Asianet Suvarna News Asianet Suvarna News

ಕೃಷಿಕ್ರಾಂತಿ ಮೂಲಕ ಚರ್ಚ್ ಚಿತ್ರಣವನ್ನೇ ಬದಲಿಸಿದ ಧರ್ಮಗುರು!

ಬಂಟ್ವಾಳ ಸೂರಿಕುಮೇರು ಬೊರಿಮಾರ್ ಸಂತ ಜೋಸೆಫ್ ಚರ್ಚ್ ಆವರಣದಲ್ಲಿ ಹಣ್ಣು, ತರಕಾರಿ, ಗೇರುಗಿಡ ಬೆಳೆದ ಫಾದರ್ ಗ್ರೆಗರಿ ಪಿರೇರಾ| ಕೃಷಿಕ್ರಾಂತಿ ಮೂಲಕ ಚರ್ಚ್ ಚಿತ್ರಣವನ್ನೇ ಬದಲಿಸಿದ ಧರ್ಮಗುರು!

Bantwal Parish Priest Turns Church Surroundings Into Green Belt
Author
Bangalore, First Published Jul 10, 2019, 4:49 PM IST

-ಮೌನೇಶ ವಿಶ್ವಕರ್ಮ, ಕನ್ನಡಪ್ರಭ

ಬಂಟ್ವಾಳ[ಜು.10]: ತೋಟವಾ ನೋಡಿರಣ್ಣಾ.. ಗುರುಗಳ ಆಟವಾ ನೋಡಿರಣ್ಣಾ... ಇದು ಸಂತ ಶಿಶುನಾಳ ಶರೀಫರ ಹಾಡು. ಆದರೆ ಇದು ಸೂರಿಕುಮೇರು ಸಮೀಪದ ಬೊರಿಮಾರ್ ಸಂತ ಜೋಸೆಫರ ಚರ್ಚ್‌ನಲ್ಲಿ ಸಾಕ್ಷಾತ್ಕಾರಗೊಂಡಿದೆ.

ಶತಮಾನೋತ್ತರ ಬೆಳಿಹಬ್ಬದ ಸಂಭ್ರಮದಲ್ಲಿರುವ ಬೊರಿಮಾರ್ ಚರ್ಚ್‌ನ ಧರ್ಮಗುರುಗಳಾಗಿರುವ ವಂದನೀಯ ಫಾದರ್ ಗ್ರೆಗರಿ ಪಿರೇರಾ ಅವರು ಕಳೆದ ಒಂದು ವರ್ಷದಲ್ಲಿ ಚರ್ಚ್‌ನ ಚಿತ್ರಣವನ್ನೇ ಬದಲಾಯಿಸಿದ್ದು, ಕೃಷಿಕ್ರಾಂತಿಯ ಮೂಲಕ ಕೃಷಿಯ ನಿಜವಾದ ಖುಷಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ಏನಿದು ಸಾಧನೆ?:

ಕಳೆದ ವರ್ಷದವರೆಗೂ ಕೇವಲ ತರಗೆಲೆಗಳು, ರಬ್ಬರ್ ಗಿಡಗಳೇ ಚರ್ಚ್‌ನ ಜಮೀನಿನಲ್ಲಿತ್ತು. ಕಳೆದ 2018ರ ಜೂ.3 ರಂದು ಇವರು ಬೊರಿಮಾರ್ ಚರ್ಚ್ ನ ಧರ್ಮಗುರುಗಳಾಗಿ ನಿಯುಕ್ತಿಗೊಂಡ ಬಳಿಕ ಇದೇ ಜಮೀನಿನಲ್ಲಿ ಇವರ ಮಾರ್ಗದರ್ಶನದಲ್ಲಿ ಪಪ್ಪಾಯಿ, ನುಗ್ಗೆ, ಅರಿವೆ ಸೊಪ್ಪು, ಗೆಣಸು, ಕುಂಬಳಕಾಯಿ ಮಾತ್ರವಲ್ಲದೆ ಇದೀಗ ಗೇರುಗಿಡಗಳೂ ತಲೆ ಎತ್ತಿದ್ದು, ಆದಾಯದ ಮೂಲವಾಗಿವೆ.

