ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು [ಆ.29]: ನಾವು ಉಸಿರಾಡುವ ಗಾಳಿಯಿಂದ ಹಿಡಿದು ತಾಯಿಯ ಎದೆ ಹಾಲನ್ನೂ ಕೂಡ ವಿಷ ಮಾಡುವ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ತಯಾರಿಸುವ ವಿಘ್ನ ವಿನಾಶಕನ ಆರಾಧನೆ ತರವಲ್ಲ. ಮಣ್ಣಿನ ಮುದ್ದು ಗಣಪನ ಮುಂದೆ ಪಿಒಪಿ ಗಣಪ ಚೆಂದವೂ ಅಲ್ಲ. ಇನ್ನಾದರೂ ಪಿಒಪಿ ಬಳಕೆ ನಿಲ್ಲಿಸಿ, ಮಣ್ಣಿನಿಂದ ರೂಪುಗೊಂಡು ಮಣ್ಣಿನಲ್ಲೇ ನೆಲೆಗೊಳ್ಳುವ ವಿಘ್ನೇಶ್ವರನಿಗೆ ಉಘೇ ಎನ್ನಿ. 

ಇಷ್ಟಕ್ಕೂ ಪಿಒಪಿ ಗಣಪ ಏಕೆ ಬೇಡ ಎಂಬುದು ಎಲ್ಲರಿಗೂ ಗೊತ್ತು. ಪಿಒಪಿ ಗಣೇಶ ಮೂರ್ತಿಗಳ ಬಳಕೆಯಿಂದ ನೀರು, ಮಣ್ಣು ಮಾತ್ರ ಕಲುಷಿತವಾಗಲಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ಇದೀಗ, ಮನುಷ್ಯ ಉಸಿರಾಡುವ ಗಾಳಿ, ತಾಯಿ ಮಕ್ಕಳಿಗೆ ಕುಡಿಸುವ ಎದೆ ಹಾಲು, ಹಸುವಿನ ಹಾಲು, ಜತೆಗೆ ಈ ವಿಷಕಾರಿ ನೀರಿನಲ್ಲಿ ಬೆಳೆದ ಮೀನು, ತರಕಾರಿ, ಹಣ್ಣುಗಳಲ್ಲಿಯೂ ವಿಷಕಾರಿ ಅಂಶವಿದೆ ಪತ್ತೆಯಾಗತೊಡಗಿದೆ. ಅಂದರೆ ಪಿಒಪಿಯ ಮಾರಕ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಿ.

ಪಿಒಪಿ ಗಣೇಶ ಮೂರ್ತಿ ಬಳಕೆ ಮಾಡುವುದರಿಂದ ಪರಿಸರಕ್ಕೆ ಮಾತ್ರವಲ್ಲ ಇಡೀ ಜೀವಸಂಕುಲವೇ ನಾಶವಾಗಲಿದೆ ಎಂದು ಪರಿಸರ ತಜ್ಞ, ವೈದ್ಯರು ಎಷ್ಟೇ ಹೇಳಿದರೂ ಪಿಒಪಿ ಮಾತ್ರ ನಿಂತಿಲ್ಲ. ಪಿಒಪಿ ಬೇಡ ಎನ್ನಲು ಇಲ್ಲಿವೆ ಕಾರಣಗಳು.

ಕ್ಯಾನ್ಸರ್‌ ಕಾರಕ:  ಪಿಒಪಿ ಗಣೇಶ ಮೂರ್ತಿಗಳನ್ನು ಹುಲ್ಲು, ಬಟ್ಟೆ, ಕಾಗದ, ಮರ, ಥರ್ಮಾಕೋಲ್‌, ಸೆಣಬು, ಅಂಟು ವಸ್ತುಗಳು ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಿಸಲಾಗುತ್ತಿದೆ. ಥರ್ಮಾಕೋಲ್‌ ನೀರಿನಲ್ಲಿ ಕರಗುವುದಿಲ್ಲ. ಬಳಸುವ ಬಣ್ಣದಲ್ಲಿ ಭಾರಲೋಹಗಳಾದ ಕ್ರೋಮಿಯಂ, ಸೀಸ, ನಿಕ್ಕಲ್‌, ಕ್ಯಾಡ್ಮಿಯಂ, ಸತು ಮುಂತಾದವುಗಳಿರುತ್ತವೆ. ಇದರಲ್ಲಿ ಕ್ಯಾನ್ಸರ್‌ ಕಾರಕ ಅಸ್‌ಬೆಸ್ಟಾಸ್‌ ಅಂಶವಿರುತ್ತವೆ. ಈ ರಾಸಾಯನಿಕಗಳು ಬಹಳ ಬೇಗ ಕರಗುವುದಿಲ್ಲ. ನಿಧಾನವಾಗಿ ಕರಗುತ್ತಾ ನೀರಿನ ಮೂಲಕ ಭೂಮಿ ಸೇರಲಿದೆ. ಈ ನೀರು ಕುಡಿದ ಮತ್ತು ನೀರಿನಲ್ಲಿ ಬೆಳೆದ ಆಹಾರದ ಮೂಲಕ ಮನುಷ್ಯ ಹಾಗೂ ಇತರೆ ಜೀವ ಸಂಕುಲ ಸೇರಿ ಕ್ಯಾನ್ಸರ್‌ ರೋಗ ತರಲಿದೆ ಎಂದು ಪರಿಸರ ತಜ್ಞ ಡಾ.ಎನ್‌.ಯಲ್ಲಪ್ಪರೆಡ್ಡಿ ಹೇಳಿದ್ದಾರೆ.

