ರಮೆಶ್‌ ಬನ್ನಿಕುಪ್ಪೆ

ಬೆಂಗಳೂರು[ಫೆ.16]: ರಾಜ್ಯದಲ್ಲಿ ಅಳಿವಿನಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದುಗಳ (ಲಾಂಗ್‌ ಬಿಲ್ಡ್‌ ವಲ್ಚರ್ಸ್‌) ಸಂರಕ್ಷಣೆಗಾಗಿ ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟವನ್ನು ರಣಹದ್ದು ವನ್ಯಜೀವಿಧಾಮವೆಂದು ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ, ಅವುಗಳ ಸಂಖ್ಯೆ ಹೆಚ್ಚಳ ಮಾಡುವ ಸಲುವಾಗಿ ‘ರಣಹದ್ದುಗಳ ಸಂತಾನೋತ್ಪತ್ತಿ ಕೇಂದ್ರ’ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ.

ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟವನ್ನು ರಣಹದ್ದುಗಳ ವನ್ಯಜೀವಿಧಾಮವನ್ನಾಗಿ ಘೋಷಣೆ ಮಾಡಿದ್ದರೂ ಇವುಗಳ ಸಂತತಿ ಗಣನೀಯವಾಗಿ ಕ್ಷೀಣಿಸುತ್ತಿದ್ದು, ವಿನಾಶದ ಅಂಚು ತಲುಪಿವೆ. ಜಗತ್ತಿನ ಅಳಿವಿನ ಅಂಚಿನಲ್ಲಿರುವ ಪಕ್ಷಿಗಳ ಪಟ್ಟಿಯಲ್ಲಿ ಇರುವ ಈ ಪಕ್ಷಿಗಳ ಸಂತತಿ ಉಳಿಸಿ ಹೆಚ್ಚಳ ಮಾಡಲು ರಾಜ್ಯ ಅರಣ್ಯ ಇಲಾಖೆ ರಣಹದ್ದುಗಳ ಸಂತಾನೋತ್ಪತ್ತಿ ಕೇಂದ್ರ ಪ್ರಾರಂಭಿಸಲು ಯೋಜನೆ ಸಿದ್ಧಪಡಿಸಿದೆ. ಅಲ್ಲದೆ, ಅವುಗಳ ಸಂತಾನೋತ್ಪತ್ತಿಗೆ ಪೂರಕವಾದ ಪರಿಸರ ನಿರ್ಮಿಸಲು ಸಿದ್ಧತೆ ನಡೆಸಿದೆ.

ಬಿಎನ್‌ಎಚ್‌ಎಸ್‌ ಉಸ್ತುವಾರಿ:

ರಾಮನಗರದ ಪ್ರಾದೇಶಿಕ ವಿಭಾಗದಲ್ಲಿ ‘ಕನ್ಸರ್‌ವೇಷನ್‌ ಬ್ರೀಡಿಂಗ್‌ ಸೆಂಟರ್‌’ ಎಂಬ ಹೆಸರಿನಲ್ಲಿ ಕೇಂದ್ರ ಸ್ಥಾಪನೆ ಮಾಡಲಾಗುವುದು. ಈ ಕೇಂದ್ರವನ್ನು ಬಾಂಬೆ ನ್ಯಾಚುರಲ್‌ ಹಿಸ್ಟರ್‌ ಸೊಸೈಟಿ (ಬಿಎನ್‌ಎಚ್‌ಎಸ್‌) ಅವರ ಉಸ್ತುವಾರಿಯಲ್ಲಿ ನಿರ್ಮಿಸುತ್ತಿದ್ದು, ಕೇಂದ್ರ ಸ್ಥಾಪನೆ ಬಳಿಕ ಅದಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2.72 ಕೋಟಿ ರು.ಗೆ ಅನುಮೋದನೆ:

ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆಗೆ ಪೂರಕವಾಗಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು 2.10 ಕೋಟಿ ರು. ಮತ್ತು ಅದರ ನಿರ್ವಹಣೆಗಾಗಿ 62.62 ಲಕ್ಷ ರು. ಸೇರಿದಂತೆ ಒಟ್ಟು 2.72 ಕೋಟಿ ರು.ಗಳ ಅನುಮೋದನೆ ಸಿಕ್ಕಿದೆ. ಹಣ ಬಿಡುಗಡೆಯಾಗುತ್ತಿದ್ದಂತೆ ಕಾಮಗಾರಿ ಪ್ರಾರಂಭವಾಗಲಿದೆ.