ಚರ್ಚ್ ಜಮೀನಿನ ನಾಲ್ಕು ಎಕರೆ ಪ್ರದೇಶದಲ್ಲಿ ಸಾವಯವ ಕೃಷಿಯ ಸಂಕಲ್ಪ ತೊಟ್ಟ ಧರ್ಮಗುರುಗಳು, ರಬ್ಬರ್ ಗಿಡಗಳನ್ನೆಲ್ಲಾ ತೆಗೆಸಿ ಪಪ್ಪಾಯಿ ಕೃಷಿ ಆರಂಭಿಸಿದರು. ಜೊತೆಗೆ ಸುವರ್ಣ ಗೆಡ್ಡೆ, ನುಗ್ಗೆ, ಅರಿವೆ ಸೊಪ್ಪು, ಕುಂಬಳಕಾಯಿ ಬಳ್ಳಿ, ಗೆಣಸಿನ ಬಳ್ಳಿ ಹೀಗೆ ಒಂದರ ಮೇಲೊಂದರಂತೆ ಚಿಗುರೊಡೆಯುತ್ತಾ ಬಂತು. ಇದೀಗ ಚರ್ಚ್ ಜಮೀನಿನಲ್ಲಿ ನೂರಕ್ಕೂ ಅಧಿಕ ಪಪ್ಪಾಯಿ ಗಿಡಗಳು, 120೦ ನುಗ್ಗೆಮರ, ಸುಮಾರು 1೧ ಸಾವಿರ ಸುವರ್ಣ ಗೆಡ್ಡೆಯ ಗಿಡಗಳು ಚರ್ಚ್‌ನ ಆವರಣದ ಸೊಬಗು ಹೆಚ್ಚಿಸಿದೆ. ಈ ವರ್ಷ ಮತ್ತೆ ಹೊಸದಾಗಿ 160 ಗೇರುಗಿಡಗಳನ್ನು ನೆಡಲಾಗಿದ್ದು, ಎಲ್ಲ ಬಗೆಯ ಕೃಷಿಯನ್ನು ಮತ್ತಷ್ಟು ವಿಸ್ತಾರಗೊಳಿಸುವ ಇರಾದೆ ಧರ್ಮಗುರುಗಳಲ್ಲಿದೆ.

ನಯಾ ಪೈಸೆ ಖರ್ಚಿಲ್ಲದೆ ಬೋರ್‌ವೆಲ್ ರೀಚಾರ್ಜ್, ಕೃಷಿಕರೊಬ್ಬರ ಸೋಮಾರಿ ಐಡಿಯಾ ಕ್ಲಿಕ್!

ಇವರೀಗ ಪಪ್ಪಾಯಿ ಫಾದರ್..!:

ಹೌದು, ಕಳೆದ ಒಂದು ವರ್ಷದಲ್ಲಿ ಇವರ ಕೃಷಿಯ ಮೇಲಿನ ಅಭಿರುಚಿ ಚರ್ಚ್ ವ್ಯಾಪ್ತಿಯ ಕ್ರೈಸ್ತಬಾಂಧವರಲ್ಲಿ ಕೃಷಿಯ ಬಗ್ಗೆ ಅಭಿಮಾನ ಹೆಚ್ಚಿಸುವಂತೆ ಮಾಡಿದ್ದು, ಇದೀಗ ಇವರು ಎಲ್ಲರ ಪ್ರೀತಿಯ ಪಪ್ಪಾಯಿ ಫಾದರ್ ಆಗಿದ್ದಾರೆ. ಧರ್ಮಗುರುಗಳು ಕೇವಲ ಪೂಜೆಗಷ್ಟೇ ಸೀಮಿತರಲ್ಲ. ಅವರ ನಡೆನುಡಿಯೂ ಇತರರಿಗೆ ಆದರ್ಶವಾಗಬೇಕು ಎಂಬುದನ್ನು ತಮ್ಮ ಆತ್ಮೀಯ ಹಾಗೂ ಆದರ್ಶ ನಡೆನುಡಿಯಿಂದ ತೋರಿಸಿಕೊಟ್ಟಿರುವ ಧರ್ಮಗುರುಗಳು ಈ ಹಿಂದೆ ಸೇವೆ ನೀಡಿದ ಚರ್ಚ್‌ಗಳಲ್ಲಿಯೂ ಇದೇ ತೆರನಾದ ಕೃಷಿಕ್ರಾಂತಿ ಮಾಡಿದವರು.

