ಶಾಸಕ ಯತ್ನಾಳ್ ಅವರು ಧರ್ಮಸ್ಥಳದ ಮಠದ ವಿವಾದ, ರಾಜಕೀಯ ನಾಯಕರು ಮತ್ತು ಸ್ವಾಮೀಜಿಗಳ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ. ಸಿಎಂ ಬದಲಾವಣೆ, ಪಕ್ಷಗಳ ಗೊಂದಲಗಳ ಬಗ್ಗೆಯೂ ಮಾತನಾಡಿದ್ದಾರೆ.

ಕೊಪ್ಪಳ: ಕೊಪ್ಪಳದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಧರ್ಮಸ್ಥಳ ತನಿಖೆ ಎಸ್‌ಐಟಿಗೆ ನೀಡಿರುವ ವಿಚಾರ ಮತ್ತು ಜಯಮೃತ್ಯುಂಜಯ ಸ್ವಾಮಿಜಿಗೆ ವಿಷಪ್ರಾಶನ ಮಾಡಲಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದರು. ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಸ್ವಾಮೀಜಿಗಳು ಸಮಾಜದ ಹಿತಕ್ಕಾಗಿ ಮಠ ತೊರೆದಿದ್ದಾರೆ. ಆದರೆ, ನಮ್ಮಲ್ಲಿ ಕೆಲವರು ಧರ್ಮಸ್ಥಳದ ಶೈಲಿಯ ಅಯೋಗ್ಯರು, ಹೊಲಸು ಜನ ಇದ್ದಾರೆ. ಅವರ ಹೆಸರು ಹೇಳಬೇಡಿ ಎಂದು ಹಿರಿಯರು ಹೇಳಿದ್ದಾರೆ. ಯಾರು ಮಠದ ಪೀಠಕ್ಕೆ ಬೀಗ ಹಾಕಿದ್ದಾರೆ, ಯಾರು ಹಣ ತಿಂದಿದ್ದಾರೆ, ಯಾರು ಬಾಗಿಲು ಬಂದ್ ಮಾಡಿದ್ದಾರೆ, ಇನ್ನೂ ಐದು ಹತ್ತು ವರ್ಷದಲ್ಲಿ ಅವರ ಮನೆ ಬಾಗಿಲ ಬಂದ್ ಆಗತ್ತೆ. ಯಾರು ಮಾಡಿದಾರೆ ಅವರಿಗೆ ಆಗೇ ಆಗತ್ತೆ, ನಾವು ಮಠದ ರೊಕ್ಕ ತಿನ್ನಬಾರದು ಎಂದರು.

ಪರೋಕ್ಷವಾಗಿ ವಿಜಯಾನಂದ ಕಾಶಪ್ಪನವರ್ ಅವರಿಗೆ ಟಾಂಗ್ ನೀಡಿದ ಯತ್ನಾಳ, “ನಾನು ಸಿದ್ದೇಶ್ವರ ಸಂಸ್ಥೆ ನಿಭಾಯಿಸುತ್ತಿದ್ದೇನೆ, ಒಂದು ರೂಪಾಯಿ ನಾನೂ ತಿಂದಿಲ್ಲ. ದೇವರು ಒಳ್ಳೆಯದನ್ನೇ ಮಾಡಿದ್ದಾರೆ. ನಾನು ಮುಖ್ಯಮಂತ್ರಿ ಆಗಬೇಕಿತ್ತು, ಆದರೆ ಆಗಿಲ್ಲ. ಯಡಿಯೂರಪ್ಪನಂತಹ ಭ್ರಷ್ಟರ ಜೊತೆ ನಾನು ಮಂತ್ರಿಯಾಗಬೇಕೆಂದು ಇಲ್ಲ. ನಾನು ಎಲ್ಲಿಯೂ ಹಣ ತಿಂದಿಲ್ಲ. ಮಠದ ಹಣ ಹೀರುವವರು ಹೇಗೆ ಉಳಿಯುತ್ತಾರೆ ಎನ್ನುವುದನ್ನು ಕಾದು ನೋಡೋಣ” ಎಂದರು.

ಪಂಚಮಸಾಲಿ ಪೀಠದ ಮುಖ್ಯಸ್ಥರ ಭಾಷೆ ಕುರಿತು ಟೀಕೆ ಮಾಡುತ್ತಾ, ಪಂಚಮಸಾಲಿ ಪೀಠದ ಅಧ್ಯಕ್ಷ ಹಿಟ್ಲರ್ ತರಾ ಮಾತಾಡ್ತಾನೊ, ಮುಸಲೋನಿ ತರಾ ಮಾತಾಡ್ತಾನೊ, ಇಂದಿರಾಗಾಂಧಿ ತರಾ ಮಾತಾಡ್ತಾನೊ ನೀವೇ ನಿರ್ಧರಿಸಿ ಬರೆಯಿರಿ ಎಂದರು.