ರಾಜ್ಯದಲ್ಲಿ ಮೊದಲ ಕೇಂದ್ರ:

ಹರ್ಯಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ರಣಹದ್ದು ಸಂತಾನೋತ್ಪತ್ತಿ ಕೇಂದ್ರಗಳಿವೆ. ಆದರೆ, ರಾಜ್ಯದಲ್ಲಿ ಈವರೆಗೂ ಈ ಕೇಂದ್ರ ಇರಲಿಲ್ಲ. ಇದೇ ಮೊದಲ ಬಾರಿಗೆ ಕೇಂದ್ರ ಪ್ರಾರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.

‘ಡೈಕ್ಲೊಫಿನಾಕ್‌’ ನಿಷೇಧಕ್ಕೆ ಮನವಿ

ಜಾನುವಾರುಗಳನ್ನು ಕಾಡುವ ಉರಿಯೂತ, ಮೂಳೆನೋವು ಹಾಗೂ ಜ್ವರ ಮತ್ತಿತರ ಕಾಯಿಲೆಗಳಿಗೆ ‘ಡೈಕ್ಲೊಫಿನಾಕ್‌’ ಎಂಬ ವಿಷಕಾರಿ ರಾಸಾಯನಿಕವಿರುವ ಔಷಧ ಬಳಸಲಾಗುತ್ತಿದೆ. ಈ ಔಷಧದಿಂದ ಉಪಚರಿಸಲ್ಪಟ್ಟಜಾನುವಾರುಗಳ ಕಳೇಬರ ತಿನ್ನುವ ರಣಹದ್ದುಗಳು ಮೂತ್ರಪಿಂಡ ಸೇರಿದಂತೆ ವಿವಿಧ ಅಂಗಾಂಗಗಳು ವೈಫಲ್ಯಗೊಂಡು ಸಾವನ್ನಪ್ಪುತ್ತಿವೆ. ಹೀಗಾಗಿ ಅವುಗಳ ಸಂತತಿ ಕ್ಷೀಣಿಸುತ್ತಿದೆ. ಈ ಅಂಶ ಗೊತ್ತಾದ ಬಳಿಕ ಕೇಂದ್ರ ಸರ್ಕಾರ 2006ರಲ್ಲಿ ‘ಡೈಕ್ಲೊಫಿನಾಕ್‌’ ಔಷಧವನ್ನು ಪಶುಗಳಿಗೆ ನೀಡುವುದಕ್ಕೆ ನಿಷೇಧಿಸಿದೆ. ಆದ್ದರಿಂದ ಈ ಔಷಧವನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಯಾಗ್‌ ಮನವಿ ಮಾಡುತ್ತಾರೆ.

ಅರಣ್ಯ ಇಲಾಖೆ ರಾಮನಗರದಲ್ಲಿ ಸಂತಾನೋತ್ಪತ್ತಿ ಕೇಂದ್ರ ಪ್ರಾರಂಭಿಸುತ್ತಿರುವುದು ಸಂತಸದ ವಿಚಾರ. ಆದರೆ, ಸಂಶೋಧನೆ ಮತ್ತು ಲ್ಯಾಬ್‌ ಸೇರಿದಂತೆ ಕೇಂದ್ರದ ಎಲ್ಲ ವಿಭಾಗಗಳು ರಾಮನಗರದಲ್ಲಿ ಇದ್ದರೆ ಉತ್ತಮ.

- ಬಿ. ಶಶಿಕುಮಾರ್‌, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್‌ನ ಕಾರ್ಯದರ್ಶಿ

ನಿಸರ್ಗದ ಜಲಗಾರ ರಣಹದ್ದು

ಗ್ರಾಮೀಣ ಭಾಗದಲ್ಲಿ ಸತ್ತ ಪಶುಗಳು ಸೇರಿದಂತೆ ಬೇರೆ ಬೇರೆ ಪ್ರಾಣಿ, ಪಕ್ಷಿಗಳ ಕಳೇಬರದಿಂದ ಪರಿಸರಕ್ಕೆ ಹಾನಿಯಾಗುವುದನ್ನು ತಡೆಯುವ, ಸಣ್ಣಪುಟ್ಟಪಕ್ಷಿಗಳ ಸಂಖ್ಯೆ ಹೆಚ್ಚಾದಲ್ಲಿ ಅವುಗಳ ಸಂಖ್ಯೆಯನ್ನು ನಿಯಂತ್ರಿಸುವ ಕೆಲಸವನ್ನು ರಣಹದ್ದುಗಳು ಮಾಡುತ್ತವೆ. ವಿಶೇಷವಾಗಿ ಪರಿಸರ ಸ್ವಚ್ಛತೆಗೆ ಅವುಗಳು ಕೊಡುಗೆ ನೀಡುತ್ತವೆ.