Bantwal Parish Priest Turns Church Surroundings Into Green Belt

1953 ನ.17ರಂದು ಮೇರಮಜಲು ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ವಂದನೀಯ ಫಾದರ್ ಗ್ರೆಗರಿ ಪಿರೇರಾ ಅವರು 1921ರಲ್ಲಿ ಗುರುದೀಕ್ಷೆ ಪಡೆದುಕೊಂಡರು. ಆ ಬಳಿಕ 2 ವರ್ಷ ಮೊಡಂಕಾಪು ಚರ್ಚ್, 7 ವರ್ಷ ನಾರಂಪಾಡಿ, 7 ವರ್ಷ ವೇಣೂರು, 14 ವರ್ಷ ಉಡುಪಿಯ ಬೆಳ್ವೆ ಎಸ್ಟೇಟ್ ಚರ್ಚ್ ಹಾಗೂ ಅಲ್ಲಿಪಾದೆ ಚರ್ಚ್‌ನಲ್ಲಿ 7 ವರ್ಷ ಸೇರಿದಂತೆ ಒಟ್ಟು ೩೭ ವರ್ಷ ಧರ್ಮಗುರುಗಳಾಗಿ ಸೇವೆಸಲ್ಲಿಸಿ, ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬೊರಿಮಾರು ಚರ್ಚ್‌ಗೆ ೨೫ನೇ ಧರ್ಮಗುರುಗಳಾಗಿ 2018 ಜೂನ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕೃಷಿ ಅಭಿರುಚಿಗೆ ತಕ್ಕಂತೆ ಸೇವೆ ಸಲ್ಲಿಸಿದ ನಾರಂಪಾಡಿಯಲ್ಲಿ ’ಕುಂಬಳಕಾಯಿ ಫಾದರ್’, ಬೆಳ್ವೆಯಲ್ಲಿ ಅಡಕೆ ಫಾದರ್ ಆಗಿ ಹೆಸರು ಪಡೆದವರು. ಅಲ್ಲಿಪಾದೆಯಲ್ಲಿ ಶಾಲೆ ಆರಂಭಿಸಿದ ಕೀರ್ತಿ ಕೂಡ ಇವರದು.

ಬಿಡುವಿನಲ್ಲಿ ತೋಟಕ್ಕಿಳಿದು ಕೆಲಸ..:

ಚರ್ಚ್‌ನಲ್ಲಿ ಪೂಜಾ ಕೈಂಕರ್ಯ ನಡೆಸುವುದರ ಜೊತೆಗೆ ಎಲ್ಲರಿಗೂ ಮಾರ್ಗದರ್ಶನ ನೀಡುವ ಧರ್ಮಗುರುಗಳು, ಬಿಡುವಿನ ಹೊತ್ತಿನಲ್ಲಿ ತೋಟಕ್ಕಿಳಿದು ಕೆಲಸ ಮಾಡುತ್ತಾರೆ. ಪೂಜಾ ಅವಧಿಯಲ್ಲಿ ಇವರ ಪೋಷಾಕು ಬೇರೆ ಇದ್ದ ಹಾಗೆಯೇ, ತೋಟದ ಕೆಲಸಕ್ಕೂ ಅದರದ್ದೇ ಆದ ಬಟ್ಟೆ ತೊಡುತ್ತಾರೆ. ಕೃಷಿಕಾರ್ಯವೂ ದೇವರ ಪೂಜೆಯಷ್ಟೇ ಪವಿತ್ರ ಎಂದು ನಂಬಿದವರು ಇವರು. ತೋಟದಲ್ಲಿ ಕಾರ್ಮಿಕರಾಗಿ ತೊಡಗಿಸಿಕೊಂಡಿರುವ ಫ್ರ್ಯಾಂಕಿ ಡಿಸೋಜ, ಬಾಬಣ್ಣ, ಪ್ರಕಾಶ್, ಸೇಸಪ್ಪ, ಐರಿನ್, ಲಲಿತ, ಚಿನ್ನಮ್ಮ, ಪ್ರಮೋದ್, ವಿನೋದ್ ಹಾಗೂ ಮೋಹನ್ ನಾಯ್ಕರ ಜೊತೆಗೆ ಧರ್ಮಗುರುಗಳು ಕೂಡ ಮಣ್ಣು, ಕೆಸರು, ಗೊಬ್ಬರ ಹಾಗೂ ಗಿಡದ ಜೊತೆ ಮಾತನಾಡುತ್ತಾರೆ.