11 ಲಕ್ಷ ಹಣ ಕೊಟ್ಟವರಿಗೆ ಮಾತ್ರ ಆಶೀರ್ವಾದ

ವೀರಶೈವ-ಲಿಂಗಾಯತ ಸಂಘಟನೆಯ ಕುರಿತು, “ವೀರಶೈವ ಲಿಂಗಾಯತ ಒಂದೇ ಎಂಬ ಜಗದ್ಗುರುಗಳ ಹೇಳಿಕೆಗೆ ನನ್ನ ಸಹಮತವಿದೆ. ಆದರೆ ಕೆಲವು ಸ್ವಾಮೀಜಿಗಳು ಬಡವರ ಮನೆಗೆ ಹೋಗದೆ, ಕೇವಲ ಹಣವಿರುವವರ ಮನೆಗೆ ಪಾದಪೂಜೆ ಮಾಡಲು ಹೋಗುತ್ತಿದ್ದಾರೆ. 11 ಲಕ್ಷ ಹಣ ಕೊಟ್ಟವರಿಗೆ ಮಾತ್ರ ಆಶೀರ್ವಾದ. ಅವರೆ ತ್ರೀ ಮೂರ್ತಿಗಳು ಭಕ್ತರು. ಯಡಿಯೂರಪ್ಪ, ಖಂಡ್ರೆ, ಶ್ಯಾಮನೂರು ಶಿವಶಂಕರಪ್ಪ. ದೊಡ್ಡ ಅಮೌಂಟ್ ಕೊಟ್ಟರೆ ಮಾತ್ರ ಆಶಿರ್ವಾದ ಎಂದರು.

ರಾಜಕೀಯದಲ್ಲಿ ಸಿಎಂ ಬದಲಾವಣೆ ಕುರಿತು, ಕರ್ನಾಟಕದ ಎಲ್ಲಾ ಪಕ್ಷಗಳಲ್ಲೂ ಗೊಂದಲವಿದೆ. ಕಾಂಗ್ರೆಸ್ ಅಂತೂ ಪೂರ ಹಾಳಾಗಿ ಹೋಗಿದೆ ಜನರಿಗೆ ವಿಶ್ವಾಸ ಇಲ್ಲ. ಅವರೆ ಈಗ ನಾಯಿ ಹೆಸರಿನಲ್ಲಿ ತಿನ್ನುತ್ತಿದ್ದಾರೆ, ಮುಂದೆ ಹಂದಿಯ ಹೆಸರಿನಲ್ಲಿ ತಿಂದರೂ ಆಶ್ಚರ್ಯವಿಲ್ಲ. ಬಿಜೆಪಿಯಲ್ಲೂ ವಿಜಯೇಂದ್ರ ನಾಯಕತ್ವದಿಂದ ಎಲ್ಲ ಕಾರ್ಯಕರ್ತರಿಗೆ ಅಸಮಾಧಾನ ಇದೆ. ಹೊಸ ಪಕ್ಷದ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಮುಂದಿನ ರಾಜ್ಯಾದ್ಯಕ್ಷ ಸೋಮಣ್ಣ ಆದ್ರೂ ಆಗ್ಲಿ ಶ್ಯಾಮಣ್ಣ ಆದ್ರೂ ಆಗಲಿ, ಇವರು ಬದಲಾವಣೆ ಆಗಬೇಕು ಎಂದರು.

ದಕ್ಷಿಣೆ ಚೊಲೊ ಕೊಟ್ಟಾನ

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಮಾತುಗಳಿಗೆ, ಅಂತ ಭ್ರಷ್ಟರನ್ನು ಸಿಎಂ ಮಾಡಬೇಕು ಎನ್ನುವವರು ಸ್ವಾಮೀಜಿಗಳೆ ಆಗಿದ್ದರೆ, ದಕ್ಷಿಣೆ ಚೊಲೊ ಕೊಟ್ಟಾನ. ಇವತ್ತಿನ ಸ್ವಾಮೀಜಿಗಳ ಬಳಿ ತಪಸ್ಸಿನ ಶಕ್ತಿ ಉಳಿದಿಲ್ಲ. ಇವರೆಲ್ಲಾ ರಾಜಕೀಯದಲ್ಲಿ ತೊಡಗದೆ ಬಡ ಮಕ್ಕಳಿಗೆ ಶಿಕ್ಷಣ ಕೊಟ್ಟು ಸಮಾಜ ಸೇವೆ ಮಾಡಲಿ. ಇವರ ಹೇಳೋಕೆ ಎನ ಆಗತ್ತೆ, ಸಿಎಂ ಆಗು, ಪಿಎಂ ಆಗು ಆಶಿರ್ವಾದ ಅಂತಾರೆ, ಹೇಳೊಕೆ ಇವರ ಗಂಟೇನ ಹೋಗತ್ತೆ,ಇವರು ಹೇಳಿದ ಕೂಡಲೆ ಆಗಿ ಬಿಡ್ತಾರಾ..? ಸ್ವಾಮೀಜಿಗಳಿಗೆ ರಾಜಕಿಯ ಯಾಕೆ ಬೇಕು, ಬಡ ಮಕ್ಕಳ ಶಿಕ್ಷಣ ಕೊಟ್ಟು ಉದ್ದಾರ ಮಾಡಿ. ಹಿಂದೆ ಯಡಿಯೂರಪ್ಪ ಸಿ ಎಂ ಸ್ಥಾನದಿಂದ ಇಳಿಸಬಾರದು ಅಂತ 501 ಸ್ವಾಮಿಜಿಗಳು ಅವರ ಮನೆ ಮುಂದೆ ಕೂತಿದ್ರೂ. ಅವರಿಗೆ ಐದು ಸಾವಿರ ದಕ್ಷಿಣೆ ಕವರ್ ಕೊಟ್ಟರು, ಅದಕ್ಕಾಗಿ ಹಲವರು ಜಗಳಾ ಮಾಡಿದ್ರು ನಮಗೆ ಸಿಕ್ಕಿಲ್ಲ ಅಂತ ಎಂದರು.

