ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಕುರಿತ ಸಚಿವ ಸಂಪುಟ ಸಭೆಯು ದಲಿತ ಸಚಿವರಲ್ಲೇ ಒಮ್ಮತ ಮೂಡದ ಕಾರಣ ಅಪೂರ್ಣಗೊಂಡಿದೆ. ರೋಸ್ಟರ್ ಬಿಂದು ಮರು ನಿಗದಿಪಡಿಸುವ ವಿಚಾರದಲ್ಲಿ ಎಡಗೈ ಮತ್ತು ಬಲಗೈ ಸಚಿವರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಈ ಬಗ್ಗೆ ಚರ್ಚಿಸಲು ವಿಶೇಷ ಸಂಪುಟ ಸಭೆ ನಡೆಸಲು ತೀರ್ಮಾನ
ಬೆಂಗಳೂರು (ಮಾ.6): ಪರಿಶಿಷ್ಟ ಜಾತಿಗೆ ಇರುವ ಶೇ.15ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಲು ದಲಿತ ಸಚಿವರಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣವಾಗಿದ್ದು, ಮುಂದೆ ಇದೇ ವಿಷಯ ಬಗ್ಗೆ ವಿಶೇಷ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಒಳ ಮೀಸಲಾತಿ ಜಾರಿ ಕುರಿತು ದಲಿತ ಗುಂಪುಗಳಲ್ಲಿ ಉಂಟಾಗಿರುವ ತಿಕ್ಕಾಟ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ನೇಮಕಾತಿ ವೇಳೆ ಮೂರೂ ಗಂಪುಗಳಿಗೆ ಸಮಾನ ಅವಕಾಶ ಸಿಗುವಂತೆ ‘ರೋಸ್ಟರ್ ಬಿಂದು’ ಮರು ನಿಗದಿಪಡಿಸಲು ತಾಂತ್ರಿಕ ಸಮಿತಿ ರಚಿಸಲು ರಾಜ್ಯ ಸರ್ಕಾರ ಉದ್ದೇಶಿಸಿತ್ತು. ಈ ಸಂಬಂಧ ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀವ್ರ ಚರ್ಚೆಯಾಗಿದ್ದು, ಈ ವೇಳೆ ದಲಿತ ಎಡಗೈ, ಬಲಗೈ ಹಾಗೂ ಸ್ಪೃಶ್ಯ ಸೇರಿ ಮೂರೂ ವರ್ಗದ ಸಚಿವರಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ.
ಸಚಿವರ ಆಕ್ಷೇಪ:
ರೋಸ್ಟರ್ ಬಿಂದು ಮರು ನಿಗದಿ ಮಾಡದೆ ಶೇ.15 ಅಥವಾ ಶೇ.17ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಿದರೆ ಬಲಗೈ ಸಮುದಾಯಗಳಿಗೆ ಅನ್ಯಾಯ ಆಗುತ್ತದೆ ಎಂದು ಕೆಲ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಎಡಗೈ ಸಮುದಾಯದ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೆಲಕಾಲ ತೀವ್ರ ವಾಗ್ವಾದ ನಡೆಯಿತು.
ಈ ಚರ್ಚೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದೆ ಮತ್ತೊಮ್ಮೆ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು ಎನ್ನಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಬದ್ಧವಾಗಿದೆ. ಗುರುವಾರದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಆದರೆ ಚರ್ಚೆ ಅಪೂರ್ಣವಾಗಿದ್ದು, ಮುಂದೆ ವಿಶೇಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.
