ಬೆಂಗಳೂರಲ್ಲಿ ಸೋಂಕು ಪತ್ತೆ ಶೇ.5ಕ್ಕಿಂತ ಕಡಿಮೆ ಮಾಡಿ: ಪ್ರಧಾನಿ ಮೋದಿ

ಪರೀಕ್ಷೆ ದ್ವಿಗುಣಗೊಳಿಸಿ| ರಾಜ್ಯ ಸರ್ಕಾರ, ಬಿಬಿಎಂಪಿಗೆ ಪ್ರಧಾನಿ ಮೋದಿ ತಾಕೀತು| ಸಿಎಂ, ಅಧಿಕಾರಿಗಳೊಂದಿಗೆ ಸಭೆ| ಬೆಂಗಳೂರಲ್ಲಿ ಕೊರೋನಾ ಸೋಂಕು ಪರೀಕ್ಷೆಗೆ ಸುಮಾರು 2 ಸಾವಿರ ಮಂದಿ ಕಾರ್ಯ ನಿರ್ವಹಣೆ| 

PM Narendra Modi Talks Over Coronavirus Cases in Bengaluru

ಬೆಂಗಳೂರು(ಸೆ.25): ರಾಜಧಾನಿ ಬೆಂಗಳೂರಿನ ಕೊರೋನಾ ಸೋಂಕು ಪರೀಕ್ಷೆ ಪ್ರಮಾಣ ದ್ವಿಗುಣಗೊಳಿಸಿ ಹಾಗೂ ಸೋಂಕು ಪತ್ತೆ ಪ್ರಮಾಣವನ್ನು ಶೇ.5ಕ್ಕಿಂತ ಕಡಿಮೆಗೊಳಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರಕ್ಕೆ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

"

ಕಳೆದ ಬುಧವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ರಾಜ್ಯದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್‌ ಮೂಲಕ ಸಭೆ ನಡೆಸಿದರು. ಈ ವೇಳೆ ವಿಶೇಷವಾಗಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. ಇನ್ನು ಸೋಂಕು ಕಾಣಿಸಿಕೊಂಡ ಕಂಟೈನ್ಮೆಂಟ್‌ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಸೋಂಕು ಪರೀಕ್ಷೆ ನಡೆಸುವ ಮೂಲಕ ಸೋಂಕು ಹರಡುವ ಪ್ರಮಾಣ ಕಡಿಮೆ ಮಾಡುವಂತೆ ಪ್ರಧಾನ ಮಂತ್ರಿಗಳು ನಿರ್ದೇಶನ ನೀಡಿದ್ದಾರೆ.

ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು, ರಾಜ್ಯ ಹಾಗೂ ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣ ಕಾರ್ಯದ ಬಗ್ಗೆ ಪ್ರಧಾನ ಮಂತ್ರಿಗಳು ಮಾಹಿತಿ ಪಡೆದರು. ವಿಶೇಷವಾಗಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಪರೀಕ್ಷೆಯಲ್ಲಿ ಸೋಂಕು ದೃಢಪಡುವ ಪ್ರಮಾಣವನ್ನು ಶೇ.13 ರಿಂದ ಶೇ.5 ಕ್ಕಿಂತ ಕಡಿಮೆ ಮಾಡಬೇಕು. ಸೋಂಕು ಪರೀಕ್ಷೆ ಸಂಖ್ಯೆಯನ್ನು ದ್ವಿಗುಣ ಗೊಳಿಸಬೇಕು ಹಾಗೂ ಸೋಂಕಿನಿಂದ ಮರಣ ಹೊಂದುವವರ ಪ್ರಮಾಣವನ್ನು ಶೇ.1ಕ್ಕಿಂತ ಕಡಿಮೆ ಮಾಡಬೇಕೆಂದು ಸೂಚನೆ ನೀಡಿದ್ದಾರೆ.

ಕರ್ನಾಟಕ ಸೇರಿ 7 ಸಿಎಂಗಳ ಜತೆ ಮೋದಿ ಸಭೆ!

ಹಾಗಾಗಿ, ಸದ್ಯ ನಗರದಲ್ಲಿ ಸುಮಾರು 20 ಸಾವಿರ ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗುತ್ತಿದೆ. ಅದನ್ನು 40 ಸಾವಿರಕ್ಕೆ ಏರಿಕೆ ಮಾಡಲಾಗುವುದು. ಆಗ ಸೋಂಕು ಪತ್ತೆ ಪ್ರಮಾಣ ಶೇ.5ಕ್ಕಿಂತ ಕಡಿಮೆ ಆಗಲಿದೆ. ಇನ್ನು ಜ್ವರ ಶೀತ ಕೆಮ್ಮು, ಉಸಿರಾಟದ ಸಮಸ್ಯೆ, ಹಿರಿಯ ನಾಗರಿಕರು, ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರನ್ನು ಪತ್ತೆ ಮಾಡಿ ಅವರಿಗೆ ಸೋಂಕು ಪರೀಕ್ಷೆ ಮಾಡಿ ಚಿಕಿತ್ಸೆ ಕೊಡಿಸುವುದನ್ನು ಇನ್ನಷ್ಟುಚುರುಕುಗೊಳಿಸಬೇಕಾಗಿದೆ. ಇದರಿಂದ ಮರಣ ಪ್ರಮಾಣವನ್ನು ಶೇ.1.37 ರಷ್ಟರಿಂದ ಶೇ.1ಕ್ಕಿಂತ ಕಡಿಮೆ ಮಾಡಬಹುದಾಗಿದೆ ಎಂದು ವಿವರಿಸಿದರು.

ನಗರದಲ್ಲಿ ಕೊರೋನಾ ಸೋಂಕು ಪರೀಕ್ಷೆಗೆ ಸುಮಾರು 2 ಸಾವಿರ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರೀಕ್ಷೆ ಪ್ರಮಾಣ ಹೆಚ್ಚಿಸುವ ಹಿನ್ನೆಲೆಯಲ್ಲಿ ಅಗತ್ಯ ಸಿಬ್ಬಂದಿ ಮತ್ತು ಸೋಂಕು ಪರೀಕ್ಷೆಗೆ ಬೇಕಾದ ಕಿಟ್‌ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ ಸಕ್ರಿಯ ಪ್ರಕರಣಗಳ ಪೈಕಿ ಶೇ.58ರಷ್ಟುಮಂದಿ ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ. ಅವರಿಗೆ ಟೆಲಿಮೆಡಿಸನ್‌ ಮೂಲಕ ಅಗತ್ಯ ಸಲಹೆ ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
 

Latest Videos
Follow Us:
Download App:
  • android
  • ios