'ಯತ್ನಾಳ್ ಮಾತನಾಡಿದ್ದಕ್ಕೆಲ್ಲ ನಾನು ಉತ್ತರ ಕೊಡೋಕೆ ಆಗೋದಿಲ್ಲ'
ಕೊಪ್ಪಳ(ಅ.22): ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಮಾತನಾಡಿದ್ದಕ್ಕೆಲ್ಲ ನಾನು ಉತ್ತರ ಕೊಡುವುದಕ್ಕೆ ಆಗುವುದಿಲ್ಲ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದಲ್ಲಿ ಬ್ಯಾರೇಜ್ ವೀಕ್ಷಿಸಿದ ಸಚಿವ ಬಿ.ಸಿ. ಪಾಟೀಲ
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳ್ ಏನು ಮಾತನಾಡಿದ್ದಾರೆ ನನಗೆ ಗೊತ್ತಿಲ್ಲ. ಅದಕ್ಕೆ ಪಕ್ಷದ ಹೈಕಮಾಂಡ್ ಕ್ರಮಕೈಕೊಳ್ಳುತ್ತದೆ. ಯಡಿಯೂರಪ್ಪ ಅವರು ಈಗ ಸಿಎಂ ಇದ್ದಾರೆ. ಹೀಗಾಗಿ ಸಿಎಂ ಹುದ್ದೆ ಖಾಲಿ ಇಲ್ಲವಾದ್ದರಿಂದ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಮೂರು ವರ್ಷಗಳ ಬಳಿಕ ಸಿಎಂ ಯಾರಾಗಬೇಕು ಎಂದು ಈಗಲೇ ಹೇಳಲು ಆಗುವುದಿಲ್ಲ ಎಂದು ಹೇಳಿದರು.
ಕೃಷಿ ಇಲಾಖೆಯ ಜಿಡ್ಡುಗಟ್ಟಿ ಹೋಗಿತ್ತು. ಅದನ್ನು ರಿಪೇರಿ ಮಾಡಿದ್ದೇನೆ. ಹೀಗಾಗಿ ಕೆಲವರಿಗೆ ಆಗುತ್ತಿಲ್ಲ. ಅಂಥವರು ಪತ್ರ ಬರೆಯಬಹುದು. ಆದರೆ ಅದನ್ನೆ ಮುಂದುವರಿಸಿದರೆ, ಪ್ರಚಾರ ಮಾಡಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಮಾನಹಾನಿ ಕೇಸ್ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಸಿದ ಸಚಿವ ಬಿ.ಸಿ. ಪಾಟೀಲ
ಬ್ಯಾರೇಜ್ ನಿರ್ಮಾಣ ಆಗಿರುವುದು ಈಗಲ್ಲ, ಐದು ವರ್ಷಗಳ ಹಿಂದೆ ಆಗಿರುವುದು. ಈಗ ಇರುವ ಆಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗದು. ಆಗ ಯಾರಿದ್ದರೂ ಎನ್ನುವುನ್ನು ನೋಡಿ ತನಿಖೆ ಮಾಡಲಾಗುವುದು ಎಂದರು.