ದಕ್ಷಿಣ ಕನ್ನಡ: ಕೊರೋನಾ ಸಮಯದಲ್ಲಿ 40 ಡೆಂಘೀ ಕೇಸ್!
ದ.ಕ. ಜಿಲ್ಲೆಯಲ್ಲೀಗ ಒಂದು ಕಡೆ ಕೊರೋನಾ, ಮತ್ತೊಂದೆಡೆ ಮಾರಣಾಂತಿಕ ಡೆಂಘೀ ಕಾಟವೂ ಆರಂಭವಾಗಿದೆ. ಕೊರೋನಾ ಲಾಕ್‌ಡೌನ್‌ನ ಬಿರುಬೇಸಗೆಯ ಎರಡು ತಿಂಗಳ ಅವಧಿಯಲ್ಲೇ ಜಿಲ್ಲೆಯಲ್ಲಿ ಬರೋಬ್ಬರಿ 40ರಷ್ಟುಡೆಂಘೀ ಪ್ರಕರಣಗಳು ದಾಖಲಾಗಿದ್ದು ಆತಂಕ ಸೃಷ್ಟಿಸಿದೆ.
ಮಂಗಳೂರು(ಜೂ.07): ದ.ಕ. ಜಿಲ್ಲೆಯಲ್ಲೀಗ ಒಂದು ಕಡೆ ಕೊರೋನಾ, ಮತ್ತೊಂದೆಡೆ ಮಾರಣಾಂತಿಕ ಡೆಂಘೀ ಕಾಟವೂ ಆರಂಭವಾಗಿದೆ. ಕೊರೋನಾ ಲಾಕ್‌ಡೌನ್‌ನ ಬಿರುಬೇಸಗೆಯ ಎರಡು ತಿಂಗಳ ಅವಧಿಯಲ್ಲೇ ಜಿಲ್ಲೆಯಲ್ಲಿ ಬರೋಬ್ಬರಿ 40ರಷ್ಟುಡೆಂಘೀ ಪ್ರಕರಣಗಳು ದಾಖಲಾಗಿದ್ದು ಆತಂಕ ಸೃಷ್ಟಿಸಿದೆ.
ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಡೆಂಘೀ ಬೇಸಗೆಯಲ್ಲೇ ತನ್ನ ಅಟ್ಟಹಾಸ ಶುರುವಿಟ್ಟುಕೊಂಡಿದ್ದು, ಮಳೆಗಾಲದ ಪರಿಸ್ಥಿತಿ ಇನ್ನಷ್ಟುಕಠಿಣವಾಗುವ ಮುನ್ಸೂಚನೆ ನೀಡಿದೆ. ಪ್ರಸ್ತುತ ಜಿಲ್ಲೆಯಲ್ಲಿ ಇದುವರೆಗೆ 147 ಕೊರೋನಾ ಪ್ರಕರಣಗಳಿದ್ದರೆ, ಜನವರಿಯಿಂದ ಈವರೆಗೆ 80 ಡೆಂಘೀ ಪ್ರಕರಣಗಳು ದಾಖಲಾಗಿವೆ. ಈ ಎರಡು ಮಹಾ ಸೋಂಕುಗಳು ಪೈಪೋಟಿಗೆ ಬಿದ್ದು ಜನರನ್ನು ಕಾಡಲು ಶುರುವಿಟ್ಟಿವೆ. ಮಳೆಗಾಲದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡದಿದ್ದರೆ ಕೊರೋನಾಕ್ಕಿಂತ ಡೆಂಘೀ ಸೋಂಕಿತರೇ ಅಧಿಕವಾಗಿ ಜನರ ಜೀವ ಹಿಂಡುವುದಂತೂ ಖಚಿತ.
