Asianet Suvarna News Asianet Suvarna News

ಪಿಒಪಿ ಗಣೇಶ ವಿಸರ್ಜನೆಗೆ ಕೊನೆಗೂ ಬಿಬಿಎಂಪಿ ನಿಷೇಧ!

ಪಿಒಪಿ ಗಣೇಶ ವಿಸರ್ಜನೆಗೆ ಕೊನೆಗೂ ಬಿಬಿಎಂಪಿ ನಿಷೇಧ!| ಪಿಒಪಿ ಗಣೇಶನನ್ನು ಪ್ರತಿಷ್ಠಾಪಿಸಿದ್ದರೆ ಘನ ತ್ಯಾಜ್ಯ ಘಟಕದಲ್ಲಿ ವಿಲೇವಾರಿ ಮಾಡಿ

BBMP Bans POP Ganesha Statue Dissolving
Author
Bangalore, First Published Aug 31, 2019, 12:22 PM IST

ಬೆಂಗಳೂರು[ಆ.31]: ಪರಿಸರ ಮಾರಕ ಪಿಒಪಿ ಗಣೇಶಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವ ಬಿಬಿಎಂಪಿ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ವಿಸರ್ಜನೆಗೆ ವ್ಯವಸ್ಥೆ ಮಾಡಿರುವ ಯಾವುದೇ ಸ್ಥಳಗಳಲ್ಲಿ ಪಿಒಪಿ ಗಣೇಶಗಳ ವಿಸರ್ಜನೆಗೆ ನಿರ್ಬಂಧ ವಿಧಿಸಿದೆ.

ಬಿಬಿಎಂಪಿ 2016ರಲ್ಲೇ ಸರ್ಕಾರ ಪಿಒಪಿ ಗಣೇಶ ನಿಷೇಧ ಮಾಡಿದೆ. ಆದರೆ ಪರಿಸರ ಮಾರಕ ಗಣೇಶಗಳನ್ನು ನಗರದ ಜಲ ಮೂಲಗಳಲ್ಲಿ ವಿಸರ್ಜನೆಗೆ ವಿರೋಧ ವ್ಯಕ್ತವಾಗುತ್ತಿದ್ದರೂ ಕೆರೆಗಳಲ್ಲಿ ಪಿಒಪಿ ಗಣೇಶ ವಿಸರ್ಜನೆಗೆ ನಿಷೇಧ ವಿಧಿಸುವ ಕ್ರಮವನ್ನು ಮಾತ್ರ ಇದುವರೆಗೂ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ ಪಿಒಪಿ ಗಣಪ ನಿಷೇಧದ ಕುರಿತು ಬಿಬಿಎಂಪಿಗೆ ಬದ್ಧತೆಯಿದ್ದರೆ ತನ್ನ ವ್ಯಾಪ್ತಿಯ ಗಣೇಶ ವಿಸರ್ಜನಾ ತಾಣಗಳಲ್ಲಿ ಪಿಒಪಿ ಗಣೇಶ ವಿಸರ್ಜನೆ ನಿರ್ಬಂಧಿಸಬೇಕು ಎಂದು ಆ.23ರಂದು ವಿಶೇಷ ವರದಿ ಪ್ರಕಟಿಸಿತ್ತು.

ಮನೆಯಲ್ಲಿಯೇ ಗಣಪ ಮೂರ್ತಿ ತಯಾರಿಸಿ!

ಇದಕ್ಕೆ ಸ್ಪಂದಿಸಿರುವ ಬಿಬಿಎಂಪಿಯು ತನ್ನ ಮೂರು ಮಾದರಿಯ ಗಣೇಶ ವಿಸರ್ಜನಾ ಸ್ಥಳಗಳಾದ ಶಾಶ್ವತ, ತಾತ್ಕಾಲಿಕ ಮತ್ತು ಸಂಚಾರಿ ವಿಸರ್ಜನಾ ವಾಹನಗಳಲ್ಲಿ ಪಿಒಪಿ ಮೂರ್ತಿಗಳ ವಿಸರ್ಜನೆ ನಿರ್ಬಂಧಿಸಿ ಸುತ್ತೋಲೆ ಹೊರಡಿಸಿದೆ. ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ) ರವಿಕುಮಾರ್‌ ಸುರಪುರ ಅವರು ಪಾಲಿಕೆಯ ಕೇವಲ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಮಾತ್ರ ಅವಕಾಶ ನೀಡಬೇಕು. ಪಿಒಪಿ ಗಣಪನನ್ನು ವಿಸರ್ಜಿಸಲು ಅವಕಾಶ ನೀಡಬಾರದು ಎಂದು ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅಲ್ಲದೆ, ಈಗಾಗಲೇ ವಿವಿಧ ಪಿಒಪಿ ಗಣೇಶ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ಪಿಒಪಿ ಗಣೇಶಗಳನ್ನು ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಗೆ ಧಕ್ಕೆಯಾಗಂತೆ ಅಗತ್ಯ ವಸ್ತುಗಳಿಂದ ಮುಚ್ಚಿ ಆಯಾ ವಲಯದ ಘನ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ.