ಮುಂದುವರೆದ ಗೊಂದಲ:
ಎಸ್ಸಿ ಮೀಸಲಾತಿಯನ್ನು ಶೇ.15 ರಿಂದ 17 ಹಾಗೂ ಎಸ್ಟಿ ಮೀಸಲಾತಿಯನ್ನು ಶೇ.3 ರಿಂದ 7ಕ್ಕೆ ಹೆಚ್ಚಿಸುವ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಶೇ.15ರಷ್ಟು ಎಸ್ಸಿ ಮೀಸಲಾತಿ ಅನ್ವಯ ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಈ ವೇಳೆ ಶೇ.15 ಮೀಸಲಾತಿಯಲ್ಲಿಯೇ ಒಳ ಮೀಸಲಾತಿ ಕಲ್ಪಿಸುವಂತೆ ಎಡಗೈ ಸಮುದಾಯದ ಸಚಿವರು, ಮುಖಂಡರು ಪಟ್ಟು ಹಿಡಿದಿದ್ದರು.
ಆದರೆ, ರೋಸ್ಟರ್ ಬಿಂದು ಗೊಂದಲ, ನ್ಯಾಯಾಲಯದ ಅಡೆತಡೆ ನಿವಾರಣೆ ಆಗುವವರೆಗೆ ಒಳ ಮೀಸಲಾತಿ ರಹಿತವಾಗಿ ಶೇ.15 ಮೀಸಲಾತಿ ಜಾರಿಗೊಳಿಸಬೇಕು ಎಂದು ಬಲಗೈ ಸಮುದಾಯ ಒತ್ತಡ ಹೇರಿದೆ. ಒಳ ಮೀಸಲಾತಿ ಹಂಚಿಕೆ ಮಾಡಿ ಈಗಾಗಲೇ ನಿಗದಿಪಡಿಸಿರುವ ‘ರೋಸ್ಟರ್ ಬಿಂದು’ ಪ್ರಕಾರ ನೇಮಕಾತಿ ಪ್ರಕ್ರಿಯೆ ನಡೆದರೆ ಗ್ರೂಪ್ ‘ಎ’ಗೆ (ಎಡಗೈ ಸಂಬಂಧಿತ ಜಾತಿಗಳು) ಅವಕಾಶ ಹೆಚ್ಚು ಸಿಗುತ್ತಿದೆ.
ಗ್ರೂಪ್ ‘ಬಿ’ (ಬಲಗೈ ಸಂಬಂಧಿತ ಜಾತಿಗಳು) ಮತ್ತು ಗ್ರೂಪ್ ‘ಸಿ’ಗೆ (ಸ್ಪಶ್ಯ ಸಂಬಂಧಿತ ಮತ್ತು ಅಲೆಮಾರಿ, ಅರೆ ಅಲೆಮಾರಿ ಜಾತಿಗಳು) ಹುದ್ದೆ ಸಿಗುವ ಅವಕಾಶಗಳು ಕಡಿಮೆ ಎನ್ನುವುದು ಬಲಗೈ ಸಮುದಾಯದ ನಾಯಕರ ಆಕ್ಷೇಪ.
ಈ ಹಿನ್ನೆಲೆಯಲ್ಲಿ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಮೂರೂ ಗ್ರೂಪ್‌ಗಳಿಗೆ ಸಮಾನ ಅವಕಾಶ ಸಿಗುವಂತೆ ‘ರೋಸ್ಟರ್ ಬಿಂದು’ ಮರು ನಿಗದಿಪಡಿಸಲು ತಾಂತ್ರಿಕ ಸಮಿತಿ ರಚನೆಗೆ ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಆ ಕುರಿತ ಚರ್ಚೆಯೂ ಅಪೂರ್ಣವಾಗಿದೆ.
ಒಳಮೀಸಲಿಗೆ ಬದ್ಧ
ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಬದ್ಧವಾಗಿದೆ. ಗುರುವಾರದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಆದರೆ ಚರ್ಚೆ ಅಪೂರ್ಣವಾಗಿದ್ದು, ಮುಂದೆ ವಿಶೇಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಆ ಅಧಿಕಾರ ನೀಡಲಾಗಿದೆ.
- ಎಚ್.ಕೆ. ಪಾಟೀಲ್, ಕಾನೂನು ಸಚಿವ