ಬೆಟ್ಟಂಪಾಡಿ ಹಾಟ್‌ಸ್ಪಾಟ್!:
ಪ್ರಸ್ತುತ ಪುತ್ತೂರಿನ ಬೆಟ್ಟಂಪಾಡಿ ಗ್ರಾಮ ಜಿಲ್ಲೆಯಲ್ಲೇ ಡೆಂಘೀ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿದೆ. ಕಳೆದ ಒಂದೂಕಾಲು ತಿಂಗಳಲ್ಲಿ 15 ಡೆಂಘೀ ಕೇಸ್‌ಗಳು ಈ ಗ್ರಾಮವೊಂದರಲ್ಲೇ ವರದಿಯಾಗಿದ್ದು, ಇನ್ನಷ್ಟುಏರಿಕೆಯಾಗುವ ಸಾಧ್ಯತೆಯಿದೆ. ಕಳೆದೊಂದು ವಾರದಲ್ಲೇ ಬೆಟ್ಟಂಪಾಡಿಯಲ್ಲಿ ನಾಲ್ಕೈದು ಹೊಸ ಡೆಂಘೀ ಪ್ರಕರಣಗಳು ಪತ್ತೆಯಾಗಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.
ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು:
ಜನವರಿಯಿಂದ ಇದುವರೆಗೆ ಪತ್ತೆಯಾದ 80 ಡೆಂಘೀ ಪ್ರಕರಣಗಳ ಪೈಕಿ ಶೇ.99ರಷ್ಟುಗ್ರಾಮೀಣ ಪ್ರದೇಶಗಳಲ್ಲಿ ಅದೂ ತೋಟಕ್ಕೆ ತಾಗಿಕೊಂಡ ಮನೆಗಳಲ್ಲೇ ವರದಿಯಾಗಿವೆ. ಬೆಟ್ಟಂಪಾಡಿ ಹೊರತುಪಡಿಸಿ ಇದೀಗ ಬೆಳ್ತಂಗಡಿಯ ನೆರಿಯವೂ ಹಾಟ್‌ಸ್ಪಾಟ್‌ನತ್ತ ತೆರಳುತ್ತಿದೆ, ಸುಳ್ಯ, ಪುತ್ತೂರು, ಬಂಟ್ವಾಳದಲ್ಲೂ ಅಲ್ಲಲ್ಲಿ ಚದುರಿದಂತೆ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವಿಶೇಷವೆಂದರೆ, ಕಳೆದ ವರ್ಷ ದೃಢಪಟ್ಟ1539 ಡೆಂಘೀ ಪ್ರಕರಣಗಳ ಪೈಕಿ ಅತೀಹೆಚ್ಚು ಪ್ರಕರಣಗಳು ಕಂಡುಬಂದ ಮಂಗಳೂರು ನಗರದಲ್ಲಿ ಈ ವರ್ಷ ಇದುವರೆಗೆ ಪತ್ತೆಯಾದದ್ದು ಒಂದು ಪ್ರಕರಣ ಮಾತ್ರ- ನಗರದ ಹೊರವಲಯದ ಕೊಂಪದವಿನಲ್ಲಿ.
ತೋಟ ನೀರಿನಿಂದ ಸೋಂಕು: ‘ಗ್ರಾಮೀಣ ಪ್ರದೇಶಗಳಲ್ಲಿ ತೋಟಗಳಿಗೆ ನೀರು ಹಾಯಿಸಲು ಸ್ರಿ$್ಪಂಕ್ಲರ್ ಬಳಕೆ ಮಾಡುವುದರಿಂದ ಅಲ್ಲಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾದದ್ದೇ ಬೇಸಗೆಯಲ್ಲಿ ಸೋಂಕು ಹೆಚ್ಚಳವಾಗಲು ಕಾರಣ. ಆ ಪ್ರದೇಶಗಳಿಗೆಲ್ಲ ಭೇಟಿ ನೀಡಿ ಜನರಿಗೆ ಮಾಹಿತಿ ಸೇರಿದಂತೆ ಸೊಳ್ಳೆ ನಿರ್ಮೂಲನಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್ ತಿಳಿಸಿದ್ದಾರೆ.
