ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆಯಲ್ಲಿ,ನಡೆದ ಉತ್ಖನನದಲ್ಲಿ 5 ಸಾವಿರ ವರ್ಷಗಳಷ್ಟು ಹಳೆಯದಾದ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ಇದರೊಂದಿಗೆ ನವಶಿಲಾಯುಗದ ಜನರ ಆಯುಧಗಳು ಮತ್ತು ವಿಶಿಷ್ಟ ಶವಸಂಸ್ಕಾರ ಪದ್ಧತಿಯ ಕುರುಹುಗಳು ದೊರೆತಿದ್ದು, ಇದು ಕರ್ನಾಟಕದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದೆ.

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ರಾಶಿಗಳು, ಲೋಹಗಳು ಸೇರಿದಂತೆ ವಿವಿಧ ಅಚ್ಚರಿಗಳ ಬಗ್ಗೆ ಇನ್ನೂ ತನಿಖೆ ನಡೆಯುತ್ತಿರುವ ಸಮಯದಲ್ಲಿಯೇ ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆಯೀಗ ಸದ್ದು ಮಾಡುತ್ತಿದೆ. ಇಲ್ಲಿ ಉತ್ಖನನ ನಡೆಸುವ ಸಂದರ್ಭದಲ್ಲಿ ಅಚ್ಚರಿಯ ಆಗರವೇ ಕಂಡುಬಂದಿದೆ. 5 ಸಾವಿರ ವರ್ಷಗಳ ಹಳೆಯ ಅಸ್ಥಿಪಂಜರವೂ ಪತ್ತೆಯಾಗಿರುವುದು ಮಾತ್ರವಲ್ಲದೇ, ನವಶಿಲಾಯುಗದ ಜನರ ಕುರುಹುಗಳು, ಅವರ ನಿತ್ಯ ಬಳಕೆಗೆ ಬಳಸುತ್ತಿದ್ದ ಆಯುಧಗಳು ಸೇರಿದಂತೆ ಇನ್ನೂ ಹಲವು ವಸ್ತುಗಳು ಪತ್ತೆಯಾಗಿದ್ದು, ನಮ್ಮ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೆಲಸ ಸಂಶೋಧಕರಿಂದ ಶುರುವಾಗಿದೆ. ಒಟ್ಟಿನಲ್ಲಿ ಕರ್ನಾಟಕದ ಇತಿಹಾಸಕಾರರಿಗೆ ಇದು ಅದ್ಭುತ ಅಧ್ಯಯನದ ವಿಷಯವಾಗಿದ್ದು, ಸಹಸ್ರಾರು ವರ್ಷಗಳ ಹಿಂದೆ ಇದ್ದ ಜನರು, ಅವರ ಆಚರಣೆಗಳ ಬಗ್ಗೆ ತಿಳಿಯುವ ಕುತೂಹಲ ಹೆಚ್ಚಾಗಿದೆ.

5 ಸಾವಿರ ವರ್ಷಗಳ ಹಿಂದಿನ ಅಸ್ತಿಪಂಜರ

ಇಲ್ಲಿ 5 ಸಾವಿರ ವರ್ಷಗಳ ಹಿಂದಿನ ಮಾನವ ಅಸ್ತಿಪಂಜರ ಮಾತ್ರವಲ್ಲದೇ ಕೈ ಕೊಡಲಿ, ಪ್ರಾಣಿಗಳ ಹಲ್ಲು, ಒರಳು, ಗುಂಡು ಸೇರಿದಂತೆ ಮಹತ್ವದ ಕುರುಹುಗಳು ಸಿಕ್ಕಿರುವ ಬಗ್ಗೆ ಅಮೆರಿಕದ ಹಾರ್ಟ್‌ ವಿಕ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನಮಿತಾ ಎಸ್‌.ಸುಗಂಧಿ ತಿಳಿಸಿದ್ದಾರೆ. ಇವರ ನೇತೃತ್ವದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ನವಶಿಲಾಯುಗ ಸಂಸ್ಕೃತಿಯ ಶಿಲಾಯುಧ ಕಾರ್ಖಾನೆಯಾಗಿದ್ದ ಇಲ್ಲಿನ ನೆಲೆಗಳು ಅಧ್ಯಯನಾಸಕ್ತರಿಗೆ ಸೂಕ್ತ ಸ್ಥಳವಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದೊಂದು ವಾರದಿಂದ ಇಲ್ಲಿ ಉತ್ಖನನ ಕಾರ್ಯ ನಡೆಯುತ್ತಿದ್ದು, ಆರಂಭದಲ್ಲಿ ಮೂಳೆಗಳು ಕಾಣಿಸಿಕೊಂಡಿದ್ದವು. ಬಳಿಕ ಸಂಶೋಧನಾ ತಂಡ ಮತ್ತಷ್ಟು ಆಳವಾಗಿ ಅಗೆದಾಗ, ಸುಮಾರು 5.5 ಅಡಿ ಉದ್ದದ ಸಂಪೂರ್ಣ ಮಾನವ ಅಸ್ಥಿಪಂಜರ ಸಿಕ್ಕಿದ್ದು, ಇದು ಇನ್ನಷ್ಟು ಕೌತುಕಕ್ಕೆ ಕಾರಣವಾಗಿದೆ.

