ಚನ್ನಗಿರಿ ಚದುರಂಗ: ಜೆ.ಎಚ್.ಪಟೇಲ್ ಕ್ಷೇತ್ರದಲ್ಲಿ ಶಿವಗಂಗಾ vs ಮಾಡಾಳ್ ಪುತ್ರ ಕದನ
ಮಲೆನಾಡಿನ ಸೆರಗು ಚನ್ನಗಿರಿ, 1957ರಿಂದ ಇಲ್ಲಿಯವರೆಗೆ ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಜನತಾ ಪಕ್ಷ, ಇನ್ನೊಮ್ಮೆ ಜನತಾ ದಳ, ಮಗದೊಮ್ಮೆ ಪಕ್ಷೇತರರಿಗೆ, ಮತ್ತೊಮ್ಮೆ ಬಿಜೆಪಿಗೆ...ಹೀಗೆ ಏರಿಳಿತದ ಫಲಿತಾಂಶ ನೀಡುತ್ತಲೇ ಬಂದ ವಿಶಿಷ್ಟಕ್ಷೇತ್ರ.
ನಾಗರಾಜ ಎಸ್.ಬಡದಾಳ್
ದಾವಣಗೆರೆ (ಏ.10): ಮಲೆನಾಡಿನ ಸೆರಗು ಚನ್ನಗಿರಿ, 1957ರಿಂದ ಇಲ್ಲಿಯವರೆಗೆ ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಜನತಾ ಪಕ್ಷ, ಇನ್ನೊಮ್ಮೆ ಜನತಾ ದಳ, ಮಗದೊಮ್ಮೆ ಪಕ್ಷೇತರರಿಗೆ, ಮತ್ತೊಮ್ಮೆ ಬಿಜೆಪಿಗೆ...ಹೀಗೆ ಏರಿಳಿತದ ಫಲಿತಾಂಶ ನೀಡುತ್ತಲೇ ಬಂದ ವಿಶಿಷ್ಟಕ್ಷೇತ್ರ. 1957, 1962ರಲ್ಲಿ ಕಾಂಗ್ರೆಸ್‌ನ ಕುಂದೂರು ರುದ್ರಪ್ಪ ಶಾಸಕರಾಗಿದ್ದರು. 1967ರಲ್ಲಿ ಎಸ್‌ಎಸ್‌ಪಿಯಿಂದ, 1972ರಲ್ಲಿ ಕಾಂಗ್ರೆಸ್‌ನಿಂದ ಎನ್.ಜಿ.ಹಾಲಪ್ಪ ಶಾಸಕರಾಗಿದ್ದರು. 1978, 1983, 1985ರಲ್ಲಿ ಜನತಾ ಪಕ್ಷದ ಜೆ.ಎಚ್.ಪಟೇಲರು ಸತತವಾಗಿ ಕ್ಷೇತ್ರದ ಶಾಸಕರಾದರು.
1989ರಲ್ಲಿ ಕಾಂಗ್ರೆಸ್‌ನಿಂದ ಎನ್.ಜಿ.ಹಾಲಪ್ಪ ಆಯ್ಕೆಯಾದರೆ, 1994ರಲ್ಲಿ ಜನತಾದಳದಿಂದ ಗೆದ್ದ ಜೆ.ಎಚ್.ಪಟೇಲರು ರಾಜ್ಯದ ಮುಖ್ಯಮಂತ್ರಿಯಾದರು. ಆದರೆ, 1999ರಲ್ಲಿ ಪಕ್ಷೇತರರಾಗಿದ್ದ ವಡ್ನಾಳ್ ರಾಜಣ್ಣ ಅವರು ಮಾಜಿ ಸಿಎಂ ಜೆ.ಎಚ್.ಪಟೇಲರನ್ನು ಸೋಲಿಸುವ ಮೂಲಕ ಗಮನ ಸೆಳೆದಿದ್ದರು. ಮುಖ್ಯಮಂತ್ರಿಗಳನ್ನೇ ಸೋಲಿಸಿದ ಪಕ್ಷೇತರ ಶಾಸಕರಾಗಿದ್ದ ವಡ್ನಾಳ್ ರಾಜಣ್ಣ ವಿರುದ್ಧ 2004ರಲ್ಲಿ ಮಹಿಮಾ ಜೆ.ಪಟೇಲ್ ಜನತಾ ದಳದಿಂದ ಸ್ಪರ್ಧಿಸಿ ಗೆದ್ದರು. ಆ ಮೂಲಕ ತಮ್ಮ ತಂದೆಗಾಗಿದ್ದ ಸೋಲಿನ ಸೇಡನ್ನು ತೀರಿಸಿಕೊಂಡರು.