Bantwal Parish Priest Turns Church Surroundings Into Green Belt

ಪ್ಲಾಸ್ಟಿಕ್ ‘ಬೊಡ್ಚಿ’ ಎಂದ ಮಂಗಳೂರು ಶಾಸಕರು, ಪಾರ್ಸೆಲ್‌ಗಿನ್ನು ಬಾಳೆ ಎಲೆಗಳು!

ಊರವರಿಗೆ ಮತ್ತು ಮಂಗಳೂರಿಗೆ ಮಾರಾಟ:

ಬೊರಿಮಾರ್ ಚರ್ಚ್ ಆವರಣದಲ್ಲಿ ಬೆಳೆದ ಸಾವಯವ ಕೃಷಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಪಪ್ಪಾಯಿ, ಗೆಣಸು, ಸುವರ್ಣಗೆಡ್ಡೆ, ಅರಿವೆ ಸೊಪ್ಪು, ಕುಂಬಳಕಾಯಿಗೆ ಸ್ಥಳೀಯವಾಗಿ ಸರ್ವಸಮುದಾಯದ ಗ್ರಾಹಕರಿದ್ದಾರೆ. ಅಲ್ಲದೆ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆ, ಧರ್ಮಗುರುಗಳ ತರಬೇತಿ ಕೇಂದ್ರ ಜೆಪ್ಪು ಸೆಮಿನರಿ, ಬಜ್ಜೋಡಿಯ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮುಖ್ಯ ಕಚೇರಿಗೂ ಬೊರಿಮಾರ್ ಚರ್ಚ್‌ನ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ವೆಚ್ಚದಲ್ಲಿ , ಸಾವಯವ ಉತ್ಪನ್ನ ದೊರಕುವ ಹಿನ್ನೆಲೆಯಲ್ಲಿ ಇವುಗಳಿಗೆ ಬೇಡಿಕೆ ಹೆಚ್ಚಿದೆ. ಚರ್ಚ್‌ನಲ್ಲಿ ಪ್ರತಿ ವಾರ ನಡೆಯುವ ಪೂಜೆಯ ಬಳಿಕದ ಧಾರ್ಮಿಕ ಶಿಕ್ಷಣದಲ್ಲಿ ಪಾಲ್ಗೊಳ್ಳುವ ಪೂರ್ವ ಪ್ರಾಥಮಿಕದಿಂದ ತೊಡಗಿ, ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ನೀಡಲಾಗುವ ಉಚಿತ ಉಪಹಾರಕ್ಕೂ ಇಲ್ಲಿನ ಸಾವಯವ ಕೃಷಿಯ ಉತ್ಪನ್ನ ಆಧಾರವಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಸಾವಯವ ಕೃಷಿಯಿಂದ ಚರ್ಚ್ ಒಂದೂವರೆ ಲಕ್ಷಕ್ಕೂ ಅಧಿಕ ಆದಾಯಗಳಿಸಿದೆ. ಧರ್ಮಗುರುಗಳ ಸಮಾಜ ಪ್ರೀತಿ ಯ ಕಾರ್ಯಗಳ ಹಂಬಲಕ್ಕೆ ಚರ್ಚ್‌ನ ಪಾಲನಾ ಸಮಿತಿಯೂ ಬೆಂಬಲವಾಗಿ ನಿಂತಿದೆ.

ವರ್ಷವೊಂದರಲ್ಲೇ ಬೆರಗು ಮೂಡಿಸುವಂತಹ ರೀತಿಯಲ್ಲಿ ಕೃಷಿಕಾರ್ಯ ನಡೆಸಿರುವ ವಂದನೀಯ ಫಾದರ್ ಗ್ರೆಗರಿ ಪಿರೇರಾ ರವರ ಬಗ್ಗೆ ಕ್ರೈಸ್ತ ಬಾಂಧವರು ಭಾರೀ ಅಭಿಮಾನ ಇರಿಸಿಕೊಂಡಿದ್ದಾರೆ.

Follow Us:
Download App:
  • android
  • ios