ವಿಜಯಪುರ(ಅ.31):  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬದಲಾವಣೆ ಕುರಿತ ಪ್ರಶ್ನೆಯನ್ನೇ ಎತ್ತಿಲ್ಲ ಎನ್ನುತ್ತಲೇ, ಮುಂದಿನ ಮೂರು ವರ್ಷ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಂದು ನಾನು ಹೇಳಲ್ಲ ಎಂದು ಹೇಳಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ರಾಜ್ಯದಲ್ಲಿ ಮತ್ತೆ ‘ಸಿಎಂ ಬದಲಾವಣೆ’ಯ ಹುಳ ಬಿಟ್ಟಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿ ಹಾಗೂ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ಕುರಿತು ಗೊಂದಲದ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪನವರ ಬಗ್ಗೆ ನಾನು ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬದಲಾವಣೆ ಮಾಡಬೇಕು ಎಂಬ ಪ್ರಶ್ನೆಯನ್ನೇ ಎತ್ತಿಲ್ಲ. ನನ್ನ ಕ್ಷೇತ್ರಕ್ಕೆ ಅನುದಾನ ತಡೆವೊಡ್ಡಿದ್ದರ ಬಗ್ಗೆ ಪ್ರಶ್ನಿಸಿದ್ದೇನೆ ಅಷ್ಟೆಎಂದು ಮೊದಲು ಹೇಳಿಕೆ ನೀಡಿದ್ದಾರೆ.

'ಯತ್ನಾಳ್‌ ಮಾತನಾಡಿದ್ದಕ್ಕೆಲ್ಲ ನಾನು ಉತ್ತರ ಕೊಡೋಕೆ ಆಗೋದಿಲ್ಲ'

ಇದಕ್ಕೂ ಮೊದಲು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯತ್ನಾಳ, ಬೇರೆ ಸಚಿವರಂತೆ ಮುಂದಿನ ಮೂರು ವರ್ಷ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ, ಸೂರ್ಯ, ಚಂದ್ರರಿರುವ ತನಕ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ನಾನು ಹೇಳುವುದಿಲ್ಲ ಎಂದಿದ್ದಾರೆ ಯತ್ನಾಳ್‌.

ಸಿಎಂ ಆಗೋ ಆಸೆ ಇಲ್ಲ: 

ಏತನ್ಮಧ್ಯೆ, ನಾನು ಮುಖ್ಯಮಂತ್ರಿ ಆಗಬೇಕೆಂಬುದು ನನ್ನ ಹಣೆಬರಹದಲ್ಲಿ ಬರೆದಿದ್ದರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ನನಗೆ ಮುಖ್ಯಮಂತ್ರಿ ಆಗುವ ಆಸೆ ಇಲ್ಲ. ಆದರೆ, ನಾನು ಮುಖ್ಯಮಂತ್ರಿ ಆಗಬೇಕೆಂದು ಪ್ರಧಾನಿ ಮೋದಿ ತಲೆಯಲ್ಲಿ ಬಂದರೆ ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಯತ್ನಾಳ್‌ ಇದೇ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.