ಶಿವನ ಕುಟುಂಬವೇ ಒಂದು ಅಪೂರ್ವ ರೂಪಕ. ಅದರಲ್ಲಿ ವಿಘ್ನ ವಿನಾಯಕ ಗಣೇಶನ ವಿಶ್ವರೂಪ ನಿಜಕ್ಕೂ ಅತ್ಯದ್ಭುತ. ಯಾವುದೇ ಕಾರ್ಯ ಮಾಡುವಾಗ ಎದುರಾಗುವ ತೊಂದರೆಗಳನ್ನು ನಿವಾರಿಸಿಕೊಳ್ಳದಿದ್ದರೆ ಆ ಕಾರ್ಯ ಯಶಸ್ಸುನ್ನು ಕಾಣದು. ಹೀಗೆ ಎದುರಾಗಬಹುದಾದ ಎಲ್ಲ ವಿಧದ ವಿಘ್ನಗಳನ್ನು ದೇವರಲ್ಲದೇ ಬೇರೆ ಯಾರು ತಾನೆ ಪರಿಹರಿಸಿಯಾರು? ನಮ್ಮೆಲ್ಲ ಸಂಕಷ್ಟಹಾಗೂ ಪರಂಪರೆಗಳನ್ನು ಕಾಪಾಡಬಲ್ಲ ದೇವತೆಯಾಗಿ ನಮ್ಮ ಸಂಸ್ಕೃತಿಯಲ್ಲಿ ತೋರಿಕೊಂಡ ದೇವರುಗಳಲ್ಲಿ ಗಣೇಶನೇ ಮೊದಲು.

ಪಾರ್ವತಿ-ಪರಮೇಶ್ವರನ ಪುತ್ರನೇ ಗಣಪತಿ. ಅವನು ಪಾರ್ವತಿಯ ಮಣ್ಣಿನಿಂದ ರೂಪುಗೊಂಡವನು. ಇದರ ಅರ್ಥ: ಗಣಪತಿ ತತ್ವ ಎನ್ನುವುದು ಕಾಮಾತೀತವೂ ಲೋಕವ್ಯವಹಾರಕ್ಕೆ ಅತೀತವೂ ಆದುದು. ಹೀಗೆ ಅವನ ಹುಟ್ಟು ಆಕಾರ-ಪುರಾಣ ಕಥೆಗಳು ಎಲ್ಲವೂ ಅಪಾರ ಸಂಕೇತಗಳಿಂದ ಕೂಡಿವೆ. ಪ್ರಕೃತಿಯ ಸಹಜ ದೈವವೇ ವಿಘ್ನೇಶ್ವರ ಪ್ರಕೃತಿಯ ಅನಂತ ತತ್ವದ ಸಂಕೇತವೇ ವಿಘ್ನ ನಿವಾರಕ.

ಗಣೇಶ ಮಾರಾಟಕ್ಕೆ ಟ್ರೇಡ್‌ ಲೈಸೆನ್ಸೇ ಇಲ್ಲ!

ನಾಶಕ್ಕೆ ಇದೊಂದು ಪಿಒಪಿ ಸಾಕು

ಮತ್ತೊಂದು ಗಣೇಶ ಚತುರ್ಥಿ ಬಂದಿದೆ. ಸಿದ್ಧಿವಿನಾಯಕ ಈಗ ಮಣ್ಣಿನಲ್ಲಿ, ಪೇಪರ್‌ನಲ್ಲಿ ಅಷ್ಟೇ ಅಲ್ಲ, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ)ನಲ್ಲಿ ವಿಭಿನ್ನ ಅವತಾರಗಳಲ್ಲಿ ಸೃಷ್ಟಿಯ ಕಲಾಜನಕರ ಕೈಚಳದಲ್ಲಿ, ವ್ಯಾಪಾರಸ್ಥರ ಗೋದಾಮುಗಳಲ್ಲಿ ಬಂಧಿಯಾಗಿದ್ದಾನೆ. ಕ್ರೇಜಿ ಭಕ್ತರ ಕೈಲಿ ಪೂಜೆ ಮಾಡಿಸಿಕೊಳ್ಳಲು ಕ್ಯೂನಲ್ಲಿ ನಿಂತಿದ್ದಾನೆ. ಬಗೆ ಬಗೆಯ ಬಣ್ಣ, ವಿಧವಿಧದ ಸುಣ್ಣ (ಪಿಒಪಿ), ಸುಂದರವಾದ ಗುಣಾವತಾರಗಳಲ್ಲಿ ರಚನೆಯಾಗಿರುವ ವಿಘ್ನೇಶ್ವರ ಮೂರ್ತಿಗಳು ಭಕ್ತರ ಕೈಸೇರಲು ಸಿದ್ಧವಾಗಿವೆ.

ಸ್ವಾತಂತ್ರ್ಯ ಹೋರಾಟದ ವೇಳೆ ಬಾಲಗಂಗಾಧರ ತಿಲಕರು ಜಾರಿಗೆ ತಂದ ಗಣೇಶ ಉತ್ಸವ ಈಗ ವ್ಯಾಪಾರವಾಗಿ ಮಾರ್ಪಾಟಾಗಿದೆ. ಮೊದಲೆಲ್ಲ ಮಣ್ಣಿನ ಗಣಪಗಳನ್ನು ನೈಸರ್ಗಿಕವಾಗಿ ನಿರ್ಮಾಣ ಮಾಡಲಾಗುತ್ತಿತ್ತು. ‘ಊರಿಗೊಂದು ಗಣಪ, ಕೇರಿಯ ಕೋಪ ತಾಪಗಳನ್ನು ಸುಡಪ್ಪ’ ಎಂದು ಭಕ್ತಿಯಿಂದ ಪೂಜಿಸುತ್ತಿದ್ದ ಭಕ್ತರು, ಈಗ ಪ್ರತಿಷ್ಠೆಯ ಪರಾಕಾಷ್ಠೆಗಾಗಿ ಮನೆ ಮನೆಯಲ್ಲಿ-ಹಾದಿ ಬೀದಿಗಳಲ್ಲಿ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ಮೊದಲಿದ್ದ ಮಣ್ಣಿನ ಮೂರ್ತಿಗಳು ಕಡಿಮೆಯಾಗಿ ಈಗೇನಿದ್ದರೂ ಪಿಒಪಿ ಗಣಪತಿಗಳ ಭರಾಟೆ. ಮಣ್ಣು, ಜಲ ಎಲ್ಲವನ್ನೂ ನಾಶ ಮಾಡಲು ಈ ಪಿಒಪಿ ಒಂದು ಸಾಕು.

ಪಿಒಪಿ ಗಣೇಶ ತಯಾರಿಕೆ ಎಲ್ಲಿ ನಡೆಯುತ್ತೆ ?

ಪಿಒಪಿ ಮೂರ್ತಿ ಮಾರುವವರಿಗೆ ಕ್ಷಮೆಯಿಲ್ಲ

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಪರಿಸರ ಸಂರಕ್ಷಣೆಗೆ ಪಣತೊಟ್ಟಿದ್ದೇನೆ. ಇತ್ತೀಚೆಗಷ್ಟೇ ಬೆಂಗಳೂರಿನ ವಿವಿಧೆಡೆ ಪಿಒಪಿ ಗಣೇಶ ಮೂರ್ತಿಗಳು ಇಟ್ಟಿದ್ದ ಕುಂಬಳಗೋಡಿನ ವಿನಾಯಕ ಅಂಡ್‌ ಕಂಪನಿ, ಕೆಂಗೇರಿಯ ಗೊಲ್ಲಹಳ್ಳಿ, ತಿಟ್ಟನಹಳ್ಳಿ ಸೇರಿದಂತೆ 6 ಗೋದಾಮುಗಳಿಗೆ ದಿಢೀರ್‌ ಭೇಟಿಕೊಟ್ಟಾಗ ಪಿಒಪಿ ವಿಗ್ರಹಗಳನ್ನು ನೋಡಿ ದಂಗಾಗಿ ಹೋದೆ! ಬೃಹದಾಕಾರದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಪಿಒಪಿ ಗಣೇಶ ಮೂರ್ತಿಗಳು ತಯಾರಾಗಿ ಮಾರಾಟಕ್ಕೆ ಸಿದ್ಧವಾಗಿವೆ.

ಆ ಮೂರ್ತಿಗಳ ಮೇಲಿನ ಬಣ್ಣ ನೀರಿನಲ್ಲಿ ಸೇರಿದರೆ ಏನಾಗಬಹುದು? ನಮ್ಮ ಕೆರೆ-ಕಲ್ಯಾಣಿಗಳು ಮತ್ತು ಪರಿಸರ ಏನಾಗಬಹುದು ಎಂದು ಆಲೋಚಿಸಿದಾಗ ಪಿಒಪಿ ಮೂರ್ತಿಗಳನ್ನು ಸೃಷ್ಟಿಮಾಡಿಸಿದ ಮಾಲಿಕರ ಮೇಲೆ ವಿಪರೀತ ಕೋಪ ಬಂತು. ಅವರು ಕಿಂಚಿತ್ತೂ ಪರಿಸರ ಪ್ರಜ್ಞೆಯಿಲ್ಲದ ಅಂಧರಾಗಿದ್ದಾರೆ ಎನ್ನಿಸಿತು. ಯಾವುದೇ ಕಾರಣಕ್ಕೂ ಅಂಥವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ.

ಪರಿಸರ ಉಳಿವಿಗೆ ಕಠಿಣ ಕ್ರಮಕ್ಕೆ ಬದ್ಧ

ಕಳೆದ ವರ್ಷ ಪಿಒಪಿ ಗಣಪತಿ ಮೂರ್ತಿಗಳನ್ನು ಬಳಕೆ ಮಾಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿತ್ತು. ಆದರೂ ನಿಯಮ ಜಾರಿಯಲ್ಲಿ ಕೆಲ ತಪ್ಪುಗಳಾಗಿ ಶುದ್ಧಜಲಕ್ಕೆ ಪಿಒಪಿ ಸೇರಿತು. ಈ ಬಾರಿ ಆ ರೀತಿಯಾಗಲು ಸಾಧ್ಯವಿಲ್ಲ. ಬಿಬಿಎಂಪಿ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ.

ಅಷ್ಟೇ ಅಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪಿಒಪಿ ಗಣೇಶನ ಮೂರ್ತಿಗಳ ಮಾರಾಟ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜಲ ಮಾಲಿನ್ಯ (ನಿವಾರಣಾ ಮತ್ತು ನಿಯಂತ್ರಣ) ಕಾಯ್ದೆ-1974ರ ಕಲಂ 33(ಎ) ಪ್ರಕಾರ ಪಿಒಪಿ, ವಿಷಕಾರಿ ರಾಸಾಯನಿಕ ಹಾಗೂ ಲೋಹ ಲೇಪಿತ ಗಣೇಶ ಮೂರ್ತಿಗಳನ್ನು ತಯಾರಿಸಬಾರದು. ಜೇಡಿ ಮಣ್ಣಿನಿಂದ ಮಾತ್ರ ಮೂರ್ತಿಗಳನ್ನು ತಯಾರಿಸಬೇಕು ಎಂದು ಕಾನೂನಿನಲ್ಲಿದೆ.

ಕ್ರೇಜ್‌ಗಾಗಿ ಗಣಪನ ಪೂಜಿಸಬೇಡಿ

ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬೆಲೆ ಸ್ವಲ್ಪ ಜಾಸ್ತಿ. ಅಂತಹ ಮೂರ್ತಿಗಳನ್ನು ವಿಸರ್ಜಿಸಿದರೆ ಕೆರೆಗಳ ನೀರು ಮಲಿನವಾಗುವುದಿಲ್ಲ. ಜಲಚರಗಳಿಗೂ ತೊಂದರೆಯಾಗುವುದಿಲ್ಲ. ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಬಣ್ಣಬಣ್ಣದ ಪಿಒಪಿ ಗಣಪತಿ ಮೂರ್ತಿಗಳಿಂದ ಜಲಮಾಲಿನ್ಯವಾಗುತ್ತಿದೆ. ಮೀನು, ಆಮೆ, ಕಪ್ಪೆಗಳು ಸೇರಿದಂತೆ ಅನೇಕ ಜಲಚರ ಜೀವಿಗಳಿಗೆ ಪಿಒಪಿ ಮಾರಕವಾಗುತ್ತಿದೆ.

ಗಣೇಶನನ್ನು ಪ್ರತಿಷ್ಠಾಪಿಸುವ ಮಂದಿಗೆ ನಾವು ಕೂರಿಸುವ ಗಣೇಶ ಮೂರ್ತಿಗಳು ಆಕರ್ಷಕವಾಗಿರಬೇಕು, ಬೇರೆಯವರನ್ನು ಸೆಳೆಯಬೇಕು ಎಂಬ ಹಂಬಲ. ಇಂತಹ ಕ್ರೇಜ್‌ ಸಲ್ಲದು. ಥಳಥಳ ಹೊಳೆಯುವ ನಾನಾ ಅವತಾರದ ಗಣಪನೇ ಬೇಕು ಎಂದು ವಿಜೃಂಭಣೆಯ ಪಿಒಪಿ ಮೂರ್ತಿಗಳನ್ನು ಕೊಂಡು ಪ್ರತಿಷ್ಠಾಪಿಸುವುದರಿಂದ ಪರಿಸರಕ್ಕೆ, ಜಲಮೂಲಕ್ಕೆ ಕಂಟಕ ಕಟ್ಟಿಟ್ಟಬುತ್ತಿ. ಅದರ ಕರ್ಮ ಫಲವನ್ನು ಮನುಷ್ಯನೇ ಅನುಭವಿಸಬೇಕಾಗುತ್ತದೆ.