ಪಿಒಪಿಯಿಂದ ತಾಯಿಯ ಎದೆ ಹಾಲೂ ವಿಷ!

ಸಿಸಿಟಿವಿ-ಸಹಾಯವಾಣಿ ಕೌಂಟರ್‌:

ಗಣೇಶ ವಿಸರ್ಜನೆಗೆ ಮಾಡಿರುವ ವ್ಯವಸ್ಥೆ ಬಗ್ಗೆ ವ್ಯಾಪಕ ಪ್ರಚಾರ ಮಾಡಿ ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ನಿಗದಿತ ಸ್ಥಳಗಳಲ್ಲಿ ಮಾತ್ರವೇ ವಿಸರ್ಜನೆ ಮಾಡುವಂತೆ ಕ್ರಮ ವಹಿಸಬೇಕು. ಈ ಸ್ಥಳಗಳಲ್ಲಿ ಬ್ಯಾರಿಕೇಡ್‌ ಹಾಕಿ ಸರತಿ ಸಾಲಿನಲ್ಲಿ ಬಂದು ಗಣೇಶ ವಿಸರ್ಜನೆಗೆ ವ್ಯವಸ್ಥೆ ಮಾಡಬೇಕು.

ಕೆರೆ, ಕಟ್ಟೆಗಳ ಬಳಿಯ ವಿಸರ್ಜಣಾ ಸ್ಥಳಗಳಲ್ಲಿಅಲ್ಲಿ ವಿದ್ಯುತ್‌, ಜನರೇಟರ್‌ ಮೂಲಕ ಬೆಳಕಿನ ವ್ಯವಸ್ಥೆ, ಸಿಸಿಟಿವಿ ಮತ್ತು ಸ್ಥಳೀಯ ಕಂಟ್ರೋಲ್‌ ರೂಮ್‌, ಸಹಾಯವಾಣಿ ಕೌಂಟರ್‌ ವ್ಯವಸ್ಥೆ ಮಾಡಬೇಕು. ದೊಡ್ಡ ಗಣೇಶಗಳ ವಿಸರ್ಜಣೆಗೆ ಕ್ರೇನ್‌, ಇಟಾಚಿ ವ್ಯವಸ್ಥೆ ಮಾಡಬೇಕು. ಈ ಸ್ಥಳಗಳಲ್ಲಿ ಸದಾ ಕಾಲ ಆ್ಯಂಬುಲೆನ್ಸ್‌ ಸೇವೆ ಸಭ್ಯವಿರುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ.

ಗಣಪತಿಯ ಪಿಒಪಿ ರೂಪ, ಪರಿಸರಕ್ಕೆ ಕೊಳೆ ಕೂಪ!

ಯಾವುದೇ ಗಣೇಶ ವಿಸರ್ಜನಾ ಸ್ಥಳಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮುಳುಗುತಜ್ಞರನ್ನು ನೇಮಕ ಮಾಡಬೇಕು. ವಿಸರ್ಜನಾ ಸ್ಥಳಗಳ ಬಗ್ಗೆ ಪ್ರತೀ ವಾರ್ಸ್‌ನಲ್ಲೂ ಮಾಹಿತಿ ಪ್ರಕಟಿಸಬೇಕು. ಸಾರ್ವಜನಿಕರ ರಕ್ಷಣೆಗೆ ಪೊಲೀಸ್‌ ಸಹಾಯ ಪಡೆಯುವುದು ಕಡ್ಡಾಯ.

ಪ್ರತೀ ವಾರ್ಡ್‌ನಲ್ಲೂ ಗಣೇಶ ವಿಸರ್ಜನೆಗೆ ಸಂಚಾರಿ ವಾಹನ ವ್ಯವಸ್ಥೆ ಮಾಡಬೇಕು. ವಿಸರ್ಜನಾ ಸ್ಥಳದಲ್ಲಿ ಉತ್ಪಾದನೆಯಾಗುವ ಕಸವನ್ನು ಗುರುತಿಸಲಾದ ಸ್ಥಳದಲ್ಲಿ ಬೇರ್ಪಡಿಸಲು ಕ್ರಮ ವಹಿಸಬೇಕು. ಪ್ರತಿ ವಲಯದಲ್ಲೂ ಸ್ವಯಂ ಸೇವಕರು, ಪರಿಸರ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳ ಜಾಗೃತಿ ತಂಡವನ್ನು ನೇಮಿಸಬೇಕು ಎಂಬುದು ಸೇರಿದಂತೆ ಒಟ್ಟು 18 ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ವಿಶೇಷ ಆಯುಕ್ತರು ಸೂಚಿಸಿದ್ದಾರೆ.

Follow Us:
Download App:
  • android
  • ios