ಶವ ಹೂತಿಟ್ಟ ಕ್ರಮ ವಿಚಿತ್ರ

ಪ್ರಾಧ್ಯಾಪಕಿ ನಮಿತಾ ಅವರು ಹೇಳುವಂತೆ, ಬಳ್ಳಾರಿಯ ತೆಕ್ಕಲಕೋಟೆ ಮತ್ತು ಸುತ್ತಲಿನ ಪ್ರದೇಶದಲ್ಲಿ ಇದಾಗಲೇ ಸಾಕಷ್ಟು ಅಧ್ಯಯನ ಮಾಡಲಾಗಿದೆ. ಇಲ್ಲಿ ಪ್ರಾಗೈತಿಹಾಸಿಕ ಕಾಲದ ಶಿಲಾಯುಗ, ನವ ಶಿಲಾಯುಗ ಹಾಗೂ ಲೋಹಯುಗದ ಕುರುಹುಗಳು ಯಥೇಚ್ಛವಾಗಿ ಕಾಣಸಿಗುತ್ತವೆ. ಇಲ್ಲಿ ಸಿಗುವ ಕುರುಹುಗಳು ನಮ್ಮನ್ನು 5 ಸಾವಿರ ವರ್ಷಗಳ ಹಿಂದಿನ ಜೀವನವನ್ನು ಅಧ್ಯಯನ ಮಾಡಲು ಸಹಕರಿಸುತ್ತದೆ. ನವಶಿಲಾಯುಗ ಸಂಸ್ಕೃತಿಯ ಶಿಲಾಯುಧ ಕಾರ್ಖಾನೆಯಾಗಿದ್ದ ಇಲ್ಲಿನ ನೆಲೆಗಳು ಅಧ್ಯಯನಾಸಕ್ತರಿಗೆ ಸೂಕ್ತ ಸ್ಥಳವಾಗಿದೆ ಎನ್ನುವುದು. ಸದ್ಯ ಇಲ್ಲಿ ಶವವನ್ನು ಹೂತಿಟ್ಟ ರೀತಿಯು ವಿಶಿಷ್ಟವಾಗಿರುವುದನ್ನು ನೋಡಿದ್ದೇವೆ. ದೇಹದ ಮೇಲೆ ಕಲ್ಲುಗಳನ್ನು ಇಟ್ಟು ಶವ ಸಂಸ್ಕಾರ ಮಾಡಿರುವ ಸ್ಥಿತಿಯಲ್ಲಿ ಈ ಪಳೆಯುಳಿಕೆ ಪತ್ತೆಯಾಗಿದೆ. ಇದು ಆ ಕಾಲದ ಜನರ ಅಂತ್ಯಕ್ರಿಯೆಯ ಸಂಪ್ರದಾಯಗಳು ಮತ್ತು ಧಾರ್ಮಿಕ ನಂಬಿಕೆಗಳ ಬಗ್ಗೆ ವಿವರಿಸುತ್ತದೆ. ಈ ಪಳೆಯುಳಿಕೆಯು ಸಾವಿರಾರು ವರ್ಷಗಳ ಹಿಂದಿನ ಮಾನವ ಜೀವನಶೈಲಿ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಕಾರಿಯಾಗಿದೆ ಎಂದಿದ್ದಾರೆ ನಮಿತಾ.

ವೈಜ್ಞಾನಿಕ ವಿಶ್ಲೇಷಣೆ

ಗ್ರೀಸ್‌ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞರಾಗಿರುವ ಸುಸೈನ್​ ಕ್ರೀಕ್​ ಪ್ಯಾಟ್ರಿಕ್‌ ಸ್ಮಿತ್‌ ಅವರು ಪಳಯುಳಿಕೆ ಸಂರಕ್ಷಣೆ ಹಾಗೂ ಅದರ ಕಾಲಮಾನ ಅಧ್ಯಯನ ಹಾಗೂ ಮಡಕೆಗಳು ಚೂರಾಗಿದ್ದರೂ ಅವುಗಳ ಸಂರಕ್ಷಣೆ ಕುರಿತು ಸಲಹೆ, ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಪಳೆಯುಳಿಕೆಯನ್ನು ಮುಂದಿನ ವೈಜ್ಞಾನಿಕ ವಿಶ್ಲೇಷಣೆ ಮತ್ತು ಕಾರ್ಬನ್ ಡೇಟಿಂಗ್‌ಗೆ ಒಳಪಡಿಸಿದರೆ, ಇದರ ನಿಖರವಾದ ಕಾಲಮಾನ ಮತ್ತು ಆ ವ್ಯಕ್ತಿಯ ಆಹಾರ ಪದ್ಧತಿ, ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ತಂಡದಲ್ಲಿ ಐಐಟಿ ಕಾನ್ಪುರದ ಡಾ.ಯಶಸ್ವಿನಿ ಜಯದೇವಯ್ಯ, ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಜಿ.ರೋಹಿಣಿ ಹಾಗೂ ಅಶೋಕ ಅಬಕಾರಿ ಭಾಗವಹಿಸಿದ್ದಾರೆ.