ಅತಂತ್ರ ಫಲಿತಾಂಶಕ್ಕೆ ಕಾಯ್ತಿದೆ ಜೆಡಿಎಸ್: ಸಿದ್ದರಾಮಯ್ಯ
ಆದರೆ, 2008ರಲ್ಲಿ ಬಿಜೆಪಿಯಿಂದ ಮೊದಲ ಸಲ ಸ್ಪರ್ಧಿಸಿದ್ದ ಮಾಡಾಳ್ ಕೆ.ವಿರುಪಾಕ್ಷಪ್ಪ ಅವರು ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಮಲ ಅರಳಿಸಿದ್ದರು. ಕೆಜೆಪಿ-ಬಿಜೆಪಿ ಕಿತ್ತಾಟದ ಮಧ್ಯೆ 2014ರಲ್ಲಿ ಕಾಂಗ್ರೆಸ್ಸಿನ ವಡ್ನಾಳ್ ರಾಜಣ್ಣ ಜಯಭೇರಿ ಭಾರಿಸಿದರು. 2018ರಲ್ಲಿ ಬಿಜೆಪಿಯಿಂದ ಮಾಡಾಳ್ ವಿರುಪಾಕ್ಷಪ್ಪ ಮತ್ತೆ ಗೆಲ್ಲುವ ಮೂಲಕ ತಮ್ಮ ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಂಡರು. ಆದರೆ, ಸದ್ಯದ ಸ್ಥಿತಿಯಲ್ಲಿ ಚನ್ನಗಿರಿಗೆ ಹೊಸ ಮುಖಗಳ ಆಗಮನ ನಿಶ್ಚಿತವಾಗಿದೆ. ಲಂಚ ಪ್ರಕರಣದ ಹಿನ್ನೆಲೆಯಲ್ಲಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಜೈಲು ಪಾಲಾಗಿದ್ದಾರೆ.
ಬಿಜೆಪಿ ಟಿಕೆಟ್‌ಗಾಗಿ ವಿರುಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಹಾಗೂ ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಶಂಕರ್ ಮಧ್ಯೆ ಪೈಪೋಟಿ ಇದೆ. ಹೀಗಾಗಿ, ಬಿಜೆಪಿಗೆ ಅಭ್ಯರ್ಥಿಯ ಆಯ್ಕೆ ‘ಅಡಕೆಯಷ್ಟೇ ತುಟ್ಟಿ’ಯಾಗಿದೆ. ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಅವರಿಗೆ ಟಿಕೆಟ್ ಎನ್ನಲಾಗಿತ್ತು. ಆದರೆ, ಕಿಸಾನ್ ಸೆಲ್ ಜಿಲ್ಲಾಧ್ಯಕ್ಷ, ಯುವ ಮುಖಂಡ ಶಿವಗಂಗಾ ವಿ.ಬಸವರಾಜಗೆ ಟಿಕೆಟ್ ಘೋಷಿಸಲಾಗಿದೆ. ಇದು ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯಕ್ಕೆ ಕಾರಣವಾಗಿದೆ. ಶಾಮನೂರು ಶಿವಶಂಕರಪ್ಪ ಗರಡಿಯಲ್ಲಿ ಬೆಳದ ಶಿವಗಂಗಾ ಬಸವರಾಜ, ಕಳೆದ 3-4 ವರ್ಷದಿಂದ ಕ್ಷೇತ್ರದಲ್ಲಿ ನಿರಂತರ ಒಡನಾಟ ಹೊಂದಿದ್ದಾರೆ. ತಮ್ಮ ಸ್ವಂತ ಹಣದಲ್ಲಿ ಜನೋಪಯೋಗಿ ಕಾರ್ಯ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ.
ಕ್ಷೇತ್ರದ ಹಿನ್ನೆಲೆ: ಹಿಂದೆ ಚನ್ನಗಿರಿ ಕ್ಷೇತ್ರ ಶಿವಮೊಗ್ಗ ಜಿಲ್ಲೆಗೆ ಸೇರಿತ್ತು. 1997ರಲ್ಲಿ ದಾವಣಗೆರೆ ಜಿಲ್ಲೆ ಅಸ್ವಿತ್ವಕ್ಕೆ ಬಂದಾಗ ಇದು ದಾವಣಗೆರೆ ಜಿಲ್ಲೆಗೆ ಸೇರಿತು. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆಯೇ ಪೈಪೋಟಿಯಿದೆಯಾದರೂ, ಟಿಕೆಟ್ ವಂಚಿತರು ಪಕ್ಷದ ಗೆಲುವಿಗೆ ಹೇಗೆ ಶ್ರಮಿಸುತ್ತಾರೆ ಎಂಬುದರ ಮೇಲೆ ಅಭ್ಯರ್ಥಿಗಳ ಗೆಲುವು ನಿಂತಿದೆ.
ಏಕೆ ಚಡಪಡಿಸ್ತೀಯ ಅಣ್ಣಾ?: ಸವದಿಗೆ ರಮೇಶ್ ಜಾರಕಿಹೊಳಿ ಟಾಂಗ್
ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಒಟ್ಟು 1,97,782 ಮತದಾರರಿದ್ದಾರೆ. ಆ ಪೈಕಿ, 55 ಸಾವಿರ ಲಿಂಗಾಯತರು, 25 ಸಾವಿರ ನಾಯಕರು, 25 ಸಾವಿರ ಮುಸ್ಲಿಮರು, 22 ಸಾವಿರ ಬಂಜಾರರು, 18 ಸಾವಿರ ಮಾದಿಗರು, 15 ಸಾವಿರ ಕುರುಬರು, 15 ಸಾವಿರ ಉಪ್ಪಾರರಿದ್ದಾರೆ. ಹೀಗಾಗಿ, ಲಿಂಗಾಯತರು, ಪರಿಶಿಷ್ಟರು, ಅಲ್ಪಸಂಖ್ಯಾತರ ಮತಗಳೇ ನಿರ್ಣಾಯಕ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.