ಮೈಸೂರು(ಜೂ.07): ಕೆ.ಆರ್‌. ನಗರ ಪಟ್ಟಣದ ಬ್ಯಾಂಕ್‌ ವ್ಯವಸ್ಥಾಪಕರೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಘಟನೆ ಪಟ್ಟಣದ ಜನತೆಯನ್ನು ಚಿಂತೆಗೀಡುಮಾಡಿದೆ.

ಪಟ್ಟಣದ ಮೈಸೂರು ರಸ್ತೆಯಲ್ಲಿನ ಇಂಡಿಯನ್‌ ಓವರ್‌ ಸೀಸ್‌ ಬ್ಯಾಂಕ್‌ ವ್ಯವಸ್ಥಾಪಕರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ ಮತ್ತು ಬ್ಯಾಂಕ್‌ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳನ್ನು ಸೀಲ್‌ ಮಾಡಲಾಗಿದೆ. ಬ್ಯಾಂಕ್‌ನ ನಾಲ್ಕು ಮಂದಿ ಸಿಬ್ಬಂದಿಯ ಗಂಟಲು ದ್ರವದ ಮಾದರಿ ಪಡೆದು ಪರೀಕ್ಷೆಗೆ ಕಳೆದ ಕಳುಹಿಸಿ ಎಲ್ಲರನ್ನು ಹೋಂ ಕ್ವಾರೈಂಟನ್‌ ಮಾಡಲಾಗಿದೆ.

ಕಟೀಲು ದೇವಳ, ಉಡುಪಿ ಕೃಷ್ಣ ಮಠ ನಾಳೆ ತೆರೆಯುವುದಿಲ್ಲ

ಪಟ್ಟಣದ ಕನಕ ಬಡಾವಣೆಯಲ್ಲಿ ವಾಸವಾಗಿರುವ ಇವರು ಜೂ. 3ರಂದು ರಜೆ ಮೇಲೆ ಊರಿಗೆ ತೆರಳಲು ಸಾರಿಗೆ ಸಂಸ್ಥೆ ಬಸ್‌ ಮೂಲಕ ಮೈಸೂರಿಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಬೆಂಗಳೂರಿನಲ್ಲಿರುವ ಸ್ನೇಹಿತರೊಬ್ಬರ ಮನೆಯಲ್ಲಿ ತಂಗಿದ್ದು ಜೂ. 4 ರಂದು ಬೆಳಗ್ಗೆ ಸ್ನೇಹಿತನ ದ್ವಿಚಕ್ರ ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮಧುರೈಗೆ ಪ್ರಯಾಣ ಮಾಡಿದ್ದಾರೆ. ಮಧುರೈ ನಿಲ್ದಾಣದಲ್ಲಿ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಕೊರೋನಾ ಸೋಂಕು ಇರುವುದು ಧೃಢಪಟ್ಟಿದೆ.

ಕೂಡಲೇ ಅವರನ್ನು ಕನ್ಯಾಕುಮಾರಿಯಲ್ಲಿರುವ ನಾಗರಕೋಯಿಲ್‌ ಆಸ್ಪತ್ರೆಗೆ ದಾಖಲಿಸಿರುವ ಅಲ್ಲಿನ ಅಧಿಕಾರಿಗಳು ಐಸೋಲೇಷನಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಈ ವಿಷಯ ಜಿಲ್ಲಾಡಳಿತದ ಮೂಲಕ ತಿಳಿಯುತ್ತಿದ್ದಂತೆಯೇ ತಾಲೂಕಿನ ಅಧಿಕಾರಿಗಳು ಪಟ್ಟಣದ ಬ್ಯಾಂಕ್‌ ಶಾಖೆಯನ್ನು ಸೀಲ್‌ ಮಾಡಿ ಔಷಧ ಸಿಂಪಡಿಸಿ, ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳನ್ನು ಕೂಡ ಸೀಲ್‌ ಮಾಡಿದ್ದಾರೆ.

ಉಡುಪಿ: ರಾ.ಹೆ.ಮೇಲ್ಸೇತುವೆಯಲ್ಲಿ ಪೇಜಾವರ ಶ್ರೀ ಹೆಸರಿನ ಫಲಕ!

