ಬಂಗಾರಪೇಟೆ: ಬಿಸಿಲಿನ ತಾಪಕ್ಕೆ ಕುಸಿದ ಅಂತರ್ಜಲ
ಬಿಸಿಲಿನ ತಾಪಮಾನ ದಿನೇ ದಿನೆ ಹೆಚ್ಚಾಗುತ್ತಿದ್ದಂತೆ ಭೂಮಿಯ ಒಡಲಿನ ತೇವಾಂಶ ಸಹ ದಿನೇದಿನೇ ಕುಸಿಯುತ್ತಿರುವುದರಿಂದ ಕುಡಿಯುವ ನೀರಿನ ಅಭಾವ ಗ್ರಾಮೀಣ ಪ್ರದೇಶದಲ್ಲಿ ಆರಂಭವಾಗಿದ್ದು, ಅದು ಬೃಹತ್ ಸಮಸ್ಯೆಯಾಗಿ ಬದಲಾಗುವ ಮುನ್ನವೇ ತಾಲೂಕು ಆಡಳಿತ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕಿದೆ.
ಬಂಗಾರಪೇಟೆ : ಬಿಸಿಲಿನ ತಾಪಮಾನ ದಿನೇ ದಿನೆ ಹೆಚ್ಚಾಗುತ್ತಿದ್ದಂತೆ ಭೂಮಿಯ ಒಡಲಿನ ತೇವಾಂಶ ಸಹ ದಿನೇದಿನೇ ಕುಸಿಯುತ್ತಿರುವುದರಿಂದ ಕುಡಿಯುವ ನೀರಿನ ಅಭಾವ ಗ್ರಾಮೀಣ ಪ್ರದೇಶದಲ್ಲಿ ಆರಂಭವಾಗಿದ್ದು, ಅದು ಬೃಹತ್ ಸಮಸ್ಯೆಯಾಗಿ ಬದಲಾಗುವ ಮುನ್ನವೇ ತಾಲೂಕು ಆಡಳಿತ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕಿದೆ.
ತಾಲೂಕಿನಲ್ಲಿ ಮಳೆಯ ಸುಳಿವೇ ಇಲ್ಲದ ಕಾರಣ ಅಲ್ಪಸ್ವಲ್ಪ ನೀರು ಶೇಖರಣೆಯಾಗಿದ್ದ ಕೆರೆಗಳೆಲ್ಲಾ ಈಗ ಖಾಲಿ ಖಾಲಿಯಾಗುತ್ತಿವೆ. ಕೆರೆಗಳಲ್ಲಿ ನೀರಿದ್ದಾಗ ಅಂತರ್ಜಲ ಸಮೃದ್ಧವಾಗಿತ್ತು. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರಲಿಲ್ಲ. ತಾಲೂಕಿನ ಜನರಿಗೆ ಈಗ ನಿದಾನವಾಗಿ ನೀರಿನ ಸಮಸ್ಯೆ ಕಾಡಲಾರಂಭಿಸಿದೆ. ಪಟ್ಟಣ ನಾಗರೀಕರಿಗೆ ಸದ್ಯಕ್ಕೆ ನೀರಿನ ಅಭಾವವಿಲ್ಲ, ಯರಗೋಳ್ ಡ್ಯಾಂನಲ್ಲಿ ನೀರು ಇರುವತನಕ ಪಟ್ಟಣ ಜನರಿಗೆ ಚಿಂತೆಯಿಲ್ಲ, ಅದು ಖಾಲಿಯಾದರೆ ಇಲ್ಲಿಯೂ ಅಭಾವ ಕಾಡಲಿದೆ.