ಅಷ್ಟೇ ಅಲ್ಲ ಈ ಪಿಒಪಿ ಮೂರ್ತಿಗಳಿಗೆ ಮತ್ತು ರಾಸಾಯನಿಕ ಬಣ್ಣ ಲೇಪಿತ ಮೂರ್ತಿಗಳನ್ನು ಬೆಂಕಿ ಹಾಕಿ ಸುಟ್ಟರೆ ಗಾಳಿಯ ಮೂಲಕ ಕ್ಯಾನ್ಸರ್‌ ತರಲಿದೆ. ಆಹಾರ ಸರಪಳಿಯ ಮೂಲಕ ತಾಯಿಯ ಎದೆ ಹಾಲಿನಲ್ಲಿಯೂ ವಿಷದ ಅಂಶ ಕಂಡು ಬಂದಿದೆ. ಆದರೂ ನಾಗರಿಕರು ಪಿಒಪಿ ಬಳಕೆ ಮಾಡುವುದನ್ನು ಕೈಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆರೆಗೆ ಸೇರುವ ವಿಷದ ಪ್ರಮಾಣ:

ಪಿಒಪಿ ಮೂರ್ತಿಗಳಲ್ಲಿ ಹಾನಿಕಾರಕವಾದ ಕ್ರೋಮಿಯಂ, ತಾಮ್ರ, ಲೋಹ, ಕಬ್ಬಿಣ ಅಂಶಗಳಿದ್ದು ಇವು ನೀರಿಗೆ ಸೇರುವುದರಿಂದ ನೀರಿನಲ್ಲಿ ಕರಗುವ ಆಮ್ಲಜನಕದ (ಡಿಒ) ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಜಲಚರಗಳ ಜೀವಕ್ಕೆ ಹಾನಿಯಾಗಲಿದೆ.

ಪ್ರತಿ ಕೆ.ಜಿ. ನೀರಿನಲ್ಲಿ (ಕೆ.ಜಿ.ಮಾಪನದಲ್ಲಿ) ಕ್ರೋಮಿಯಂ ಪ್ರಮಾಣ 9.8 ರಿಂದ 23 ಗ್ರಾಂ. ವರೆಗೆ, ತಾಮ್ರದ ಪ್ರಮಾಣ ಕೆ.ಜಿಗೆ 31ರಿಂದ 486 ಮಿ.ಗ್ರಾಂ. ವರೆಗೆ, ಸತುವಿನ ಪ್ರಮಾಣ 24 ಮಿ.ಗ್ರಾಂ/ಲೀ.ನಿಂದ 44ಕ್ಕೆ, ನಿಕ್ಕಲ್‌ ಪ್ರಮಾಣ 0.04 ನಿಂದ 0.09 ಮಿ.ಗ್ರಾಂ./ಲೀ ಸರಾಸರಿ ಹೆಚ್ಚಳವಾಗುತ್ತಿದೆ. ಕಬ್ಬಿಣದ ಪ್ರಮಾಣ 0.85 ನಿಂದ 3.49 ಮಿ.ಗ್ರಾಂ./ಲೀ. ಜೀವ ರಸಾನಿಯಕ ಆಮ್ಲಜನಕ ಪ್ರಮಾಣ 8.2ರಿಂದ 16 ಮಿ.ಗ್ರಾಂ/ಲೀ. ಹೆಚ್ಚಳವಾಗಿರುವ ಬಗ್ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಲ್ಲೇ ತಿಳಿಸಿದೆ.

