ಸೋಂಕಿತರಿಗೆ ಹಾಸಿಗೆ ಮೀಸಲಿಡದ 4 ಆಸ್ಪತ್ರೆ ವಿರುದ್ಧ FIRಗೆ ಆದೇಶ

ಬಿಬಿಎಂಪಿ ನೀಡಿದ್ದ ನೋಟಿಸ್‌ಗೆ ಸಮಂಜಸ ಉತ್ತರ ನೀಡದ ಆಸ್ಪತ್ರೆಗಳು| 36 ಖಾಸಗಿ ಆಸ್ಪತ್ರೆಗಳಿಗೆ ಶೋಕಾಸ್‌ ನೋಟಿಸ್‌ ಜಾರಿ| ಕೆಲವು ಆಸ್ಪತ್ರೆಗಳ ವಿವರಣೆ ಸಮರ್ಪಕವಾಗಿಲ್ಲ, ಹೀಗಾಗಿ, ಎಫ್‌ಐಆರ್‌ ದಾಖಲಿಸಲು ಸೂಚನೆ| 

BBMP Order to FIR Filed Against 4 Hospitals in Bengaluru

ಬೆಂಗಳೂರು(ಸೆ.25): ಕೊರೋನಾ ಸೋಂಕಿತರ ಚಿಕಿತ್ಸೆಗೆ ಸರ್ಕಾರದ ಆದೇಶದಂತೆ ಶೇ.50ರಷ್ಟು ಹಾಸಿಗೆ ನೀಡದ ನಗರದ 4 ಖಾಸಗಿ ಆಸ್ಪತ್ರೆಗಳ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸುವುದಕ್ಕೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಆದೇಶಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಪೋರ್ಟಿಸ್‌ ಆಸ್ಪತ್ರೆ, ಪದ್ಮನಾಭನಗರದ ಎನ್‌ಯು ಆಸ್ಪತ್ರೆ, ಲಾಗ್‌ಫಾರ್ಡ್‌ ಗಾರ್ಡನ್‌ನ ಪಬ್ಲಿಕ್‌ ಆಸ್ಪತ್ರೆ ಹಾಗೂ ಮಿಲ್ಲರ್ಸ್‌ ರಸ್ತೆಯ ವಿಕ್ರಂ ಆಸ್ಪತ್ರೆ ವಿರುದ್ಧ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಅದೇಶಿಸಿದ್ದು, ಆಸ್ಪತ್ರೆಗಳು ಇರುವ ವ್ಯಾಪ್ತಿಯ ಪಾಲಿಕೆ ಆರೋಗ್ಯ ಅಧಿಕಾರಿ ಅಥವಾ ಜಂಟಿ ಆಯುಕ್ತರು ಸಂಬಂಧಪಟ್ಟ ಪೊಲೀಸ್‌ ಠಾಣೆಗಳಿಗೆ ಹೋಗಿ ದೂರು ದಾಖಲಿಸುವುದಕ್ಕೆ ಸೂಚಿಸಲಾಗಿದೆ.

ನಗರದಲ್ಲಿ ಕೊರೋನಾ ಸೋಂಕಿತರಿಗೆ ಶೇ.50ರಷ್ಟು ಹಾಸಿಗೆಗಳನ್ನು ಬಿಟ್ಟುಕೊಡದ 36 ಖಾಸಗಿ ಆಸ್ಪತ್ರೆಗಳಿಗೆ ಕಾರಣ ಕೇಳಿ ಪಾಲಿಕೆ ಇತ್ತೀಚೆಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿತ್ತು. ಈ ನೋಟಿಸ್‌ಗೆ 48 ಗಂಟೆಗಳ ಒಳಗಾಗಿ ಉತ್ತರ ನೀಡುವಂತೆ ಸೂಚನೆ ನೀಡಲಾಗಿತ್ತು. ಈ ವೇಳೆ ನಾಲ್ಕು ಪ್ರಮುಖ ಆಸ್ಪತ್ರೆಗಳು ನೀಡಿರುವ ವಿವರಣೆ ಸಮಂಜಸವಾಗಿಲ್ಲ. ಹೀಗಾಗಿ, ಬಿಬಿಎಂಪಿ ಆಯುಕ್ತರು ವಿಪತ್ತು ನಿರ್ವಹಣೆ ಕಾಯ್ದೆಯಡಿ ಆಸ್ಪತ್ರೆಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆದೇಶಿಸಿದ್ದಾರೆ.

ಬೆಂಗಳೂರಲ್ಲಿ ಸೋಂಕು ಪತ್ತೆ ಶೇ.5ಕ್ಕಿಂತ ಕಡಿಮೆ ಮಾಡಿ: ಪ್ರಧಾನಿ ಮೋದಿ

ರಾಜಾಜಿನಗರ ಪೋರ್ಟಿಸ್‌ಗೆ ಕೊನೆಯ ಎಚ್ಚರಿಕೆ:

ನಾಲ್ಕು ಆಸ್ಪತ್ರೆಗಳ ವಿರುದ್ಧ ಎಫ್‌ಐಆರ್‌ಗೆ ಆದೇಶಿಸಿರುವುದರ ಜೊತೆಗೆ ರಾಜಾಜಿನಗರದ ಫೋರ್ಟಿಸ್‌ ಆಸ್ಪತ್ರೆಗೆ ಕೊನೆಯ ಎಚ್ಚರಿಕೆ ನೋಟಿಸ್‌ ಜಾರಿ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಇರುವ ಹಾಸಿಗೆ ವಿವರ ಹಾಗೂ ಈಗ ಎಷ್ಟುಹಾಸಿಗೆಯನ್ನು ಸರ್ಕಾರಿ ಕೋಟಾದಡಿ ದಾಖಲಾಗುತ್ತಿರುವ ಕೊರೋನಾ ಸೋಂಕಿತ ರೋಗಿಗಳಿಗೆ ಮೀಸಲಿಡಲಾಗಿದೆ ಎಂಬ ಮಾಹಿತಿಯನ್ನು 48 ಗಂಟೆಯಲ್ಲಿ ನೀಡುವಂತೆ ಸೂಚನೆ ನೀಡಲಾಗಿದೆ. ಇಲ್ಲವಾದರೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಬಹುತೇಕ ಆಸ್ಪತ್ರೆಗಳು ನೋಟಿಸ್‌ಗೆ ಉತ್ತರ

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ನಗರದ 36 ಖಾಸಗಿ ಆಸ್ಪತ್ರೆಗಳಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿ ವಿವರ ನೀಡುವಂತೆ ಕೇಳಲಾಗಿತ್ತು. ಇದರಲ್ಲಿ ಹಲವು ಆಸ್ಪತ್ರೆಗಳು ಡಯಾಲಿಸಸ್‌, ಹೃದ್ರೋಗ ಸೇರಿದಂತೆ ವಿವಿಧ ಕಾರಣಗಳಿಗೆ ಹಾಸಿಗೆ ಮೀಸಲಿಟ್ಟಿರುವುದಾಗಿ ವಿವರಣೆ ನೀಡಿವೆ. ಇನ್ನು ಕೆಲವು ಆಸ್ಪತ್ರೆಗಳ ವಿವರಣೆ ಸಮರ್ಪಕವಾಗಿಲ್ಲ. ಹೀಗಾಗಿ, ಎಫ್‌ಐಆರ್‌ ದಾಖಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios