ಸಚಿವ ಸ್ಥಾನ ಕೊಡುವಂತೆ ಕೇಳಿದರೆ ತಾನೇ ಪಕ್ಷವು ಕೊಡುವುದು. ಹಾಗಾಗಿಯೇ ನಮ್ಮ ಹಿರಿಯ ಶಾಸಕರು ದೆಹಲಿಗೆ ತೆರಳಿದ್ದಾರೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ಶಾಸಕರ ದಿಲ್ಲಿ ಪ್ರವಾಸವನ್ನು ಸಮರ್ಥಿಸಿಕೊಂಡಿದ್ದಾರೆ.

ದಾವಣಗೆರೆ (ಏ.15): ಕೂಸು ಅತ್ತರೆ ತಾನೇ ತಾಯಿ ಹಾಲು ಕೊಡುವುದು. ಅದೇ ರೀತಿ ಸಚಿವ ಸ್ಥಾನ ಕೊಡುವಂತೆ ಕೇಳಿದರೆ ತಾನೇ ಪಕ್ಷವು ಕೊಡುವುದು. ಹಾಗಾಗಿಯೇ ನಮ್ಮ ಹಿರಿಯ ಶಾಸಕರು ದೆಹಲಿಗೆ ತೆರಳಿದ್ದಾರೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ಶಾಸಕರ ದಿಲ್ಲಿ ಪ್ರವಾಸವನ್ನು ಸಮರ್ಥಿಸಿಕೊಂಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2-3 ಸಲ ಗೆದ್ದಿರುವ ಹಿರಿಯ ಶಾಸಕರು ದೆಹಲಿಗೆ ಹೋಗಿದ್ದಾರೆ. ಈ ಹಿರಿಯ ಶಾಸಕರು ಸಚಿವ ಸ್ಥಾನವನ್ನು ಕೇಳುವುದರಲ್ಲಿ ನ್ಯಾಯವಿದೆ. ಅದೇ ರೀತಿ ಐವರು ಹೊಸ ಶಾಸಕರಿಗೂ ಸಂಪುಟದಲ್ಲಿ ಅವಕಾಶ ನೀಡಲಿ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಟ್ಟು, ಪಕ್ಷಕ್ಕೆ ಮುಜುಗರ ಆಗಬಹುದೆಂದು ಡಿಸಿಎಂ ಡಿ.ಕೆ. ಶಿವಕುಮಾರ ಅವರು ವಾರ್ನಿಂಗ್ ನೀಡಿರಬಹುದು. ಹಿರಿಯ ಶಾಸಕರ ಜೊತೆಗೆ ನಮ್ಮ ರವಿ ಗಣಿಗ ಸೇರಿ ಐದು ಜನ ಹೊಸಬರಿಗೂ ಅವಕಾಶ ನೀಡಬೇಕು. ಹಳೆ ಬೇರು, ಹೊಸ ಚಿಗುರು ಎಂಬಂತೆ ಉತ್ತಮ ಆಡಳಿತ ನಡೆಸಬಹುದು ಎಂದು ಅವರು ತಿಳಿಸಿದರು. ನನಗೆ ಸಚಿವ ಸ್ಥಾನ ಕೊಟ್ಟರೆ ಬೇಡ ಎನ್ನುವುದಿಲ್ಲ. ನಾನೇನೂ ಸಂನ್ಯಾಸಿಯಲ್ಲ. ಸದ್ಯ ಸಂಪುಟ ವಿಸ್ತರಣೆ, ಪುನಾರಚನೆ ವಿಚಾರವೆಲ್ಲಾ ಹೈಕಮಾಂಡ್ ಅಂಗಳದಲ್ಲಿದೆ. ಇದರ ಬಗ್ಗೆ ನಾನು ಹೆಚ್ಚಿಗೆ ಏನೂ ಹೇಳುವುದಿಲ್ಲ.