ಪಿಒಪಿ ನಾಶವಾಗುವುದಿಲ್ಲ:

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜನೆ ಮಾಡಿದರೆ, ಅವು ಕರಗುವುದಿಲ್ಲ. ವರ್ಷಾನೂಗಟ್ಟಲೇ ಹಾಗೇ ಇರುತ್ತವೆ. ಇದರಿಂದ ತ್ಯಾಜ್ಯ ಉತ್ಪತ್ತಿಯಾಗಲಿದೆ. ಬೇರೆ ಯಾವುದಕ್ಕೂ ಬಳಕೆ ಮಾಡುವುದಕ್ಕೂ ಬರುವುದಿಲ್ಲ. ಕಳೆದ ಹಲವಾರು ವರ್ಷಗಳಿಂದ ನಗರದಲ್ಲಿ ವಿಸರ್ಜನೆ ಮಾಡಿದ ಗಣೇಶ ಮೂರ್ತಿಗಳನ್ನು ಬಿಬಿಎಂಪಿ ಹೊರವಲಯದಲ್ಲಿರುವ ಕ್ವಾರಿಗಳಿಗೆ ತುಂಬುತ್ತಿದೆ.

ಕೆರೆ ಕಾಲುವೆಗಳಿಗೆ ಹೂಳು ತುಂಬಲಿದೆ:

ಪ್ರತಿವರ್ಷ ನಗರದ ಸುಮಾರು 12 ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲಾಗುತ್ತಿದೆ. ಇದರಿಂದ ಕೆರೆ ಮತ್ತು ಕಾಲುವೆಗಳಲ್ಲಿ ಸಾಕಷ್ಟುಪ್ರಮಾಣದಲ್ಲಿ ಹೂಳು ತುಂಬಿಕೊಳ್ಳಲಿದೆ. ಜತೆಗೆ ಕೆರೆಗಳ ನೀರು ಸಂಗ್ರಹಣೆ ಪ್ರಮಾಣ ಮತ್ತು ಅಂತರ್ಜಲ ವೃದ್ಧಿ ಆಗುವುದು ಕಡಿಮೆ ಆಗಲಿದೆ. ಮಳೆ ಬಂದಾಗ ಕೆರೆ, ಕಾಲುವೆಗಳು ತುಂಬಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗುವುದಕ್ಕೂ ಕಾರಣವಾಗಲಿದೆ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ಸಿಇಒ ಎನ್‌.ಆರ್‌.ಸುರೇಶ್‌ ಹೇಳುತ್ತಾರೆ.

ಪಿಒಪಿ ಮೂರ್ತಿ ಪೂಜಿಸಬೇಡಿ

ಪಿಒಪಿ ಮೂರ್ತಿಗಳಲ್ಲಿರುವ ರಾಸಾಯನಿಕ ವಸ್ತುಗಳು ನೇರವಾಗಿ ನೀರು ಮತ್ತು ಸೇರುವುದರಿಂದ ಪ್ರಾಣಿ ಸಂಕುಲಕ್ಕೆ ಹಾನಿಯಾಗಲಿದೆ. ಪ್ರಕೃತಿಯನ್ನು ಪೂಜಿಸುವ ನಾವುಗಳು ಗಣೇಶ ಉತ್ಸವದ ಹೆಸರಿನಲ್ಲಿ ಪರಿಸರ ಮಾಲಿನ್ಯ ಮಾಡುವುದು ಎಷ್ಟುಸರಿ ಎಂಬುದನ್ನು ಪರಾಮರ್ಷೆ ಮಾಡಿಕೊಳ್ಳಬೇಕಾಗಿದೆ. ಆರ್ಚಕರು ಮತ್ತು ಪೌರೋಹಿತ್ಯ ಮಾಡುವವರು ನಗರದಲ್ಲಿ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಕಡೆ ಪೂಜೆ ಮಾಡುವುದಿಲ್ಲ ಎಂಬ ತೀರ್ಮಾನ ಮಾಡಬೇಕು ಎನ್ನುತ್ತಾರೆ ನಮ್ಮ ಬೆಂಗಳೂರು ಪ್ರತಿಷ್ಠಾನ ಸಿಇಒ ಎನ್‌.ಆರ್‌.ಸುರೇಶ್‌.

 ಪಿಒಪಿ ಬಳಕೆಯಿಂದ ಪರಿಸರಕ್ಕೆ ಮಾರಕ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕ್ಯಾನ್ಸರ್‌ಕಾರಕ ಎನ್ನುವುದಕ್ಕೆ ಸ್ಪಷ್ಟಮಾಹಿತಿ ಇಲ್ಲ. ಆದರೆ, ಮನುಷ್ಯ ಸೇರಿದಂತೆ ಪ್ರಾಣಿ ಸಂಕುಲದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ.

-ಡಾ.ರಾಮಚಂದ್ರ, ನಿರ್ದೇಶಕರು, ಕಿದ್ವಯಿ ಕ್ಯಾನ್ಸರ್‌ ಆಸ್ಪತ್ರೆ.