ಸ್ಪೈಡರ್‌ ಮ್ಯಾನ್‌, ಶಕ್ತಿಮಾನ್‌, ಬಾಹುಬಲಿ, ಕೆಜಿಎಫ್‌, ಉಪ್ಪಿ-2, ಕಬಾಲಿ ಹೀಗೆ ತರಹೇವಾರಿ ಶೈಲಿಗಳಲ್ಲಿ ವ್ಯಾಪಾರಸ್ಥರು ತಮ್ಮ ಲಾಭಕ್ಕಾಗಿ ಗಣೇಶ ಮೂರ್ತಿಗಳನ್ನು ನಿರ್ಮಿಸುತ್ತಿದ್ದಾರೆ. ಗಣೇಶ ಉತ್ಸವ ಸಮಿತಿಗಳ ಯುವಕರು ಪೈಪೋಟಿಗಾಗಿ ಹೆಚ್ಚು ಎತ್ತರದ ವಿನಾಯಕನನ್ನು ಪ್ರತಿಷ್ಠಾಪಿಸುವುದು ಹವ್ಯಾಸವಾಗಿದೆ. ಪಿಒಪಿ ಮೂರ್ತಿಗಳಿಂದ ಪರಿಸರದ ಮೇಲೆ ಉಂಟಾಗುವ ಹಾನಿಯ ಬಗ್ಗೆ ದಶಕಗಳಿಂದಲೂ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಮತ್ತು ಜಿಲ್ಲಾಧಿಕಾರಿಗಳು ಜಾಗೃತಿ ಮೂಡಿಸುತ್ತಾ ಬಂದಿದ್ದರೂ ಜನರಲ್ಲಿರುವ ಅಂಧಕಾರದಿಂದ ಪಿಒಪಿ ಮೂರ್ತಿಗಳು ರಾಜಾರೋಷವಾಗಿ ಪ್ರತಿಷ್ಠಾಪನೆಯಾಗುತ್ತಿರುವುದು ವಿಷಾದನೀಯ.

ಜಾಗೃತರಾಗಿ ಪಿಒಪಿಗೆ ‘ನೋ’ಎನ್ನಿ

ಕಳೆದ ವರ್ಷ ನಿಷೇಧದ ಹೊರತಾಗಿಯೂ ಅನೇಕ ಪಿಒಪಿ ಗಣೇಶಗಳನ್ನು ಕೆರೆಗೆ ಹಾಕಲಾಯಿತು. ಬಿಬಿಎಂಪಿ, ಮಾಲಿನ್ಯನಿಯಂತ್ರಣ ಮಂಡಳಿಯಿಂದ ಮನೆ ಮುಂದೆಯೇ ಟ್ಯಾಂಕರ್‌ ಮೂಲಕ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿದ್ದರೂ ಅನೇಕರು ಪಾಲಿಸಲಿಲ್ಲ. ಜಕ್ಕೂರು, ಅಲಸೂರು ಸೇರುದಂತೆ ಅನೇಕ ಕೆರೆಗಳು ಮಲಿನಗೊಂಡವು. 2016ರಿಂದ ಪಿಒಪಿ ಮೂರ್ತಿಗಳ ಮಾರಾಟ ಬ್ಯಾನ್‌ ಆಗಿದ್ದರೂ, ಅಧಿಕಾರಿಗಳ ಕಣ್ತಪ್ಪಿಸಿ ಮಾರಾಟ ಮತ್ತು ಪ್ರತಿಷ್ಠಾಪನೆ ಮಾಡುವ ಕಂಪನಿ ಮತ್ತು ಸಂಘ ಸಂಸ್ಥೆಗಳಿಗೆ ಈ ಬಾರಿ ಯಾವುದೇ ವಿನಾಯಿತಿ ಇಲ್ಲ.

