ಲಸಿಕೆ ಇನ್ನೂ ಪಡೆದಿಲ್ವಾ? ಸಿಬ್ಬಂದಿ ಮನೆಗೇ ಬರ್ತಾರೆ..!
* ಮನೆಗೇ ಬಂದು ಲಸಿಕೆಗಾಗಿ ಕರೆಯ್ದೊತ್ತಾರೆ
* 4 ಸಾವಿರ ಬ್ಲಾಕ್‌ಗಳಲ್ಲಿ ಲಸಿಕೆ ನೀಡಲು ಯೋಜನೆ
* ಮನೆಗಳಿಗೆ ತೆರಳಿ ಲಸಿಕೆ ಪಡೆಯದವರನ್ನು ಕರೆತಂದು ಲಸಿಕೆ ಕೊಡಿಸಲು ಸಿದ್ಧತೆ
ಮೋಹನ ಹಂಡ್ರಂಗಿ
ಬೆಂಗಳೂರು(ಸೆ.25): ಸಂಭವನೀಯ ಕೊರೋನಾ(Coronavirus) ಮೂರನೇ ಅಲೆ ಆರಂಭಕ್ಕೂ ಮುನ್ನ ಶೇಕಡ 100ರಷ್ಟು ಕೊರೋನಾ ಲಸಿಕೆ ನೀಡಲು ಪಣ ತೊಟ್ಟಿರುವ ಬಿಬಿಎಂಪಿಯು, ಈ ನಿಟ್ಟಿನಲ್ಲಿ 198 ವಾರ್ಡ್ ವ್ಯಾಪ್ತಿಯ ಸುಮಾರು 4 ಸಾವಿರ ಬ್ಲಾಕ್‌ಗಳಲ್ಲಿ ಲಸಿಕೆ ನೀಡಲು ಯೋಜನೆ ರೂಪಿಸಿದೆ.
ದೇಶದ ಐದು ಪ್ರಮುಖ ಮಹಾನಗರಗಳ ಪೈಕಿ ಅತಿ ಹೆಚ್ಚು ಡೋಸ್ ಲಸಿಕೆ(Vaccine) ನೀಡಿರುವ ನಗರಗಳಲ್ಲಿ ಬೆಂಗಳೂರು ನಗರ (1.16 ಕೋಟಿ ಡೋಸ್) 2ನೇ ಸ್ಥಾನದಲ್ಲಿದೆ. ಅಂದರೆ, ಶೇ.85ರಷ್ಟು ಜನರಿಗೆ ಮೊದಲ ಡೋಸ್ ಹಾಗೂ ಶೇ.45ರಷ್ಟುಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ತಜ್ಞರು ಕೊರೋನಾ ಮೂರನೇ ಅಲೆ ಆರಂಭದ ಎಚ್ಚರಿಕೆ ನೀಡಿರುವುದರಿಂದ ಮೂರನೇ ಅಲೆಗೂ ಮುನ್ನವೇ ಶೇ.100ರಷ್ಟು ಲಸಿಕೆ ಪೂರ್ಣಗೊಳಿಸಲು ಈ ಯೋಜನೆ ರೂಪಿಸಲಾಗಿದೆ.
ಮೊದಲ ಡೋಸ್ ಲಸಿಕೆ ಶೇ.100ರಷ್ಟು ಗುರಿ ಸಾಧನೆ ಹಾಗೂ ಎರಡನೇ ಡೋಸ್ ಲಸಿಕೆ ಚುರುಕುಗೊಳಿಸುವ ನಿಟ್ಟಿನಲ್ಲಿ 198 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸುಮಾರು 4 ಸಾವಿರ ಬ್ಲಾಕ್‌ಗಳಲ್ಲಿ ಮನೆ-ಮನೆಗೆ ತೆರಳಿ ಲಸಿಕೆ ಪಡೆಯದವರನ್ನು ಕರೆತಂದು ಲಸಿಕೆ ನೀಡಲು ನಿರ್ಧರಿಸಲಾಗಿದೆ. 45 ದಿನಗಳೊಳಗೆ ಮೊದಲ ಡೋಸ್ ನೀಡುವ ಶೇ.100ರಷ್ಟು ಗುರಿ ಸಾಧಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಪಾಲಿಕೆ(BBMP) ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಕರ್ನಾಟಕದಲ್ಲಿ ತಗ್ಗಿದ ಕೊರೋನಾ: ಮಾರ್ಗಸೂಚಿ ನಿಯಮಗಳಲ್ಲಿ ಬದಲಾವಣೆ
ಜಂಕ್ಷನ್‌ಗಳಲ್ಲಿ ಶಿಬಿರ:
ವಾರ್ಡ್‌ಗಳ ವ್ಯಾಪ್ತಿಯ ಬ್ಲಾಕ್ ಮಟ್ಟದಲ್ಲಿ ಮೂರು-ನಾಲ್ಕು ರಸ್ತೆಗಳು ಕೂಡುವ ಜಂಕ್ಷನ್‌ಗಳು ಹಾಗೂ ವೃತ್ತಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಲಸಿಕಾ ಶಿಬಿರ ನಡೆಯಲಿದೆ. ಒಂದೊಂದು ಜಂಕ್ಷನ್‌ನಲ್ಲಿ ಒಟ್ಟು ಮೂರು ತಂಡಗಳು ಇರಲಿವೆ. ಇದರಲ್ಲಿ ಒಂದು ತಂಡ ಶಿಬಿರದಲ್ಲಿ ಲಸಿಕೆ ನೀಡಲಿದೆ. ಉಳಿದ ಎರಡು ತಂಡಗಳು ಆಯಾಯ ಜಂಕ್ಷನ್‌ಗೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ಮನೆ-ಮನೆಗೆ ತೆರಳಿ ಮನೆಯ ಸದಸ್ಯರು ಲಸಿಕೆ ಪಡೆದಿರುವ ಬಗ್ಗೆ ಮಾಹಿತಿ ಪಡೆಯಲಿವೆ. ಯಾರಾದರೂ ಲಸಿಕೆ ಪಡೆಯದವರು ಇದ್ದಲ್ಲಿ ಅವರನ್ನು ಶಿಬಿರದ ಸ್ಥಳಕ್ಕೆ ಕರೆತಂದು ಲಸಿಕೆ ಕೊಡಿಸಲಾಗುತ್ತದೆ. ಅಂತೆಯೆ ಮೊದಲ ಡೋಸ್ ಲಸಿಕೆ ಪಡೆದು ಎರಡನೇ ಡೋಸ್ ಲಸಿಕೆಗೆ ಅರ್ಹರಿದ್ದಲ್ಲಿ ಅವರನ್ನೂ ಕರೆತಂದು ಲಸಿಕೆ ನೀಡುವುದಾಗಿ ಮಾಹಿತಿ ನೀಡಿದರು.
ಖಾಸಗಿ ಆಸ್ಪತ್ರೆಗಳು ಸಾಥ್:
ಬ್ಲಾಕ್ ಮಟ್ಟದ ಈ ಲಸಿಕಾ ಕಾರ್ಯಕ್ಕೆ ಪಾಲಿಕೆ ಆರೋಗ್ಯ ಸಿಬ್ಬಂದಿ ಜೊತೆಗೆ ಸ್ಥಳೀಯ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಕಾಲೇಜುಗಳು ಕೈಜೋಡಿಸಿವೆ. ಖಾಸಗಿಯವರಲ್ಲಿ ವ್ಯಾಕ್ಸಿನೇಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿರಲಿದ್ದಾರೆ. ಪಾಲಿಕೆಯ ಆಶಾ ಕಾರ್ಯಕರ್ತರು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸೇರಿದಂತೆ ಸುಮಾರು ಒಂದೂವರೆ ಸಾವಿರ ಆರೋಗ್ಯ ಸಿಬ್ಬಂದಿ ಈ ಲಸಿಕಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ಆ್ಯಂಬುಲೆನ್ಸ್ ವ್ಯವಸ್ಥೆ: ಬ್ಲಾಕ್ ಮಟ್ಟದಲ್ಲಿ ಜಂಕ್ಷನ್‌ಗಳಲ್ಲಿ ಲಸಿಕೆ ನೀಡುವುದರಿಂದ ಆರೋಗ್ಯದಲ್ಲಿ ಏನಾದರೂ ಏರುಪೇರು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಅನುವಾಗುವಂತೆ ಆ್ಯಂಬುಲೆನ್ಸ್ ವ್ಯವಸ್ಥೆ ಇರಲಿದೆ.
ಹೆಲ್ತ್ ವರ್ಕರ್ಸ್ಗೆ ಬೂಸ್ಟರ್ ಡೋಸ್?
ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ನಗರದಲ್ಲಿ ಶೀಘ್ರದಲ್ಲೇ ಮೂರನೇ ಡೋಸ್ ಲಸಿಕೆ (ಬೂಸ್ಟರ್ ಡೋಸ್) ನೀಡುವ ಸಾಧ್ಯತೆಯಿದೆ. ಏಕೆಂದರೆ, ತಜ್ಞರ ಸಲಹೆ ಮೇರೆಗೆ ಮುಂಬೈ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಹೀಗಾಗಿ ಬಿಬಿಎಂಪಿಯು ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್(Booster Dose) ನೀಡಲು ಸಿದ್ಧವಿದ್ದು, ಸರ್ಕಾರದ ಸೂಚನೆಗೆ ಕಾಯುತ್ತಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕಾ ಅಭಿಯಾನ ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ವಾರ್ಡ್‌ಗಳ ವ್ಯಾಪ್ತಿಯ ಬ್ಲಾಕ್ ಮಟ್ಟದಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಈ ಸಂಬಂಧ ಅಗತ್ಯ ಸಿದ್ಧತೆ ನಡೆಸುತ್ತಿದ್ದು, ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.