ನಮ್ಮ ಕಾಂಗ್ರೆಸ್ ಪಕ್ಷದ ಹಿರಿಯರು ಸಿಎಂ ಆಗಬೇಕೆಂಬ ಆಸೆ. ಅದರಲ್ಲೂ ಡಿ.ಕೆ.ಶಿವಕುಮಾರ ಸಹ ಮುಖ್ಯಮಂತ್ರಿ ಆಗಬೇಕೆಂಬುದೇ ನಮ್ಮ ಆಸೆ ಎಂದು ಅವರು ಸ್ಪಷ್ಟಪಡಿಸಿದರು. ಅದನ್ನೆಲ್ಲಾ ನಮ್ಮ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾವೆಲ್ಲಾ ತೀರ್ಮಾನ ಮಾಡುವುದಕ್ಕೆ ಆಗುವುದಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ. ಸೂರ್ಯ-ಚಂದ್ರರಿರುವುದು ಎಷ್ಟು ಸತ್ಯವೋ ಹಾಗೆ ಡಿ.ಕೆ.ಶಿವಕುಮಾರ ಸಾಹೇಬರು ಮುಖ್ಯಮಂತ್ರಿಗಳಾಗುವುದೂ ಅಷ್ಟೇ ಸತ್ಯ. ಒಂದರ ಮೇಲೊಂದು ಚುನಾವಣೆ, ಕಾರ್ಯಕ್ರಮಗಳು ಬಂದಿದ್ದರಿಂದಾಗಿ ತೀರ್ಮಾನವು ಒಂದಿಷ್ಟು ತಡವಾಗುತ್ತಿದೆಯಷ್ಟೇ ಎಂದು ಅವರು ಹೇಳಿದರು.

ಡಿಕೆಶಿ ಮೇಲೆ ಭಾರ ಹೊರಿಸ್ತಾರೆ

ಡಿ.ಕೆ. ಶಿವಕುಮಾರವರು ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆಂದು ಹೆಚ್ಚು ಹೆಚ್ಚು ಭಾರ ಹಾಕುತ್ತಾರೆ. ಯಾವ ಎತ್ತು ಭಾರ ಎಳೆಯುತ್ತದೆಯೋ ಅದೇ ಎತ್ತಿಗೆ ತಾನೇ ಭಾರ ಹೆಚ್ಚಾಗಿ ಹೇರುವುದು. ಹೇರಿದ ಭಾರ ಎಳೆಯುತ್ತಾರೆಂದು ಎಲ್ಲಾ ಭಾರವನ್ನೂ ಡಿಕೆಶಿಯವರ ಮೇಲೆ ಹಾಕುತ್ತಾರೆ. ಎಷ್ಟೇ ಭಾರ ಹೇರಿದರೂ ಸಮರ್ಥವಾಗಿ ಹೊರುವ ಶಕ್ತಿಯು ಡಿಕೆಶಿ ಸಾಹೇಬರಿಗೆ ಇದೆ. ಶಾಂತಿ, ಸಮಾಧಾನದಿಂದ ಭಾರ ಹೊರುತ್ತಿದ್ದಾರೆ ಎಂದು ಶಾಸಕ ಶಿವಗಂಗಾ ಮಾರ್ಮಿಕವಾಗಿ ತಿಳಿಸಿದರು.

ಹೌದು, ಬಿಜೆಪಿಯವರು ಹೇಳಿದಂತೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಬದಲಾವಣೆಯಾಗುತ್ತದೆ ಎಂಬುದು ನಿಜ. ಇನ್ನೂ ಹೆಚ್ಚು ಸ್ಥಾನಗಳನ್ನು ನಾವು ಗೆದ್ದು, ವಿಧಾನಸಭೆಯಲ್ಲಿ ನಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತೇವೆ. ಇದರಿಂದ 2 ಸ್ಥಾನಗಳು ಹೆಚ್ಚಾಗಿ ಕಾಂಗ್ರೆಸ್ ಗೆ ಹೆಚ್ಚಿನ ಬಲ ಬರುತ್ತದೆ ಎಂದು ವಿಪಕ್ಷ ಬಿಜೆಪಿಯವರು ಉಪ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗುತ್ತದೆಂಬ ಹೇಳಿಕೆಗೆ ಅವರು ಟಾಂಗ್ ನೀಡಿದರು.