ಗಣೇಶ ವಿಗ್ರಹ ವಿಸರ್ಜನೆಗೆ ಈ ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬೆಂಗಳೂರಿನಲ್ಲಿ 5 ಮೊಬೈಲ್‌ ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿದೆ. ನಗರದ 30 ಪ್ರದೇಶಗಳಲ್ಲಿ ಈ ವಾಹನ ಸಂಚರಿಸಲಿದೆ. 32 ಕಲ್ಯಾಣಿಗಳನ್ನು ಗಣೇಶ ವಿಗ್ರಹ ವಿಸರ್ಜನೆಗೆ ಗುರುತಿಸಲಾಗಿದೆ. ಬಿಬಿಎಂಪಿ ವತಿಯಿಂದ 100 ಮೂರ್ತಿ ವಿಸರ್ಜಿಸುವ ತೊಟ್ಟಿಗಳನ್ನು ನಿರ್ಮಿಸಲಾಗುತ್ತಿದೆ. ಪುರೋಹಿತರು ವಾಹನದಲ್ಲಿರುತ್ತಾರೆ. ಹಬ್ಬದ ದಿನ, ಮೂರನೇ ದಿನ, ಐದನೇ ದಿನ, ಏಳನೇ ದಿನ ಮತ್ತು ಒಂಭತ್ತನೇ ದಿನ ವಾಹನಗಳು ನಗರದಲ್ಲಿ ಸಂಚರಿಸಲಿವೆ.

ಮಂಡ್ಯ: ಪಿಒಪಿ, ಬಣ್ಣ ಲೇಪಿತ ಗಣೇಶ ಮೂರ್ತಿಗಳ ಬಳಕೆ ನಿಷೇಧ

ವಾಹನಗಳ ಬಗ್ಗೆ ಮಾಹಿತಿ ಪಡೆಯಲು ಪ್ರತ್ಯೇಕ ಮೊಬೈಲ್ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡರೆ ಮೂರ್ತಿ ವಿಸರ್ಜನಾ ವಾಹನ ಯಾವ ಸ್ಥಳಕ್ಕೆ ಬಂದು ನಿಲ್ಲಲಿದೆ ಎಂಬ ಸಂಪೂರ್ಣ ಮಾಹಿತಿ ದೊರಕುತ್ತದೆ. ನೋಂದಣಿ ಮಾಡಿಕೊಂಡ ಪ್ರದೇಶಕ್ಕೆ ಆ ವಾಹನ ಬರಲಿದೆ. ಇದರ ಆಯ್ಕೆ ಬುಕ್‌ಮೈಶೋನಲ್ಲಿ ಕಾಣಿಸಿಕೊಳ್ಳಲಿದೆ. ಟ್ಯಾಂಕರ್‌ಲ್ಲಿ ಮೂರ್ತಿ ವಿಸರ್ಜಿಸಿದ ಮೇಲೆ ಎಸ್ಟಿಪಿಯಲ್ಲಿ ನೀರನ್ನು ಶುದ್ಧೀಕರಿಸಲಾಗುವುದು. ಒಂದು ವೇಳೆ ಪಿಒಪಿ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿದರೆ 10 ಸಾವಿರ ದಂಡ ವಿಧಿಸಲಾಗುತ್ತದೆ.

ದೇವರ ಪೂಜೆ ಮಾಡುವುದು ಮನಸ್ಸಿನ ಸಂತೋಷಕ್ಕಾಗಿ ಅಲ್ಲವೇ? ಪರಿಸರವನ್ನು ಕಲುಷಿತಗೊಳಿಸಿ, ಮನಸ್ಸನ್ನು ಉದ್ವೇಗಕ್ಕೆ ಒಳಪಡಿಸಿಕೊಂಡು ಯಾವ ಕೆಲಸ ಮಾಡಿದರೂ ಅದು ಮನುಕುಲಕ್ಕೂ ಪರಿಸರಕ್ಕೂ ಕಂಟಕವಾದೀತು. ಗಣಪತಿ ವಿಶ್ವರೂಪದ ಅನಂತ ತತ್ವವಾಗಲಿ. ಮನಸ್ಸಿನ ಮೂರ್ತಿಯಾಗಲಿ. ಪಿಒಪಿ ಮೂರ್ತಿ ಬಳಸಿ ಪರಿಸರಕ್ಕೆ ಹಾನಿಯಾಗುವುದು ಬೇಡ.

ಡಾ. ಕೆ ಸುಧಾಕರ್ 
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