ವಿಮಾನ ನಿಲ್ದಾಣದ 6 ಸಿಬ್ಬಂದಿ ಸೇರಿ 24 ಮಂದಿಗೆ ಸೋಂಕು
ಒಂದರ್ಥದಲ್ಲಿ ಕೊರೋನಾ ಆದರೂ ಆಗಬಹುದು, ಡೆಂಘೀ ಬಂದರೆ ಕಷ್ಟಎಂದು ಆರೋಗ್ಯ ಇಲಾಖೆ ಅಧಿಕಾರಿಗಳೇ ಹೇಳುವಂತಾಗಿದೆ. ಕೊರೋನಾ ಸೋಂಕಿತರಲ್ಲಿ ಶೇ.90ಕ್ಕೂ ಅಧಿಕ ಮಂದಿ ರೋಗ ಲಕ್ಷಣಗಳಿಲ್ಲದೆ, ಹೆಚ್ಚು ಕಷ್ಟಪಡದೆ ಗುಣಮುಖರಾಗುತ್ತಿದ್ದಾರೆ. ಆದರೆ ಡೆಂಘೀ ಬಂದರೆ ತುಸು ನಿರ್ಲಕ್ಷ್ಯ ಮಾಡಿದರೂ ಸಾವು ಕಟ್ಟಿಟ್ಟಬುತ್ತಿ. ಪ್ರತಿ ರೋಗಿಯನ್ನೂ ಹೈರಾಣು ಮಾಡುತ್ತದೆ. ಕಳೆದ ವರ್ಷ ಡೆಂಘೀಯಿಂದಾಗಿಯೇ ಜಿಲ್ಲೆಯಲ್ಲಿ ಐವರು ಮೃತಪಟ್ಟಿದ್ದರೆ, ಶಂಕಿತ ಡೆಂಘೀಗೆ 20ಕ್ಕೂ ಅಧಿಕ ಬಲಿಯಾಗಿತ್ತು. ಕೊರೋನಾ ಜಿಲ್ಲೆಯಲ್ಲಿ ಈವರೆಗೆ ಏಳು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಕಳೆದ ವರ್ಷದಂತೆ ಡೆಂಘೀ ಪ್ರಕರಣಗಳು ನೂರಾರು ಸಂಖ್ಯೆಯಲ್ಲಿ ಬಂದರೆ ಕೊರೋನಾಕ್ಕಿಂತ ಡೆಂಘೀಯೇ ಪೆಡಂಭೂತವಾಗಿ ಕಾಡಲಿದೆ.
ಇನ್ನೂ ಎಚ್ಚೆತ್ತಿಲ್ಲ ಜನ!
ಕಳೆದ ವರ್ಷದ ಡೆಂಘೀ ಪರಿಸ್ಥಿತಿಯಿಂದ ಪಾಠ ಕಲಿತಿರುವ ಆರೋಗ್ಯ ಇಲಾಖೆ ಈ ಬಾರಿ ಡೆಂಘೀ ವಿರುದ್ಧ ಸಮರ ಸನ್ನದ್ಧವಾಗಿ ಈಗಾಗಲೇ ಫೀಲ್ಡಿಗಿಳಿದಿದೆ. ಮನೆ ಮನೆಗಳಿಗೆ ತೆರಳಿ ಸೊಳ್ಳೆ ತಾಣಗಳನ್ನು ಪತ್ತೆಹಚ್ಚಿ ನಿರ್ಮೂಲನೆ ಮಾಡುತ್ತಿದೆ. ಆದರೆ ಜನರು ಇನ್ನೂ ಪಾಠ ಕಲಿತಿಲ್ಲ. ಇದಕ್ಕೆ ಸಾಕ್ಷಿಯಾಗಿ ಕಳೆದ ವರ್ಷದ ಹಾಟ್ ಸ್ಪಾಟ್ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡುತ್ತಿದ್ದು, ಎಲ್ಲೆಡೆಯೂ ಲಾರ್ವ ಉತ್ಪತ್ತಿ ತಾಣಗಳನ್ನು ಪತ್ತೆಹಚ್ಚಿದ್ದಾರೆ. ಕಳೆದ ವರ್ಷ ಡೆಂಘೀ ಮಹಾಮಾರಿ ರಣಕೇಕೆ ಹಾಕಿದರೂ ಜನರು ಜಾಗೃತರಾಗಿಲ್ಲ. ಕೂಡಲೆ ಎಲ್ಲರೂ ನೀರು ನಿಲ್ಲುವ ತಾಣಗಳನ್ನು ನಿರ್ಮೂಲನ ಮಾಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
-ಸಂದೀಪ್ ವಾಗ್ಲೆ