ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬ್ಯಾನರ್ ತೆರವು ವಿಚಾರವಾಗಿ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾದೆ.
ಬೆಂಗಳೂರು/ಚಿಕ್ಕಬಳ್ಳಾಪುರ (ಜ.23): ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ (ಕೆಎಎಸ್ ಶ್ರೇಣಿ ಅಧಿಕಾರಿ) ಅವರಿಗೆ ಬ್ಯಾನರ್ ತೆರವುಗೊಳಿಸಿದ ವಿಚಾರಕ್ಕೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಶಿಡ್ಲಘಟ್ಟ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಶಿಸ್ತು ಪಾಲನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಸಂಬಂಧ ಅಧಿಕೃತ ಆದೇಶ ಹೊರಬಿದ್ದಿದೆ.
ಪಕ್ಷದಿಂದ ಅಮಾನತು
ಜನವರಿ 23, 2026 ರಂದು ನಡೆದ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯ ಸಭೆಯಲ್ಲಿ ರಾಜೀವ್ ಗೌಡ ಅವರ ವಿರುದ್ಧ ಬಂದಿರುವ ದೂರುಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಯಿತು. ಶಿಡ್ಲಘಟ್ಟ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧದ ಪ್ರಕರಣದ ಗಂಭೀರತೆಯನ್ನು ಮನವರಿಕೆ ಮಾಡಿಕೊಂಡ ಸಮಿತಿಯು, ಪಕ್ಷದ ಶಿಸ್ತು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲು ಶಿಫಾರಸ್ಸು ಮಾಡಿದೆ. ನೋಟಿಸ್ ನೀಡಿದರೂ ಸೂಕ್ತ ಉತ್ತರ ನೀಡದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಚಿವ ಸುಧಾಕರ್ ಕಡಕ್ ಎಚ್ಚರಿಕೆ
ರಾಜೀವ್ ಗೌಡ ಅಮಾನತು ವಿಚಾರವಾಗಿ ಮಾತನಾಡಿದ ಸಚಿವ ಸುಧಾಕರ್ ಅವರು, ಸರ್ಕಾರದ ಕಠಿಣ ನಿಲುವನ್ನು ಸ್ಪಷ್ಟಪಡಿಸಿದರು. 'ಕಳೆದ 12ನೇ ತಾರೀಖು ಸಂಜೆ ನಡೆದ ದೂರವಾಣಿ ಸಂಭಾಷಣೆಯಿಂದ ಅಧಿಕಾರಿಗಳಲ್ಲಿ ತೀವ್ರ ಆತಂಕ ಉಂಟಾಗಿತ್ತು. ಅಧಿಕಾರಿಗಳು ದೂರು ನೀಡಿದ ತಕ್ಷಣವೇ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಅವರ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿದೆ' ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಸಚಿವರು, 'ರಾಜೀವ್ ಗೌಡ ಅವರ ಆಡಿಯೋ ನಾಗರಿಕ ಸಮಾಜ ಮೆಚ್ಚುವಂತದ್ದಲ್ಲ. ಅದು ಅಧಿಕಾರಿಗಳ ಗೌರವಕ್ಕೆ ಧಕ್ಕೆ ತರುವಂತಿತ್ತು. ಅಧಿಕಾರಿಗಳ ಗೌರವ ಉಳಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಆರೋಪಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಪೊಲೀಸರು ಅವರನ್ನು ಬಂಧಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದು, ಶೀಘ್ರವೇ ಬಂಧನವಾಗಲಿದೆ' ಎಂದರು.
ಇನ್ನು ಮುನಿಯಪ್ಪ ಅವರಿಗೆ ರಾಜೀವ್ ಗೌಡ ಆತ್ಮೀಯರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, 'ಮುನಿಯಪ್ಪ ಅವರಿಗೆ ಅವರ ಮೇಲೆ ವೈಯಕ್ತಿಕ ಆತ್ಮೀಯತೆ ಇರಬಹುದು. ಆದರೆ ಅದರರ್ಥ ಮುನಿಯಪ್ಪ ಅವರು ರಾಜೀವ್ ಗೌಡ ಪರವಾಗಿದ್ದಾರೆ ಎಂದಲ್ಲ. ಕಾನೂನು ತನ್ನ ಕೆಲಸ ಮಾಡುತ್ತದೆ' ಎಂದು ಸ್ಪಷ್ಟಪಡಿಸಿದರು.