ನಾಲ್ಕು ಗ್ರಾಮಗಳಲ್ಲಿ ನೀರಿಲ್ಲ
ಯರಗೋಳ್ ನೀರನ್ನು ಪಟ್ಟಣದ ಜನರಿಗೆ ಹಾಗೂ ದಾರಿ ಮಧ್ಯೆ ಸಿಗುವ ೪೦ಹಳ್ಳಿಗಳಿಗೂ ಸರಬರಾಜು ಮಾಡುವುದಾಗಿ ಈ ಮೊದಲು ಜಿಲ್ಲಾಡಳಿತ ಹೇಳಿತ್ತು. ಆದರೆ ಬರೀ ಪಟ್ಟಣ ಜನರಿಗೆ ಮಾತ್ರ ಯರಗೋಳ್ ನೀರು ಸವಿಯುವ ಭಾಗ್ಯ ಲಭಿಸಿದೆ, ಹಳ್ಳಿ ಜನರಿಗೆ ಇನ್ನೂ ದಕ್ಕಿಲ್ಲ. ಈಗಾಗಲೇ ತಾಲೂಕು ಆಡಳಿತ ಪ್ರಕಾರ ಗ್ರಾಮೀಣ ಭಾಗದಲ್ಲಿ ನಾಲ್ಕು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಅಂತರ್ಜಲ ಕುಸಿದಿರುವ ಕಾರಣ ಹಾಗೂ ಕೆರೆಗಳಲ್ಲಿ ನೀರು ಖಾಲಿಯಾಗಿರುವುದರಿಂದ ರಿಬೋರ್ ಮಾಡಿದರೂ ನೀರು ಮಾತ್ರ ಲಭ್ಯವಾಗುತ್ತಿಲ್ಲ.
ಖಾಸಗಿ ಮಾಲೀಕರಿಗೆ ನೀರು ಪೂರೈಸಲು ಪಂಚಾಯತಿ ಮುಂದಾಗಿದೆ, ಆದರೆ ಖಾಸಗಿ ಬೋರ್ ಮಾಲೀಕರು ನೀರು ಪೂರೈಸಲು ಹಿಂದೇಟು ಹಾಕುತಿದ್ದಾರೆ. ಈಹಿಂದೆ ಪೂರೈಸಿದ ಟ್ಯಾಂಕರ್ ನೀರಿನ ಬಿಲ್ ಕೆಲವು ಕಡೆ ಸಮರ್ಪಕವಾಗಿ ಪಾವತಿಸದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ನೀರಿಲ್ಲದೆ ಪ್ರಾಣಿಗಳ ಪಾಡು ಹೇಳ ತೀರದಾಗಿದೆ. ಒಂದು ಕಡೆ ಸುಡುವ ಬಿಸಿಲು, ಮತ್ತೊಂದೆಡೆ ನೀರಿನ ಕೊರತೆ. ಕೆಲವು ಕಡೆ ಪ್ರಾಣಿ, ಪಕ್ಷಗಳಿಗೆ ನೀರು ಸಿಗಲೆಂದು ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ.ಆದರೆ ನೀರಿಲ್ಲದ ಕಾರಣ ತೊಟ್ಟಿಗಳು ಖಾಲಿಯಾಗಿವೆ.
ಹೈನೋದ್ಯಮಕ್ಕೆ ಹಿನ್ನಡೆ
ಮೇವು ಹಾಗೂ ನೀರಿನ ಅಭಾವದಿಂದಾಗಿ ಹೂನೋದ್ಯಮಕ್ಕೂ ಹೊಡೆತ ಬಿದ್ದಿದೆ, ಎಲ್ಲಿಯೂ ಮೇವು ಸಿಗದ ಕಾರಣ ಹಸುಗಳಿಗೆ ಸಮಯಕ್ಕೆ ಮೇವು ಪೂರೈಸಲು ರೈತನಿಂದ ಆಗದೆ ಹಸುಗಳನ್ನೂ ಮಾರುವಂತಾಗಿದೆ. ಗ್ರಾಮಗಳಲ್ಲಿ ನಿರ್ಮಾಣ ಮಾಡಿರುವ ಶುದ್ಧ ನೀರಿನ ಘಟಗಳಿಗೂ ನೀರು ಪೂರೈಸಲು ಸಾಧ್ಯವಾಗದೆ ಅನೇಕ ಕಡೆ ಬಂದ್ ಮಾಡಲಾಗಿದೆ. ಇಷ್ಟು ದಿನ ಲೋಕಸಭೆ ಚುನಾವಣೆಯಲ್ಲಿ ಮೈಮರೆತಿದ್ದ ಜನಪ್ರತಿನಿಧಿಗಳು ಇನ್ನಾದರೂ ಇತ್ತ ಗಮನಹರಿಸಿ ಕೆಸಿ ವ್ಯಾಲಿ ನೀರನ್ನು ಕೆರೆಗಳಿಗೆ ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸಲು ಕ್ರಮವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.