ಬ್ಯಾಂಕ್‌ನ ಎಲ್ಲ ಸಿಬ್ಬಂದಿಯನ್ನು ಪರೀಕ್ಷಿಸಿ ಹೋಂ ಕ್ವಾರೈಂಟನ್‌ ಮಾಡಿರುವ ಅಧಿಕಾರಿಗಳು, ವ್ಯವಸ್ಥಾಪಕರು ವಾಸವಿದ್ದ ಮನೆ ಹಾಗೂ ಅಕ್ಕಪಕ್ಕದ ನಿವಾಸಿಗಳನ್ನು ಪರೀಕ್ಷಿಸುತ್ತಿದ್ದು ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪಟ್ಟಣದ ಟೀ, ಕಾಫಿ, ಗ್ರೀನ್‌ಟೀ ಪ್ರಿಯರಿಗೆ ಈ ಘಟನೆ ದಿಗಿಲು ಬಡಿಯುವಂತೆ ಮಾಡಿದೆ. ಕಾರಣ ಬ್ಯಾಂಕ್‌ನ ಕೆಳ ಅಂತಸ್ತಿನಲ್ಲಿದ್ದ ಒಂದು ಟೀ ಕ್ಯಾಂಟೀನ್‌ ಕೊರೊನಾ ಸಂದರ್ಭದಲ್ಲಿಯೂ ಬಾಗಿಲು ಮುಚ್ಚಿರಲಿಲ್ಲ. ಇದೇ ಟೀ ಕ್ಯಾಂಟೀನ್‌ನಿಂದ ಪ್ರತಿದಿನ ಬ್ಯಾಂಕ್‌ ಹಾಗೂ ಅಕ್ಕಪಕ್ಕದ ಅಂಗಡಿಗಳಿಗೆ ಟೀ, ಕಾಫಿ ಹಾಗೂ ಇತರೆ ಪಾನೀಯ ಪೂರೈಸಲಾಗುತ್ತಿತ್ತು. ಇಲ್ಲಿ ಪ್ರತಿದಿನ ನೂರಾರು ಮಂದಿ ಗ್ರಾಹಕರು ಅದರಲ್ಲೂ ಯುವಕರು ಹೆಚ್ಚು ಟೀ, ಕಾಫಿ ಕುಡಿಯಲು ಬರುತ್ತಿದ್ದರು. ಈಗ ಬ್ಯಾಂಕ್‌ ವ್ಯವಸ್ಥಾಪಕರಿಗೆ ಕೊರೋನಾ ಬಂದಿರುವುದರಿಂದ ಯುವಕರಿಗೆ ದಿಗಿಲು ಬಡಿದಂತಾಗಿದೆ.

 

ದಕ್ಷಿಣ ಕನ್ನಡ: ಕೊರೋನಾ ಸಮಯದಲ್ಲಿ 40 ಡೆಂಘೀ ಕೇಸ್‌!

 

ಈಗಾಗಲೇ ಪಟ್ಟಣದ ಐಒಬಿ ಬ್ಯಾಂಕ್‌ ವ್ಯವಸ್ಥಾಪಕರಿಗೆ ಕೊರೊನಾ ಸೋಂಕು ಇರುವ ಬಗ್ಗೆ ಮಾಹಿತಿ ಬಂದಿದ್ದು, ಬ್ಯಾಂಕ್‌ ಮತ್ತು ಅಕ್ಕಪಕ್ಕದ ಅಂಗಡಿ ಮುಂಗಟ್ಟಿಗೆ ಔಷಧಿ ಸಿಂಪಡಿಸಿ ಸೀಲ್‌ ಮಾಡಲಾಗಿದ್ದು ಬ್ಯಾಂಕ್‌ ಸಿಬ್ಬಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತಿದೆ. ಎಲ್ಲರನ್ನೂ ಹೋಂ ಕ್ವಾರೈಂಟನಲ್ಲಿಡಲಾಗಿದೆ. ಅದರ ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಮಹೇಂದ್ರಪ್ಪ ತಿಳಿಸಿದ್ದಾರೆ.