಗೆ ಮಾಹಿತಿ ನೀಡಿ ತಡೆ ಹಿಡಿಯಲಾಗಿದೆ. ಉಳಿದಂತೆ ಫೆ.3ರಿಂದ ಒಂದು ವಾರ ನಕಲಿ ಖಾತೆಯಿಂದ .2.40 ಕೋಟಿ ನಗದು ಡ್ರಾ ಮಾಡಲಾಗಿದೆ ಎಂದು ಬಿಎಂಟಿಎಫ್‌ನ ಪೊಲೀಸ್‌ ವರಿಷ್ಠಾಧಿಕಾರಿ ಓಬಳೇಶ್‌ ಮಾಹಿತಿ ನೀಡಿದ್ದಾರೆ.

ಯುನಿಟಿ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಬೆಂಕಿ: ಆತಂಕ

ಇನ್ನು ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಗೆ ಸಂಬಂಧಿಸಿದಂತೆ ನೀಡಿರುವ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಸೇರಿದಂತೆ ಎಲ್ಲ ದಾಖಲೆಗಳು ನಕಲಿ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸಂಬಂಧ ಬ್ಯಾಂಕ್‌ಗೂ ನೋಟಿಸ್‌ ಜಾರಿ ಮಾಡಲಾಗಿದೆ. ಇದೇ ರೀತಿ ನಗರದ ಬೇರೆ ಬ್ಯಾಂಕ್‌ಗಳಲ್ಲಿಯೂ ನಕಲಿ ದಾಖಲೆ ಸೃಷ್ಟಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮತ್ತಿಬ್ಬರಿಗಾಗಿ ತಮಿಳುನಾಡಿನಲ್ಲಿ ಹುಡುಕಾಟ:

ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಪ್ಪ ಮತ್ತು ನಾಗೇಶ್‌ ಮತ್ತಿಬ್ಬರು ಆರೋಪಿಗಳು ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ. ತಮಿಳುನಾಡಿನಲ್ಲಿ ಬಿಎಂಟಿಎಫ್‌ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸೋಮವಾರದೊಳಗೆ ಚಂದ್ರಪ್ಪ ಮತ್ತು ನಾಗೇಶ್‌ ಅವರನ್ನು ಬೆಂಗಳೂರಿಗೆ ಕರೆತರಲಾಗುವುದು ಎಂದು ಓಬಳೇಶ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಕಚೇರಿಗೆ ಕರೆ ತಂದು ವಿಚಾರಣೆ

ಲೆಕ್ಕ ಅಧೀಕ್ಷಕರಾದ ಅನಿತಾ ಮತ್ತು ರಾಮಮೂರ್ತಿ ಅವರನ್ನು ಶುಕ್ರವಾರ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಈ ವೇಳೆ ಕೋರ್ಟ್‌ ಹೆಚ್ಚಿನ ವಿಚಾರಣೆಗೆ ಅನಿತಾ ಮತ್ತು ರಾಮಮೂರ್ತಿ ಅವರನ್ನು ಫೆ.24ರ ವರೆಗೆ ಬಿಎಂಟಿಎಫ್‌ ವಶಕ್ಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಅನಿತಾ ಮತ್ತು ರಾಮಮೂರ್ತಿ ಅವರನ್ನು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಮುಖ್ಯಲೆಕ್ಕಾಧಿಕಾರಿ ಕಚೇರಿಗೆ ಕರೆ ತಂದ ಬಿಎಂಟಿಆರ್‌ ಅಧಿಕಾರಿಗಳು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆಹಾಕಿದ್ದಾರೆ.

ರಾಮನಗರದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ!

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಬಿಬಿಎಂಪಿ ಕೆಲವು ಅಧಿಕಾರಿಗಳ ವಿಚಾರಣೆಗೆ ಮಾತ್ರ ನೋಟಿಸ್‌ ಜಾರಿ ಮಾಡಲಾಗಿದೆ. ಅದನ್ನು ಹೊರತು ಪಡಿಸಿ ಯಾವುದೇ ರಾಜಕೀಯ ಮುಖಂಡರಿಗೆ ಹಾಗೂ ಇನ್ನಿತರರಿಗೆ ನೋಟಿಸ್‌ ನೀಡಿಲ್ಲ ಎಂದು ಬಿಎಂಟಿಎಫ್‌ನ ಪೊಲೀಸ್‌ ವರಿಷ್ಠಾಧಿಕಾರಿ ಓಬಳೇಶ್‌ ಹೇಳಿದ್ದಾರೆ.