ಖರ್ಗೆ ಪ್ರಧಾನಮಂತ್ರಿ ಆಗಬೇಕು ಎಂಬ ಅಭಿಪ್ರಾಯದ ಕುರಿತು, “ಇದು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಕಥೆ ಮುಗಿದಿದೆ. ಖರ್ಗೆ ಅವರನ್ನು ಊರ ಹೊರಗಿನ ಹನಮಪ್ಪನಂತೆ ತಂದು ಉಪಯೋಗಿಸುತ್ತಿದ್ದಾರೆ. ಮೊದಲು ಸಿಎಂ ಮಾಡಬಹುದಿತ್ತು. ಆದರೆ ಅವರಿಗೆ ಬಲಿಪಶು ಮಾಡಲಾಗಿದೆ” ಎಂದು ವ್ಯಂಗ್ಯವಾಡಿದರು.

ಮಂಜುನಾಥೇಶ್ವರ ಮೇಲೆ ಎಲ್ಲರಿಗೆ ನಂಬಿಕೆ ಇದೆ

ಧರ್ಮಸ್ಥಳದ ಪ್ರಕರಣದ ಕುರಿತು ಎಸ್ ಐ ಟಿ ನೇಮಕ ವಿಚಾರಕ್ಕೆ ಮಾತನಾಡಿದ ಅವರು, ಇದನ್ನು ಧರ್ಮಾಧಿಕಾರಿಗಳೇ ಸ್ವಾಗತ ಮಾಡಿದ್ದಾರೆ. ಹಿಂದೂ ದೇವಸ್ಥಾನ, ಮಠ, ಜೈನ, ಸಿಖ್, ಧರ್ಮಗಳು ಭಾರತದಲ್ಲಿ ಹುಟ್ಟಿವೆ. ಈ ಧರ್ಮಗಳನ್ನು ಕೆಲವು ಕಮ್ಯೂನಿಸ್ಟ್‌ ರು,ಸ್ವಾಮೀಜಿಗಳು ಟಾರ್ಗೆಟ್ ಮಾಡಿದ್ದಾರೆ. ಕೆಲವೊಂದು ಕಮ್ಯೂನಿಸ್ಟ್ ಸ್ವಾಮೀಜಿಗಳು ಖಾವಿ ಹಾಕುತ್ತಾರೆ. ಅವರು ಕಳ್ಳ ನನ್ನ ಮಕ್ಕಳು. ಇಸ್ಲಾಂ-ಲಿಂಗಾಯತ ಒಂದೇ ಹೇಳುತ್ತಾರೆ. ಇಸ್ಲಾಂ ಏನು, ಲಿಂಗಾಯತ ಏನು ಅನ್ನೋದು ಗೋತ್ತಿರಲಾರದ ಸ್ವಾಮೀಜಿಗಳು ಭಾರತದಲ್ಲಿದ್ದಾರೆ. ಮೊದಲು ಅಯ್ಯಪ್ಪ ಸ್ವಾಮಿ ಅಪವಿತ್ರಗೊಳಿಸಿದರು. ಇಂಥವರು ಹೋಗಬಾರದು ಎನ್ನುವ ಸಂಪ್ರದಾಯ ಇದೆ. ಅದನ್ನು ಮುರಿದರೆ ನಿಮಗೆ ಏನು ಬರುತ್ತದೆ. ಧರ್ಮಸ್ಥಳ ಒಂದು ಅತ್ಯಂತ ಪವಿತ್ರ ಕ್ಷೇತ್ರ. ಮಂಜುನಾಥೇಶ್ವರ ಮೇಲೆ ಎಲ್ಲರಿಗೆ ನಂಬಿಕೆ ಇದೆ. ಈ ದೇಶದ ಎಡಪಂತೀಯರು ,ಸೋ‌ಕಾಲ್ಡ್ ಬುದ್ದಿ ಜೀವಿಗಳು,ಅಯೋಗ್ಯ ಖಾವಿಧಾರಿಗಳು ಅಪವಿತ್ರ ಮಾಡಲು ಮುಂದಾಗಿದ್ದಾರೆ. ಏನೇ ಇದ್ದರೂ ತನಿಖೆ ಮಾಡಬೇಕು ಎಂದರು.